ADVERTISEMENT

ವಂದೇ ಮಾತರಂ ದೇಶ ಭಕ್ತಿಯ ಪ್ರತೀಕ: ಮಾಜಿ ಸಂಸದ ಡಾ.ಉಮೇಶ ಜಾಧವ

ಕಲಬುರಗಿ ಜಿಲ್ಲಾ ಕಚೇರಿಯಲ್ಲಿ ‘ವಂದೇ ಮಾತರಂ@150’ ಸಮಾರಂಭ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 5:32 IST
Last Updated 8 ನವೆಂಬರ್ 2025, 5:32 IST
<div class="paragraphs"><p>ವಂದೇ ಮಾತರಂ ರಾಷ್ಟ್ರೀಯ ಗೀತೆಗೆ 150 ವರ್ಷ ತುಂಬಿರುವ ಪ್ರಯುಕ್ತ ಕಲಬುರಗಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಭಾರತಾಂಬೆ ಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಡಾ.ಉಮೇಶ ಜಾಧವ, ಅಮರನಾಥ ಪಾಟೀಲ, ಸಿದ್ದಾಜಿ&nbsp;ಪಾಟೀಲ, ಅಶೋಕ ಬಗಲಿ, ಮಹಾದೇವ ಬೆಳಮಗಿ ಸೇರಿ ಹಲವರಿದ್ದರು </p></div>

ವಂದೇ ಮಾತರಂ ರಾಷ್ಟ್ರೀಯ ಗೀತೆಗೆ 150 ವರ್ಷ ತುಂಬಿರುವ ಪ್ರಯುಕ್ತ ಕಲಬುರಗಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಭಾರತಾಂಬೆ ಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಡಾ.ಉಮೇಶ ಜಾಧವ, ಅಮರನಾಥ ಪಾಟೀಲ, ಸಿದ್ದಾಜಿ ಪಾಟೀಲ, ಅಶೋಕ ಬಗಲಿ, ಮಹಾದೇವ ಬೆಳಮಗಿ ಸೇರಿ ಹಲವರಿದ್ದರು

   

–ಪ್ರಜಾವಾಣಿ ಚಿತ್ರ

ಕಲಬುರಗಿ: ‘ದೇಶದ ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂಗೆ ಇದೀಗ 150 ವರ್ಷಗಳು ತುಂಬಿವೆ. ಸ್ವಾತಂತ್ರ್ಯ ಹೋರಾಟದ ಜೀವನಾಡಿಯಾಗಿದ್ದ ಈ ಗೀತೆಯ ಕೆಲವು ಪ್ಯಾರಾಗಳನ್ನು ಮುಸ್ಲಿಂ ಲೀಗ್‌ ಒತ್ತಡಕ್ಕೆ ಮಣಿದು ಕೈಬಿಟ್ಟಿತು’ ಎಂದು ಬಿಜೆಪಿಯ ಮಾಜಿ ಸಂಸದ ಡಾ.ಉಮೇಶ ಜಾಧವ ಹೇಳಿದರು.

ADVERTISEMENT

‘ವಂದೇ ಮಾತರಂ’ ಗೀತೆಗೆ 150 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರದ ನಾಗನಹಳ್ಳಿ ಕ್ರಾಸ್‌ ಸಮೀಪದಲ್ಲಿರುವ ಬಿಜೆಪಿ ಕಲಬುರಗಿ ಜಿಲ್ಲಾ ಕಚೇರಿಯಲ್ಲಿ ‘ವಂದೇ ಮಾತರಂ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ವಿವಿಧ ಕಾರಣಗಳಿಗೆ ಕಲಬುರಗಿ ಜಿಲ್ಲೆಯು ದೇಶದಲ್ಲೇ ಸುದ್ದಿಯಾಗುತ್ತಿದೆ. ಇಂಥ ಸಮಯದಲ್ಲಿ ನಾವೆಲ್ಲ ಸಣ್ಣ–ಪುಟ್ಟ ಭಿನ್ನಾಭಿಪ್ರಾಯಗಳನ್ನು ಮೀರಿ ದೇಶದ ಬಗೆಗೆ ವಿಚಾರ ಮಾಡಬೇಕಿದೆ. ಎಂದಿಗೂ ನಮಗೆ ದೇಶವೇ ಮೊದಲು ಎಂಬುದು ಜನರಿಗೆ ಸಾರಬೇಕಿದೆ’ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ‘ವಂದೇ ಮಾತರಂ ಗೀತೆಯು ದೇಶ ಭಕ್ತಿಯ ಪ್ರತೀಕ. ಭಾರತ ಮಾತೆಯ ಸ್ತುತಿಯನ್ನು ಅದು ಒಳಗೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಕ್ರಾಂತಿಯ ಚಿಲುಮೆಯಾಗಿ ಈ ಗೀತೆ ಬಳಕೆಯಾಗುತ್ತಿತ್ತು’ ಎಂದರು.

ಮುಖಂಡ ಸಿದ್ದಾಜಿ ಪಾಟೀಲ ಮಾತನಾಡಿ, ‘ವಂದೇ ಮಾತರಂ ದೇಶ ಭಕ್ತಿ ಹಾಗೂ ಭಾರತೀಯತೆಯ ಶಕ್ತಿಯಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಕಿರುಕುಳದ ವಿರುದ್ಧ ಮೊಳಗುತ್ತಿದ್ದ ಕ್ರಾಂತಿಯ ನುಡಿಯಾಗಿತ್ತು. ಹಲವು ಹೋರಾಟಗಾರರು ಗಲ್ಲಿಗೇರುವಾಗ ‘ವಂದೇ ಮಾತರಂ’ ಪಠಿಸಿದಂಥ ಹಿನ್ನೆಲೆ ಈ ಗೀತೆಗೆ ಇದೆ’ ಎಂದರು.

ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬಗಲಿ ಮಾತನಾಡಿ, ‘ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬಿದ ಅಂಗವಾಗಿ ದೇಶದ 150 ಜಿಲ್ಲೆಗಳಲ್ಲಿ ‘ವಂದೇ ಮಾತರಂ’ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಇಂಥ ಕಾರ್ಯಕ್ರಮ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಪಕ್ಷದಿಂದ ವರ್ಷವಿಡೀ ಇದೊಂದು ಅಭಿಯಾನದ ರೂಪದಲ್ಲಿ ನಡೆಯಲಿದೆ’ ಎಂದರು.

ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಮುಖಂಡರಾದ ಲಿಂಗರಾಜ ಬಿರಾದಾರ, ಮಹಾದೇವ ಬೆಳಮಗಿ, ಶಿವಯೋಗಿ ನಾಗನಹಳ್ಳಿ ಸೇರಿದಂತೆ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಂದೇ ಮಾತರಂ ಗೀತೆಗೆ ಇದೀಗ 150 ವರ್ಷಗಳು ಸಂದಿವೆ. ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂ ರಾಷ್ಟ್ರಗೀತೆ ಜನ ಗಣ ಮನಕ್ಕೆ ಸರಿಸಮಾನವಾದ ಗೀತೆಯಾಗಿದೆ
–ಅಮರನಾಥ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.