ADVERTISEMENT

ಮುಂಬಯಿನಿಂದ ಮತದಾರರನ್ನು ಕರೆತರಲು ವಾಹನ ವ್ಯವಸ್ಥೆ: ದೂರು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 7:43 IST
Last Updated 21 ಏಪ್ರಿಲ್ 2019, 7:43 IST
   

ಕಲಬುರ್ಗಿ: ‘ಜಿಲ್ಲೆಯ 10 ಸಾವಿರ ಮತದಾರರು ಕೆಲಸ ಅರಸಿಕೊಂಡು ಹೋಗಿ ಮುಂಬಯಿನಲ್ಲಿ ನೆಲೆಸಿದ್ದಾರೆ. ಚುನಾವಣೆ ದಿನ ಅವರನ್ನು ಕರೆತರಲು ಬಿಜೆಪಿ ವಾಹನದ ವ್ಯವಸ್ಥೆ ಮಾಡಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖಾಸಗಿ ವಾಹನಗಳನ್ನು ಬುಕ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಏ.21 ಮತ್ತು 22ರಂದು ಹೊರ ರಾಜ್ಯಗಳಿಂದ ಬರುವ ವಾಹನಗಳನ್ನು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗೆ ಒಳಪಡಿಸಬೇಕು. ಮತದಾನಕ್ಕಾಗಿ ಕರೆತರುತ್ತಿರುವುದು ಸಾಬೀತಾದರೆ, ಈ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಎರಡೆರಡು ಗುರುತಿನ ಚೀಟಿ: ‘ಕಲಬುರ್ಗಿ ಜಿಲ್ಲೆಯವರಾದ ಕಿಶನ್ ಚಂದ್ರ ಚವಾಣ್, ಜ್ಯೋತಿ ಕಿಶನ್, ಪಪ್ಪು ಗಣಪತರಾವ್ ಪವಾರ, ಪಿಂಟೂ ಸೀತಾರಾಮ ರಾಠೋಡ ಎಂಬುವರು ಮುಂಬಯಿ ಮತ್ತು ಕಲಬುರ್ಗಿಯಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ಎರಡೆರಡು ಗುರುತಿನ ಚೀಟಿ ಹೊಂದುವುದು ತಪ್ಪು ಎಂಬುದು ಅವರಿಗೆ ಗೊತ್ತಿಲ್ಲ. ಹೀಗಾಗಿ ಚುನಾವಣಾ ಆಯೋಗ ಈ ಬಗ್ಗೆಯೂ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬಿಜೆಪಿ ಐಟಿ ಸೆಲ್‌ನಿಂದ ಕರೆ: ‘ಕಲಬುರ್ಗಿ ಹೈಕೋರ್ಟ್ ಪೀಠದ ಮುಂಭಾಗದಲ್ಲಿರುವ ಕಿಯೋನಿಕ್ಸ್‌ ಕಟ್ಟಡದಲ್ಲಿ ಬಿಜೆಪಿ ಐಟಿ ಸೆಲ್ ಕಚೇರಿ ಹೊಂದಿದೆ. ಅಲ್ಲಿ ನೂರಾರು, ಯುವಕ, ಯುವತಿಯರು ಚುನಾವಣೆಗಾಗಿ ಕೆಲಸ ಮಾಡುತ್ತಿದ್ದಾರೆ. ಮತದಾರರ ಮೊಬೈಲ್‌ ನಂಬರ್‌ಗೆ ಕರೆ ಮಾಡಿ ಬಿಜೆಪಿಗೆ ಮತ ಹಾಕಿ, ಮೋದಿ ನೋಡಿ ಮತ ಹಾಕಿ, ನಿಮಗೆ ಕೆಲಸ ಕೊಡಿಸುತ್ತೇವೆ ಎಂದು ಆಮಿಷವೊಡ್ಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದ್ದರಿಂದ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಾರೆ’ ಎಂದು ತಿಳಿಸಿದರು.

‘ನೋಂದಾಯಿತ ಸಂಸ್ಥೆಯಿಂದ ಎಸ್‌ಎಂಎಸ್‌ ಅಥವಾ ದೂರವಾಣಿ ಸಂದೇಶವನ್ನು ಕಳುಹಿಸಬಹುದು. ಅವರು ನಿಗದಿತ ಶುಲ್ಕ ವಿಧಿಸುತ್ತಾರೆ. ಆದರೆ, ಅವರು ಯಾರ ಮೊಬೈಲ್ ಸಂಖ್ಯೆಯನ್ನೂ ಬಹಿರಂಗ ಪಡಿಸುವುದಿಲ್ಲ. ಆದರೆ, ಇವರು ಎಲ್ಲರ ಮೊಬೈಲ್ ನಂಬರ್ ಪಡೆದುಕೊಂಡು ಕರೆ ಮಾಡುತ್ತಿರುವುದು ಅನುಮಾನ ಮೂಡಿಸುತ್ತದೆ. ಮತದಾರರು ಮೊಬೈಲ್ ಸಂಖ್ಯೆಗಳು ಇವರಿಗೆ ಹೇಗೆ ಸಿಕ್ಕವು ಎಂಬುದರ ಬಗ್ಗೆ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.ಶಾಸಕಿ ಕನ್ನೀಜ್ ಫಾತಿಮಾ, ಸುಭಾಸ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.