ADVERTISEMENT

ದೇವಸ್ಥಾನಗಳಲ್ಲಿ ಭಕ್ತರ ದಂಡು: ವೈಕುಂಠ ಏಕಾದಶಿ ಸಂಭ್ರಮ

ಲಕ್ಷ್ಮಿ–ವೆಂಕಟರಮಣ, ವಿಠಲ– ರುಕ್ಮಿಣಿ, ವೆಂಕಟೇಶ್ವರ ದೇವಸ್ಥಾನಗಳಲ್ಲಿ ಭಕ್ತರ ದಂಡು, ‘ವೈಕುಂಠ ದ್ವಾರ’ ಪ್ರವೇಶ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 10:54 IST
Last Updated 14 ಜನವರಿ 2022, 10:54 IST
ರುಕ್ಮಿಣಿ– ವಿಠಲ ಮಂದಿರದಲ್ಲಿ ಗುರುವಾರ ವೈಕುಂಠ ಏಕಾದಶಿಯ ಅಂಗವಾಗಿ ವೆಂಕಟೇಶ್ವನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು
ರುಕ್ಮಿಣಿ– ವಿಠಲ ಮಂದಿರದಲ್ಲಿ ಗುರುವಾರ ವೈಕುಂಠ ಏಕಾದಶಿಯ ಅಂಗವಾಗಿ ವೆಂಕಟೇಶ್ವನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು   

ಕಲಬುರಗಿ:ಜಿಲ್ಲೆಯ ದೇವಸ್ಥಾನಗಳಲ್ಲಿ ಗುರುವಾರ ವೈಕುಂಠ ಏಕಾದಶಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನಗರದ ಲಕ್ಷ್ಮಿ– ವೆಂಕಟರಮಣ ದೇವಸ್ಥಾನ, ರಾಯರ ಮಠ, ವಿಠಲ– ರುಕ್ಮಿಣಿ ಮಂದಿರ ಹಾಗೂ ಸೂಗೂರಿನಬಾಲಾಜಿ ದೇವಸ್ಥಾನಗಳಲ್ಲಿ ‘ವೈಕುಂಠ ಪ್ರವೇಶ ದ್ವಾರ’ ನಿರ್ಮಿಸುವ ಮೂಲಕ ಸಾಂಪ್ರದಾಯಿಕ ಆಚರಣೆ ಮಾಡಲಾಯಿತು.

ಪ್ರತಿ ವರ್ಷದಂತೆಯೇ ಈ ಬಾರಿ ಕೂಡ ಇಲ್ಲಿನ ನ್ಯೂ ರಾಘವೇಂದ್ರ ಕಾಲೊನಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ವೆಂಕಟೇಶ್ವರ ಮೂರ್ತಿಗೆ ನಸುಕಿನ 4ರಿಂದಲೇ ವಿವಿಧ ಅಭಿಷೇಕಗಳನ್ನು ಮಾಡಿ, 6 ಗಂಟೆಯಿಂದ ಭಕ್ತರಿಗೆ ಪ್ರವೇಶ ನೀಡಲಾಯಿತು. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ನಿರಂತರವಾಗಿ ‘ಭಾಗವತ ಸ್ಕಂದ ಪ‍ಠಣ’ ಮಾಡಲಾಯಿತು.ಪಂಡಿತರಾದ ವಿಷ್ಣುನಾರಾಯಣಾಚಾರ್ಯ ಖಜೂರಿ, ಗೋಪಾಲಾಚಾರ್ಯ ಅಕಮಂಚಿ,ಅಭಯಾಚಾರ್ಯ, ಪ್ರಸನ್ನಾಚಾರ್ಯ ಜೋಶಿ, ಹನುಮಂತಾಚಾರ್ಯ ಸರಡಗಿ, ವಿನೋದಾಚಾರ್ಯ ಗಲಗಲಿ ಅವರು ಭಾಗವತದ ಎಲ್ಲ 12 ಸ್ಕಂದಗಳನ್ನು ಪ್ರವಚನ ಮಾಡಿದರು. ಪ್ರಥಮಾ, ದ್ವಿತಿಯಾ, ತೃತಿಯಾ, ಚತುರ್ಥ, ಪಂಚಮ ಶ್ರೇಷ್ಠ, ಷಷ್ಠ, ಸಪ್ತಮಾ, ಅಷ್ಟಮಾ, ನವಮಾ, ದಶಮಾ, ಏಕಾದಶಿ ಮತ್ತು ದ್ವಾದಶಿ... ಸ್ಕಂದಗಳನ್ನೂ ಒಬ್ಬರಾದ ಮೇಲೆ ಒಬ್ಬರು ಪಾರಾಯಣ ಮಾಡಿದರು.

ಇದರೊಂದಿಗೆ ಭಜನಾ ಮಂಡಳಗಳು ಕೂಡ ನಿರಂತರ ಸ್ತೋತ್ರ ಪಠಣ ಮಾಡಿದವು. ಪದ್ಮಾವತಿ ಭಜನಾ ಮಂಡಳಿ, ಶ್ರೀಗೌರಿ, ಲಕ್ಷ್ಮಿನಾರಾಯಣ, ವೈಭವಲಕ್ಷ್ಮಿ, ಪದಶ್ರೀ, ಪಾಂಡುರಂಗ ಮಂಡಳ ಸೇರಿದಂತೆ ಹಲವು ಪುರುಷರು– ಮಹಿಳೆಯರು ನಿರಂತರ ಭಜನಗೆಳನ್ನು ಮಾಡಿ ಸಂಭ್ರಮಿಸಿದರು.

ADVERTISEMENT

ಇಳಿಸಂಜೆಗೆ ಹೆಚ್ಚಿದ ಭಕ್ತರ ದಂಡು: ಇನ್ನೊಂದೆಡೆ, ಬ್ರಹ್ಮಪುರದ ಉತ್ತರಾದಿ ಮಠ, ವಿಠಲ– ರುಕ್ಷಿಣಿ ಮಂದಿರದಲ್ಲಿ ಕೂಡ ವೈಭವದ ಪೂಜಾ ವಿಧಾನಗಳು ನೆರವೇರಿದವು. ದೇವ– ದೇವತೆಗಳಿಗೆ ವಿವಿಧ ಪುಷ್ಪಗಳಿಂದ ಮಾಡಿದ ಅಲಂಕಾರ ಕಣ್ಮನ ಸೆಳೆಯಿತು. ಇಡೀ ದೇವಸ್ಥಾನವನ್ನು ಕೂಡ ವಿದ್ಯುದ್ದೀಪಗಳಿಂದ, ತಳಿರು– ತೋರಣಗಳಿಂದ ಸಿಂಗರಿಸಲಾಗಿತ್ತು.

ಬಿದ್ದಾಪುರ ಕಾಲೊನಿಯ ರಾಯರ ಮಠದಲ್ಲಿ ಕೂಡ ಬೆಳಿಗ್ಗೆ ಅಭಿಷೇಕ, ಮಂಗಳಾರತಿ,ಗೀತಾ ಪಾರಾಯಣ, ವೈಕುಂಠ ಪ್ರದಕ್ಷಿಣೆ, ವಿಷ್ಣು ಸಹಸ್ರನಾ‍ಮ ಪಾರಾಯಣ, ಮಹಾಲಕ್ಷ್ಮಿ ಸ್ತೋತ್ರ ಪಾರಾಯಣ ಮುಂತಾದ ಕಾರ್ಯಕ್ರಮಗಳು ನೆರವೇರಿದವು. ಶಾರದಾ ಭಜನಾ ಮಂಡಳಿಯ ಮಹಿಳೆಯರು ವಿವಿಧ ಭಜನೆ, ಭಗವದ್ಗೀತೆಯ ಸ್ತೋತ್ರಗಳನ್ನು ಹಾಡಿದರು.

ಸೂಗೂರಿನಲ್ಲಿರುವ ಬಾಲಾಜಿ ದೇವಸ್ಥಾನದಲ್ಲಿ ಆಚರಿಸುವ ಏಕಾದಶಿ ಅತ್ಯಂತ ವಿಶಿಷ್ಠವಾದುದು. ತಿರುಮಲನ ಬಾಲ ಅವತಾರ ಇರುವ ದೇವಸ್ಥಾನವಿದು.

ಉಳಿದಂತೆ, ಇಲ್ಲಿನಬಸವೇಶ್ವರ ಕಾಲೊನಿ, ಜೇವರ್ಗಿ ಕಾಲೊನಿ, ಶಹಾಬಜಾರ್‌ನ ಅನಂತಶಯನ ಬಾಲಾಜಿ ಮಂದಿರ, ರಾಮ ಮಂದಿರ, ಗಣೇಶನಗರದ ಬಾಲಾಜಿ ವೆಂಕಟರಮಣ ದೇವಸ್ಥಾನದಲ್ಲಿ ಕೂಡ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.

‘ಗೀತಾ’ ಜಯಂತಿ, ಉಪವಾಸ ವ್ರತ

ಶಿವರಾತ್ರಿ ಏಕಾದಶಿ, ಪಾಂಡುರಂಗ ಏಕಾದಶಿ ಹಾಗೂ ವೈಕುಂಠ ಏಕಾದಶಿ; ಈ ಮೂರು ಏಕಾದಶಿಗಳು ಹಿಂದೂ ಧರ್ಮೀಯರು ಹೆಚ್ಚಾಗಿ ಪಾಲಿಸುವ ಹಬ್ಬಗಳು. ಇದರಲ್ಲೂ ವೈಕುಂಠ ಏಕಾದಶಿಯೇ ಶ್ರೇಷ್ಠ ಎಂಬುದು ನಂಬಿಕೆ. ಈ ದಿನ ಉಪವಾಸ ವ್ರತ ಮಾಡುವುದೇ ಮುಖ್ಯ ಸಂಪ್ರದಾಯ.

ಉಳಿದೆಲ್ಲ ಹಬ್ಬಗಳಂತೆ ಈ ಏಕಾದಶಿಗೆ ಬಗೆಬಗೆಯ ಖಾದ್ಯಗಳನ್ನು ಮಾಡುವುದಿಲ್ಲ. ಬದಲಾಗಿ, ಇಡೀ ದಿನ ವೈಕುಂಠ ದ್ವಾರ ಪ್ರವೇಶಕ್ಕಾಗಿ ನಿರಾಹಾರಿಯಾಗಿ ಕಾದು ಕುಳಿತುಕೊಳ್ಳಬೇಕು ಎಂಬುದು ಆಚರಣೆಯಿಂದ ಬಂದಿದೆ ಎನ್ನುವುದು ವೆಂಕಟೇಶ್ವರ ದೇವಸ್ಥಾನದ ಮುಖ್ಯಸ್ಥ ಬಾಲಣ್ಣ ಅವರ ಹೇಳಿಕೆ.

ವೈಕುಂಠ ಏಕಾದಶಿಯ ದಿನದಂದೇ ಶ್ರೀಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡಿದ ಎಂಬ ಕಾರಣಕ್ಕೆ ಈ ದಿನದಂದೇ ‘ಗೀತಾ ಜಯಂತಿ’ ಕೂಡ ಆಚರಿಸಲಾಗುತ್ತದೆ. ದರ್ಶನಕ್ಕೆ ಬಂದ ಎಲ್ಲರಿಗೂ ಗೀತೋಪದೇಶ ನೀಡಿ, ಫಲಮಂತ್ರಾಕ್ಷತೆ ಹಾಗೂ ಫಲತಾಂಬೂಲ ನೀಡುವುದು ಪದ್ಧತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.