ADVERTISEMENT

ಕೋವಿಡ್ ಲಸಿಕೆಗೆ ₹ 1,048 ಕೋಟಿ ಬಿಡುಗಡೆ: ಕಂದಾಯ ಸಚಿವ ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 15:32 IST
Last Updated 19 ಅಕ್ಟೋಬರ್ 2021, 15:32 IST
ಕಲಬುರಗಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕೋವಿಡ್ ಲಸಿಕೆ ಜಾಗೃತಿ ಜಾಥಾದಲ್ಲಿ ಕಂದಾಯ ಸಚಿವ ಆರ್. ಅಶೋಕ, ಸಂಸದ ಡಾ. ಉಮೇಶ ಜಾಧವ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹಾಗೂ ವಿವಿಧ ಧರ್ಮಗಳ ಗುರುಗಳು ಭಾಗವಹಿಸಿದ್ದರು
ಕಲಬುರಗಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕೋವಿಡ್ ಲಸಿಕೆ ಜಾಗೃತಿ ಜಾಥಾದಲ್ಲಿ ಕಂದಾಯ ಸಚಿವ ಆರ್. ಅಶೋಕ, ಸಂಸದ ಡಾ. ಉಮೇಶ ಜಾಧವ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹಾಗೂ ವಿವಿಧ ಧರ್ಮಗಳ ಗುರುಗಳು ಭಾಗವಹಿಸಿದ್ದರು   

ಕಲಬುರಗಿ: ’ಜಿಲ್ಲೆಯ ಜನರಲ್ಲಿ ಕೆಲವರು ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು, ಇಲ್ಲಿಯವರೆಗೆ ಶೇ 68ರಷ್ಟು ಜನರಿಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ. ಸಂಭವನೀಯ ಮೂರನೇ ಅಲೆ ತಪ್ಪಿಸಲು ಜಾತಿ, ಧರ್ಮಗಳ ತಾರತಮ್ಯವಿಲ್ಲದೇ ಎಲ್ಲರೂ ಉಚಿಕೆ ಲಸಿಕೆ ಪಡೆಯಬೇಕು‘ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಕಂದಾಯ ಸಚಿವ ಆರ್. ಅಶೋಕ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ಇಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕೋವಿಡ್ ಲಸಿಕೆ ಜನಜಾಗೃತಿ ಕಾರ್ಯಕ್ರಮದಲ್ಲಿ ಕೋವಿಡ್‌ನಿಂದ ಮೃತಪಟ್ಟ ಬಡ ಕುಟುಂಬಗಳ ಸದಸ್ಯರಿಗೆ ತಲಾ ₹ 1 ಲಕ್ಷದ ಚೆಕ್ ವಿತರಿಸಿ ಅವರು ಮಾತನಾಡಿದರು.

‘ಕೆಲವರು ಲಸಿಕೆಯ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದಾರೆ. ಇದು ಕೋವಿಡ್‌ ಕಾಯಿಲೆಗೆ ಒಂದು ಮದ್ದಷ್ಟೇ. ಎಲ್ಲ ಧರ್ಮೀಯರು ಇದನ್ನು ಯಾವುದೇ ಹಿಂಜರಿಕೆ ಇಲ್ಲದೇ ತೆಗೆದುಕೊಳ್ಳಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ₹ 1,048 ಕೋಟಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಎಲ್ಲಿಯೂ ಲಸಿಕೆ ಕೊರತೆ ಇಲ್ಲ. ಕಲಬುರಗಿ ಜಿಲ್ಲೆಯಲ್ಲಿ ಅಗತ್ಯವಿರುವಷ್ಟು ಲಸಿಕೆ ಇದೆ. ಹಾಗಾಗಿಯೇ ಮನೆ ಮನೆಗೆ ತೆರಳಿ ಲಸಿಕೆ ಪಡೆಯುವಂತೆ ನಮ್ಮ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮನವಿ ಮಾಡುತ್ತಿದ್ದಾರೆ’ ಎಂದರು.

ADVERTISEMENT

‘ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಬಹುತೇಕ ಜನರು ಮನೆಯಲ್ಲೇ ಸುರಕ್ಷಿತವಾಗಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರು, ಆರೋಗ್ಯ ಸಿಬ್ಬಂದಿ ತಮ್ಮ ಜೀವದ ಹಂಗನ್ನು ತೊರೆದು ಸೋಂಕು ನಿಯಂತ್ರಣಕ್ಕೆ ತರಲು ಶ್ರಮಿಸಿದ್ದಾರೆ’ ಎಂದು ಹೇಳಿದರು.

‘ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕಾರ್ಡುದಾರರಿಗೆ ತಲಾ ₹ 1 ಲಕ್ಷ ಪರಿಹಾರ ನೀಡುವ ಮೂಲಕ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ಕಣ್ಣೀರು ಒರೆಸಲು ರಾಜ್ಯ ಸರ್ಕಾರ ಮುಂದಾಗಿದೆ’ ಎಂದರು.

ಸಂಸದ ಡಾ. ಉಮೇಶ ಜಾಧವ ಮಾತನಾಡಿದರು.

ಸುಲಫಲ ಮಠದ ಡಾ. ಸಾರಂಗಧರ ಸ್ವಾಮೀಜಿ, ಸೊನ್ನ ವಿರಕ್ತಮಠದ ಶಿವಾನಂದ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಅಲಿಬಾಬಾ, ಕ್ರೈಸ್ತ ಧರ್ಮಗುರು ಸ್ಟ್ಯಾನಿ ಲೋಬೊ, ಬೌದ್ಧ ಧರ್ಮಗುರುಸಂಗಾನಂದ ಬಂತೇಜಿ ಸೇರಿದಂತೆ ವಿವಿಧ ಧರ್ಮದ ಗುರುಗಳು ಭಾಗವಹಿಸಿದ್ದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಓ ಡಾ. ದಿಲೀಷ್ ಶಶಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ, ಪಾಲಿಕೆ ಆರೋಗ್ಯಾಧಿಕಾರಿ ವಿನೋದಕುಮಾರ್, ಗುಲಬರ್ಗಾ ವಿ.ವಿ. ಎನ್‌ಎಸ್‌ಎಸ್‌ ಸಂಯೋಜಕ ಡಾ. ರಮೇಶ ಲಂಡನಕರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶಂಕ್ರೆಪ್ಪ ಹತ್ತಿ, ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ರಮೇಶ ಸಂಗಾ ಇದ್ದರು.

ಇದಕ್ಕೂ ಮುನ್ನ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಆರಂಭವಾದ ಜಾಗೃತಿ ಜಾಥಾದಲ್ಲಿ ಎನ್‌ಎಸ್‌ಎಸ್‌, ಎನ್‌ಸಿಸಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.