ADVERTISEMENT

ವಿಪ್ರ ಸಮುದಾಯ ಅವಹೇಳನ ಪಠ್ಯ ಕೈಬಿಡಲು ಆಗ್ರಹ

ವಿಪ್ರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 17:25 IST
Last Updated 24 ಆಗಸ್ಟ್ 2023, 17:25 IST
ಕಲಬುರಗಿಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದ ಬಳಿ ಗುರುವಾರ ವಿಪ್ರ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು
ಕಲಬುರಗಿಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದ ಬಳಿ ಗುರುವಾರ ವಿಪ್ರ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಪ್ರಸಕ್ತ ವರ್ಷದ 8ನೇ ತರಗತಿ ಕನ್ನಡ ಪಠ್ಯದಲ್ಲಿ ವಿಪ್ರ ಸಮುದಾಯವನ್ನು ಅವಹೇಳನ ಮಾಡುವ ಪಾಠವನ್ನು ಸೇರಿಸಲಾಗಿದ್ದು, ಅದನ್ನು ತೆಗೆದು ಹಾಕುವಂತೆ ಒತ್ತಾಯಿಸಿ ವಿಪ್ರ ಸಂಘಟನೆಗಳ ಒಕ್ಕೂಟದಿಂದ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದ ಬಳಿ ಗುರುವಾರ ಪ್ರತಿಭಟನೆ ಮಾಡಲಾಯಿತು.

ಸಂಘಟನೆ ಮುಖಂಡರು, ‘ವಿಜಯಮಾಲಾ ರಂಗನಾಥ್‌ ಅವರು ಬರೆದಿರುವ ಬ್ಲಡ್‌ಗ್ರೂಪ್‌ ಎಂಬ ಪಾಠದಲ್ಲಿ ವಿಪ್ರ ಸಮುದಾಯದ ಅವಹೇಳನ ಮಾಡುವ ಅಂಶವಿದ್ದು, ಇದರಿಂದ ಬ್ರಾಹ್ಮಣ ಸಮುದಾಯದ ಮನಸುಗಳಿಗೆ ನೋವು ತಂದಿದೆ. ಅವಹೇಳನ ಮಾಡಿರುವುದರಿಂದ ಶಾಲೆಯಲ್ಲಿ ಓದುವ ಮಕ್ಕಳಿಗೆ ಸಮುದಾಯದ ಬಗ್ಗೆ ಕೆಟ್ಟ ಭಾವನೆ ಮೂಡಿಸುವ ಸಾಧ್ಯತೆ ಇರುತ್ತವೆ’ ಎಂದು ಹೇಳಿದರು.

‘ಜಾತ್ಯತೀತ ದೇಶದಲ್ಲಿ ಜಾತಿ–ಧರ್ಮಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಬೇಕು. ಆದರೆ ನಮ್ಮ ಪಠ್ಯಪುಸ್ತಕಗಳನ್ನು ನೋಡಿದಾಗ ಜಾತಿ–ಪಂಗಡಗಳಿಗೆ ನೋವು ಉಂಟು ಮಾಡುವ ಪಾಠಗಳನ್ನು ಕಲಿಸುತ್ತಿರುವುದು ಖೇದಕರ. ಈ ಕೂಡಲೇ ಪಾಠವನ್ನು ಪಠ್ಯದಿಂದ ತೆಗೆದು ಹಾಕಿ ಸಮುದಾಯದ ಗೌರವಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬ್ರಾಹ್ಮಿನ್‌ ಆರ್ಗನೈಜೇಶನ್‌ ಆಫ್‌ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಕುಲಕರ್ಣಿ, ವಾದಿರಾಜ ವ್ಯಾಸಮುದ್ರ, ಸ್ವಾಮಿರಾವ ಕುಲಕರ್ಣಿ, ಬಿಜೆಪಿ ಮುಖಂಡ ಅವಿನಾಶ ಕುಲಕರ್ಣಿ, ಸಂಘಟಕ ವೀರೇಶ ಕುಲಕರ್ಣಿ, ಬಾಬುರಾವ ಕುಲಕರ್ಣಿ, ಪವನಕುಮಾರ್‌ ಫಿರೋಜಾಬಾದಕರ್, ಗುಂಡಾಚಾರ್ಯ ಜೋಶಿ, ದಿಲೀಪ ಕುಲಕರ್ಣಿ, ಪ್ರಶಾಂತ ಕೋರಳ್ಳಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.