ADVERTISEMENT

ವಾಡಿ: ಅಗ್ಗಿ ತುಳಿದು ಭಕ್ತಿ ಸಮರ್ಪಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 5:06 IST
Last Updated 10 ನವೆಂಬರ್ 2025, 5:06 IST
ಹಲಕರ್ಟಿ ವೀರಭದ್ರೇಶ್ವರ ದೇವಾಲಯಕ್ಕೆ ಜಾತ್ರಾ ಮಹೋತ್ಸವದ ಅಂಗವಾಗಿ ಲೈಟಿಂಗ್ಸ್‌ ಹಾಕಿರುವುದು
ಹಲಕರ್ಟಿ ವೀರಭದ್ರೇಶ್ವರ ದೇವಾಲಯಕ್ಕೆ ಜಾತ್ರಾ ಮಹೋತ್ಸವದ ಅಂಗವಾಗಿ ಲೈಟಿಂಗ್ಸ್‌ ಹಾಕಿರುವುದು   

ವಾಡಿ: ಚಿತ್ತಾಪುರ ತಾಲ್ಲೂಕಿನ ಹಲಕರ್ಟಿಯ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನ ಜಾತ್ರೆಯ ರಥೋತ್ಸವ ಇಂದು ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಲಿದೆ.

ಭಾನುವಾರದ (ನ.9) ರಾತ್ರಿ ಪ್ರಮುಖ ಧಾರ್ಮಿಕ ಆಚರಣೆಯಾದ ಭಕ್ತರ ಅಗ್ಗಿ ತುಳಿಯುವ ಕಾರ್ಯದಲ್ಲಿ ಸಾವಿರಾರು ಜನರು ಭಾಗಿಯಾಗಿ ಭಕ್ತಿ ಸಮರ್ಪಿಸಿದರು. ನ.10ರ ಸೋಮವಾರ ಸಂಜೆ 6 ಗಂಟೆಗೆ ಭವ್ಯ ರಥೋತ್ಸವ ನಡೆಯಲಿದ್ದು, ರಾಜ್ಯ ಮತ್ತು ಹೊರರಾಜ್ಯಗಳಿಂದ ಸಹಿತ ಸಹಸ್ರಾರು ಭಕ್ತರು ಜಾತ್ರೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.

ನ.5ರಿಂದ ಗ್ರಾಮದಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಗ್ರಾಮದಲ್ಲಿ ಸಂಭ್ರಮ ಕಳೆಗಟ್ಟಿದೆ. ಭಕ್ತರ ಅಗ್ಗಿ ಪ್ರವೇಶದಲ್ಲಿ ಮೊದಲು ಪೂಜಾರಿಗಳು, ಪುರವಂತರು ಆನಂತರ ಭಕ್ತರು ಅಗ್ಗಿ ಕುಂಡದಲ್ಲಿ ಹಾಯ್ದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ದೇವರಲ್ಲಿ ಪ್ರಾರ್ಥಿಸುವುದು ವಾಡಿಕೆಯಾಗಿದೆ.

ADVERTISEMENT

ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ವೀರಭದ್ರೇಶ್ವರನ ಭಕ್ತರು ಶೃದ್ಧಾ - ಭಕ್ತಿಯಿಂದ ಅಗ್ನಿ ತುಳಿದು ಭಕ್ತಿ ಮೆರೆದರು. ದೂರದೂರುಗಳಿಂದ ಭಕ್ತರು, ನೆಂಟರಿಷ್ಟರು ಈಗಾಗಲೇ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ.

ದೇವಸ್ಥಾನ ವಿದ್ಯುತ್ ಅಲಂಕಾರದಿಂದ ಝಗಮಗಿಸುತ್ತಿದೆ. ನಾಡಿನ ಭಕ್ತರ ಆರಾಧ್ಯ ದೈವವೇ ಆಗಿರುವ ವೀರಭದ್ರನ ಪೂಜೆ, ಅಭಿಷೇಕ, ಹೀಗೆ ನಾನಾ ಧಾರ್ಮಿಕ ಕಾರ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ.

ಜಾತ್ರಾ ಮಹೋತ್ಸವದ ನಿಮತ್ತ ವೀರಭದ್ರೇಶ್ವರ ದೇವಾಲಯದ ಪ್ರಾಂಗಣದಲ್ಲಿ ಭಕ್ತರ ದಂಡು

ರಥೋತ್ಸವ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪಿಎಸ್ಐ ತಿರುಮಲೇಶ .ಕೆ ನೇತೃತ್ವದಲ್ಲಿ ಈಚೆಗೆ ಶಾಂತಿಸಭೆ ನಡೆಸಿದ್ದು, ಪೊಲೀಸ್ ತಂಡ ಗ್ರಾಮದಲ್ಲಿ ಬೀಡುಬಿಟ್ಟಿದೆ. ವಾಹನಗಳ ನಿಲುಗಡೆಗೆ ಹಾಗೂ ಸುಗಮ ವ್ಯಾಪಾರ ವಹಿವಾಟಿಗೆ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.