
ಕಾಳಗಿ: ತಿರುಪತಿ ತಿರುಮಲ ಹಾಥಿರಾಮಜಿ ಮಠದ ತಾಲ್ಲೂಕಿನ ಸುಗೂರ (ಕೆ) ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ಮಹಾಪರ್ವ ಅದ್ದೂರಿಯಾಗಿ ಜರುಗಿತು.
ದರ್ಶನಕ್ಕಾಗಿ ನಸುಕಿನ ಜಾವದಿಂದಲೇ ವಿವಿಧೆಡೆಯಿಂದ ವಾಹನಗಳಲ್ಲಿ ಬರಲಾರಂಭಿಸಿದ ಭಕ್ತರ ದಂಡು ರಾತ್ರಿಯಾದರೂ ನಿರಂತರವಾಗಿತ್ತು. ಅದೇಷ್ಟೊ ಮಹಿಳಾ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದರು.
40 ಕ್ವಿಂಟಲ್ ಬಗೆಬಗೆಯ ಹೂಹಾರಗಳಿಂದ ಅಲಂಕಾರಗೊಂಡಿದ್ದ ಗರ್ಭಗುಡಿ ಸುತ್ತಲಿನ ವೈಕುಂಠ ದ್ವಾರದರ್ಶನಕ್ಕಾಗಿ ಭಕ್ತರು ಸಾಲುಗಟ್ಟಿದರು.
ಕೈಯಲ್ಲಿ ಕಾಯಿಕರ್ಪೂರ, ಫಲಪುಷ್ಪ ಹಿಡಿದು ಹೊರ ರಸ್ತೆಯಿಂದಲೇ ಜೈಕಾರ ಹಾಕುತ್ತ ಹೆಜ್ಜೆತುಳಿದ ಭಕ್ತರು ದೇವಸ್ಥಾನ ಪ್ರವೇಶಿಸಿ ದರ್ಶನ ಮಾಡಿ ಕೃತಾರ್ಥರಾದರು.
ನಸುಕಿನ ವೇಳೆಯಲ್ಲೇ ಗರ್ಭಗುಡಿಯೊಳಗಿನ ವೆಂಕಟೇಶ್ವರಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಉತ್ತರ ದ್ವಾರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವೈಕುಂಠ ಏಕಾದಶಿಯ ದೇವರ ಬೆಳ್ಳಿ ಮೂರ್ತಿಗಳಿಗೆ ಭಕ್ತರು ಶ್ರದ್ಧಾಭಕ್ತಿಯಿಂದ ಹಣೆಮಣೆದು ಧನ್ಯರಾದರು.
ಭಕ್ತರು ಬೋಂದಿ ಲಡ್ಡು ಮತ್ತು ಅನ್ನದಾಸೋಹ ಪ್ರಸಾದ ಸ್ವೀಕರಿಸಿದರು. ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ದಂಪತಿ, ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ಡಿ.ಕಿಶೋರಬಾಬು, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ್, ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ನಾಗನಾಥ ತರಗೆ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಮುಖಂಡ ಶರಣಪ್ಪ ತಳವಾರ, ನೀಲಕಂಠ ಜಗದೇವ ಗುತ್ತೇದಾರ ಸೇರಿದಂತೆ ಉದ್ಯಮಿಗಳು, ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದರು.
ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ 70ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ಮಾಡಿದರು. ಡಿ.31 ದ್ವಾದಶಿ ದಿನ ದರ್ಶನಕ್ಕೆ ಬರುವ ಭಕ್ತರಿಗೆ ಭತ್ತದ ವಿಶೇಷ ಪ್ರಸಾದ ವಿತರಣೆಯ ವ್ಯವಸ್ಥೆ ಇರುತ್ತದೆ ಎಂದು ಸಂಚಾಲಕ ಕೃಷ್ಣದಾಸ ಮಹಾರಾಜ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.