ADVERTISEMENT

Valentine Day: ಗ್ರೀಟಿಂಗ್ಸ್‌, ಕಾಣಿಕೆ, ಗುಲಾಬಿಗೆ ಹೆಚ್ಚಿದ ಬೇಡಿಕೆ

ಪ್ರೇಮಿಗಳ ದಿನ; ನಗರದಲ್ಲಿ ಮಾರಾಟ ಭರಾಟೆ ಜೋರು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 1:06 IST
Last Updated 13 ಫೆಬ್ರುವರಿ 2021, 1:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಲಬುರ್ಗಿ: ಪ್ರೇಮಿಗಳ ದಿನ (ವ್ಯಾಲೆಂಟೈನ್ಸ್‌ ಡೇ) ಮತ್ತೆ ಬಂದಿದೆ. ಪ್ರತಿ ವರ್ಷ ಫೆಬ್ರುವರಿ 14ರಂದು ಪ್ರೇಮ ಪಕ್ಷಿಗಳು ಪರಸ್ಪರ ಶುಭಾಶಯ ಕೋರುವ ದಿನ. ನಗರದಲ್ಲಿ ಕೂಡ ಇದಕ್ಕೆ ವಾರದ ಹಿಂದಿನಿಂದಲೂ ಸಿದ್ಧತೆಗಳು ನಡೆದಿವೆ.

ಮನ ಮೆಚ್ಚಿದ ಹುಡುಗ– ಹುಡುಗಿಗೆ ಗುಲಾಬಿ ಹೂ ನೀಡಿ ಪ್ರೇಮ ನಿವೇದನೆ ಮಾಡಿಕೊಳ್ಳಲು, ಸುಂದರವಾದ ಕಾಣಿಕೆ ನೀಡಿ ಪ್ರಿಯತಮೆಯನ್ನು ಮೆಚ್ಚಿಸಲು, ಗೆಳೆಯ– ಗೆಳೆತಿಯ ಪ್ರೇಮದ ಯಶಸ್ಸಿನ ಹೆಸರಲ್ಲಿ ಪಾರ್ಟಿ ಮಾಡಲು ಯುವ ಮನಸ್ಸುಗಳು ತುಡಿಯುತ್ತಿವೆ.

ನಗರದ ಸೂಪರ್‌ ಮಾರ್ಕೆಟ್‌, ಜಗತ್‌ ವೃತ್ತ, ರಾಷ್ಟ್ರಪತಿ ಚೌಕ, ಶಹಾಬಜಾರ್ ಮುಂತಾದ ಕಡೆಗಳಲ್ಲಿ ಇರುವ ಗಿಫ್ಟ್‌ ಮಳಿಗೆಗಳಲ್ಲಿ ಈಗ ಯುವಕ– ಯುವತಿಯರೇ ಹೆಚ್ಚಾಗಿ ಕಾಣಿಸುತ್ತಿದ್ದಾರೆ. ಮಾಲ್‌, ಬಟ್ಟೆ ಅಂಗಡಿ, ಬಿಂಟೆಕ್ಸ್‌ ಮಳಿಗೆಗಳಲ್ಲೂ ಖರೀದಿ ಜೋರಾಗಿದೆ. ಕಾಲೇಜುಗಳ ಆವರಣ ಮತ್ತು ಸನಿಹದಲ್ಲಿರುವ ಹೋಟೆಲ್‌, ಕಾಣಿಕೆಗಳ ಮಳಿಗೆ, ಬೇಕರಿಗಳಲ್ಲಿ ಬಲೂನು, ರಿಬ್ಬನ್‌ಗಳಿಂದ ಅಲಂಕಾರ ಮಾಡಲಾಗಿದೆ. ಹೃದಯ ಆಕಾರದ ಚಿತ್ರಗಳನ್ನು ನೇತುಹಾಕಿ ಪ್ರೇಮಿಗಳನ್ನು ಸೆಳೆಯುವ ತಯಾರಿ ನಡೆದಿದೆ.

ADVERTISEMENT

ಭಿನ್ನಭಿನ್ನವಾಗಿ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆ ಮಾಡಲು ಅನುಕೂಲವಾಗುವಂಥ ಹೂಗುಚ್ಚಗಳೂ ಇಲ್ಲಿವೆ. ಹೃದಯ ಆಕಾರದ ಹೂವು, ಚಾಕೊಲೇಟ್, ಶುಭಾಷಯ ಪತ್ರಗಳು, ಫ್ಯಾನ್ಸಿ ಜ್ಯುವೆಲ್ಲರಿ, ರಾಧಾ– ಕೃಷ್ಣ ಜೋಡಿಯ ಗೊಂಬೆ, ತೂಗುಯ್ಯಾಲೆಯಲ್ಲಿ ಪ್ರೇಮದ ಗೊಂಬೆಗಳು, ಜೋಡಿ ಹೃದಯಗಳು... ಹೀಗೆ ತಹರೇವಾರು ಕಲಾಕೃತಿಗಳು ಇಲ್ಲಿವೆ.

ದುಬಾರಿಯಾದ ಗುಲಾಬಿ: ಪ್ರೇಮದ ಸಂಕೇತವಾದ ಗುಲಾಬಿ ಹೂವಿಗೆ ಈ ದಿನ ಎಲ್ಲಿಲ್ಲದ ಮಹತ್ವ. ಮಹಾನಗರ ಪಾಲಿಕೆ ಎದುರಿಗೆ ಎಂಟು ಹೂಗುಚ್ಛದ ಅಂಗಡಿಗಳಿವೆ. ಪ್ರೇಮಿಗಳ ದಿನಕ್ಕಾಗಿಯೇ ಇಲ್ಲಿನ ವ್ಯಾಪಾರಿಗಳು ವಿಶಿಷ್ಟ ಆಕಾರದ ಹೂಗುಚ್ಛಗಳನ್ನು ಸಿದ್ಧಪಡಿಸಲಿದ್ದಾರೆ. ಕನಿಷ್ಠ ₹ 300ರಿಂದ ₹ 2500ವರೆಗಿನದರ ಇವೆ.

ಕಳೆದ ವಾರ ಒಂದು ಗುಲಾಬಿ ಹೂವಿಗೆ ₹ 10 ದರವಿತ್ತು. ಆದರೆ, ಶುಕ್ರವಾರ ₹ 25 ರಿಂದ ₹ 30ಕ್ಕೆ ಒಂದು ಮಾರಾಟವಾಗುತ್ತಿದೆ. ಪ್ರೇಮಿಗಳ ದಿನವಾದ ಭಾನುವಾರವಂತೂ ಒಂದೊಂದು ಹೂವು ₹ 50ಕ್ಕೂ ಮಾರಾಟವಾದ ಉದಾಹರಣೆ ಇವೆ ಎನ್ನುತ್ತಾರೆ ವ್ಯಾಪಾರಿ ಮುಬಾರಕ್‌ ಸಾದಿಕ್‌ಪಾಷಾ ಹಾಗೂ ತಬ್ರಾಜ್.

ಸ್ಮಾರ್ಟ್‌ಫೋನ್‌ಗಳ ಕಾಲದಲ್ಲಿ ಕೂಡ ಪ್ರೇಮಿಗಳು ಸಾಂಪ್ರದಾಯಿಕ ಆಚರಣೆ ಬಿಟ್ಟಿಲ್ಲ. ಮನೋಲ್ಲಾಸ ನೀಡುವಂಥ ಸುಂದ ಕಾಣಿಕೆ, ಶುಭಾಶಯ ಪತ್ರವನ್ನು ಕೈಯಲ್ಲಿ ನೀಡಿ ಶುಭಾಶಯ ಹೇಳಿಕೊಂಡಾಗಲೇ ಯುವ ಜೋಡಿಗೆ ಸಮಾಧಾನ. ಹೀಗಾಗಿ, ಗ್ರೀಟಿಂಗ್ಸ್‌ಗಳ ದರ ಕೂಡ ₹ 40ರಿಂದ ₹ 200ಕ್ಕೆ ಏರಿಕೆಯಾಗಿದೆ. ಪ್ರೇಮಿಗಳ ಚಿತ್ರ ಸಮೇತ ಡಿಸೈನ್‌ ಮಾಡಿದ ಕೆಲವು ಗ್ರೀಟಿಂಗ್ಸ್‌ಗಳ ಬೆಲೆ ₹ 600ಕ್ಕೂ ಹೆಚ್ಚಾಗಿದೆ.

₹ 200 ರಿಂದ 250 ಇದ್ದ ಕೇಕ್‌ಗಳ ದರ ಈಗ ₹ 800ರವರೆಗೂ ಹೆಚ್ಚಾಗಿದೆ. ಪ್ರೇಮಿಗಳನ್ನು ಆಕರ್ಷಿಸಲೆಂದೇ ಅವರ ಭಾವಚಿತ್ರ ಸಮೇತ ಇರುವ ಕೇಕ್‌ಗಳನ್ನು ತಯಾರಿಸಿದ್ದಾರೆ ಬೇಕರಿಗಳ ಮಾಲೀಕರು.

2020ನೇ ವರ್ಷದ ಬಹುಪಾಲು ದಿನಗಳನ್ನು ‘ಅಂತರ’ದಲ್ಲೇ ಕಳೆದ ಪ್ರೇಮಿಗಳಿಗೆ ಈಗ ಹೊಸ ಹುಮ್ಮಸ್ಸು ಮೂಡಿದೆ. ಕೊರೊನಾ ಉಪಟಳ ಕಡಿಮೆಯಾದ ಸಮಾಧಾನ ಒಂದೆಡೆಯಾದರೆ, ಪ್ರೇಮಿಗಳ ದಿನಾಚರಣೆ ಮತ್ತೊಂದು ಖುಷಿ ತಂದಿದೆ. ಯುವ ಪ್ರೇಮಿಗಳ ಆರಾಧ್ಯ ದೈವ ವ್ಯಾಲಂಟೈನ್‌ ಸ್ಮರಣೆಗಾಗಿ ಯುವ ಮನಸ್ಸುಗಳು ಇನ್ನಿಲ್ಲದ ಸಿದ್ಧತೆ ಮಾಡಿಕೊಂಡಿವೆ. ಕಾಲೇಜು, ಉದ್ಯಾನ, ಕಾಪಿಶಾಪ್‌, ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿ ಈಗ ಹೃದಯಗಳ ಸಮಾಗಮ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.