ಕಲಬುರಗಿ: ‘ದಿಢೀರ್ ಹೃದಯಾಘಾತಕ್ಕೂ ಮುನ್ಸೂಚನೆ ಇದ್ದೇ ಇರುತ್ತದೆ. ಅದನ್ನು ನಾವು ಸರಿಯಾಗಿ ಗಮನಿಸಬೇಕಷ್ಟೇ’ ಎಂದು ಬಸವೇಶ್ವರ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಸುರೇಶ ಹರಸೂರ ಹೇಳಿದರು.
ನಗರದ ವೀರಮ್ಮ ಗಂಗಸಿರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿ ಸಂಪೂರ್ಣ ಬದಲಾಗಿದೆ. ಆರೋಗ್ಯಯುತ ಸಾಂಪ್ರದಾಯಿಕ ಆಹಾರ ಪದ್ಧತಿಗಳು ಕಡಿಮೆಯಾಗುತ್ತಿವೆ. ಬದಲಾಗಿ ಜಂಕ್ ಫುಡ್ಸ್, ಫಾಸ್ಟ್ ಪುಡ್‌ಗಳ ಸೇವನೆ ವಿಪರೀತವಾಗಿದೆ. ಇದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ ಅಧಿಕ ರಕ್ತದೊತ್ತಡ, ಮಧುಮೇಹದಂಥ ಕಾಯಿಲೆಗಳು ಯುವಜನರಲ್ಲಿ ಕಾಣಿಸುತ್ತವೆ. ಹೆಚ್ಚೆಚ್ಚು ಹಸಿರು ತರಕಾರಿ, ಹಣ್ಣುಗಳನ್ನು ಸೇವಿಸಬೇಕು’ ಎಂದರು.
‘ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯಿಂದ ತಮ್ಮ ಅಮೂಲ್ಯವಾದ ಜೀವನಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ನಡೆಯುವಾಗ, ಓಡುವಾಗ, ಮೆಟ್ಟಿಲು ಹತ್ತುವಾಗ ಹೃದಯದ ನೋವು ಬಂದರೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಸಲಹೆ ಪಡೆಯುವುದು ಅವಶ್ಯಕ. ಹೃದಯ ನೋವಿಗೂ ಗ್ಯಾಸ್ಟ್ರಿಕ್ ನೋವಿಗೂ ಸಾಮ್ಯತೆ ಇದ್ದು, ವೈದ್ಯರ ಸಲಹೆ ಪಡೆಯುವುದು ಉತ್ತಮ. ಗ್ಯಾಸ್ಟ್ರಿಕ್ ನೋವೆಂದು ತಿಳಿದು ನಿರ್ಲಕ್ಷ್ಯ ಮಾಡಬೇಡಿ’ ಎಂದು ಕಿವಿಮಾತು ಹೇಳಿದರು.
79 ವಿದ್ಯಾರ್ಥಿನಿಯರು ಹಾಗೂ 10 ಸಿಬ್ಬಂದಿಯ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯ ಸಮಸ್ಯೆ ಇರುವ ವಿದ್ಯಾರ್ಥಿಗಳಿಗೆ ತಜ್ಞ ವೈದ್ಯರಿಂದ ಉಚಿತ ಸಲಹೆ ಹಾಗೂ ಸಂಬಂಧಿಸಿದ ಔಷಧ ನೀಡಲಾಯಿತು.
ಬಸವೇಶ್ವರ ಆಸ್ಪತ್ರೆಯ ತಜ್ಞ ವೈದ್ಯರ ತಂಡ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮೋಹನರಾಜ ಪತ್ತಾರ, ಕಾಲೇಜಿನ ಆಯುಷ್ಮಾನ್ ಆರೋಗ್ಯ ಯೋಜನೆ ಸಂಚಾಲಕಿ ಸರೋಜಾದೇವಿ ಪಾಟೀಲ, ಬಸವೇಶ್ವರ ಆಸ್ಪತ್ರೆಯ ಪಿಆರ್‌ಒ ಪ್ರಿಯದರ್ಶಿನಿ ಟೆಂಗಳಿ ಹಾಗೂ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.