ಬಿಜೆಪಿ
ಕಲಬುರಗಿ: ‘ಕರ್ನಾಟಕ ರಾಜ್ಯಕ್ಕೆ 6.30 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಅವಶ್ಯಕತೆ ಇದ್ದು, ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್ ಟನ್ ನೀಡಿದೆ. ಉಳಿದ 2.43 ಲಕ್ಷ ಟನ್ ಗೊಬ್ಬರವನ್ನು ರಾಜ್ಯ ಸರ್ಕಾರ ರೈತರಿಗೆ ನೀಡದೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆಯೇ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಮಾಲಿಪಾಟೀಲ ಕಮಲಾಪುರ ಪ್ರಶ್ನಿಸಿದರು.
‘ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ರಸಗೊಬ್ಬರ ದಾಸ್ತಾನು ಶೇಖರಣೆ ಮಾಡಿರುವ ಪರಿಣಾಮ ಜಿಲ್ಲೆಯಲ್ಲಿ ರಸಗೊಬ್ಬರ ಅಭಾವ ಉಂಟಾಗಿದೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಕಾಂಗ್ರೆಸ್ ರೈತ ವಿರೋಧಿ ಸರ್ಕಾರ ಆಗಿದ್ದು, ಬಿಜೆಪಿ ಸರ್ಕಾರ ನೀಡುತ್ತಿದ್ದ ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ್, ಸಿರಿಧಾನ್ಯ ಬೆಳೆಯುವ ರೈತರಿಗೆ ₹ 10 ಸಾವಿರ ಪ್ರೋತ್ಸಾಹಧನ ಈಗ ನೀಡುತ್ತಿಲ್ಲ’ ಎಂದು ಆರೋಪಿಸಿದರು.
ನಾಳೆ ಪ್ರತಿಭಟನೆ: ಕಳೆದ ವರ್ಷ ನೆಟೆರೋಗದಿಂದ ಹಾಳಾದ ತೊಗರಿಗೆ ಬೆಳೆ ಪರಿಹಾರವನ್ನು ಶೀಘ್ರ ರೈತರ ಖಾತೆಗೆ ಜಮಾ ಮಾಡಬೇಕು. ಈ ಬಾರಿ ಬೆಳೆ ವಿಮೆ ಕಟ್ಟುವ ದಿನಾಂಕವನ್ನು ಮುಂದೂಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 31ರಂದು ಕಲಬುರಗಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಗೋಷ್ಠಿಯಲ್ಲಿ ಶಿವಮೂರ್ತಯ್ಯ ಹಿರೇಮಠ, ಕಲ್ಯಾಣರಾವ ಪಾಟೀಲ, ರಾಜು ಜೈನ್, ಶಾಂತಮಲ್ಲಪ್ಪ ಅಚಲೇರಿ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.