ADVERTISEMENT

ಆಪರೇಷನ್‌ ಕಮಲದ ಯಶಸ್ಸಿಗಾಗಿ ಟಿಕೆಟ್‌ ತ್ಯಾಗ: ವಲ್ಲ್ಯಾಪುರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 14:20 IST
Last Updated 27 ಏಪ್ರಿಲ್ 2019, 14:20 IST
ಸುನಿಲ ವಲ್ಲ್ಯಾಪುರ
ಸುನಿಲ ವಲ್ಲ್ಯಾಪುರ   

ಕಲಬುರ್ಗಿ: ‘ಚಿಂಚೋಳಿ ಉಪ ಚುನಾವಣೆಯ ಟಿಕೆಟ್‌ ವಿಚಾರದಲ್ಲಿ ನಾನು ಹಠ ಮಾಡಿದರೆ, ಮುಂದೆ ಆಪರೇಷನ್‌ ಕಮಲದ ಮೂಲಕ ಬಿಜೆಪಿಗೆ ಬರುವವರಿಗೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ, ಡಾ.ಅವಿನಾಶ ಜಾಧವ ಅವರಿಗೇ ಬೆಂಬಲವಾಗಿ ನಿಲ್ಲಲು ನಿರ್ಧರಿಸಿದ್ದೇನೆ’ ಎಂದು ಬಿಜೆಪಿಮುಖಂಡ ಸುನಿಲ್‌ ವಲ್ಲ್ಯಾಪುರ ತಿಳಿಸಿದರು.

‘ಆಪರೇಷನ್‌ ಕಮಲದ ಮೂಲಕವೇ ಡಾ.ಉಮೇಶ ಜಾಧವ ಅವರು ಬಿಜೆಪಿಗೆ ಬಂದಿದ್ದಾರೆ. ಪಕ್ಷಕ್ಕೆ ಬರುವ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆ ಪ್ರಕಾರ ಜಾಧವ ಅವರ ಕುಟುಂಬದವರಿಗೆ ಉಪ ಚುನಾವಣೆಯ ಟಿಕೆಟ್‌ ನೀಡುವುದು ಅನಿವಾರ್ಯವಾಗಿದೆ‌’ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಾನು ಪ್ರಬಲ ಆಕಾಂಕ್ಷಿ ಆಗಿದ್ದರೂ ಈ ವಿಚಾರದಲ್ಲಿ ತುಸು ಹಿಂದೆ ಸರಿದಿದ್ದೇನೆ. ನನ್ನ ರಾಜಕೀಯ ಗುರು ಬಿ.ಎಸ್‌.ಯಡಿಯೂರಪ್ಪ ಅವರ ಸಲಹೆಯಂತೆ ಟಿಕೆಟ್‌ ತ್ಯಾಗಕ್ಕೆ ನಿರ್ಧರಿಸಿದ್ದೇನೆ’ ಎಂದರು.

ADVERTISEMENT

‘ಲೋಕಸಭೆ ಚುನಾವಣೆ ಫಲಿತಾಂಶ ಹೊರಬಂದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಅದಕ್ಕಾಗಿ ಇನ್ನೂ ಹಲವು ಶಾಸಕರು ಆಪರೇಷನ್‌ ಕಮಲದ ಮೂಲಕ ಪಕ್ಷ ಸೇರಲಿದ್ದಾರೆ. ಈ ಉಪ ಚುನಾವಣೆಯ ಟಿಕೆಟ್‌ ವಿಚಾರದಲ್ಲಿ ತಕರಾರು ತೆಗೆದರೆ ಮುಂದೆ ಪಕ್ಷಕ್ಕೆ ಬರುವವರಿಗೆ ವಿಶ್ವಾಸಬರುವುದಿಲ್ಲ. ಪಕ್ಷದ ಹಿತದೃಷ್ಟಿಯಿಂದ ನಾನು ಹಿಂದೆ ಸರಿದು, ಡಾ.ಉಮೇಶ ಜಾಧವ ಅವರ ಪುತ್ರನ ಬೆನ್ನಿಗೆ ನಿಂತು ಗೆಲ್ಲಿಸುತ್ತೇನೆ’ ಎಂದು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.