ADVERTISEMENT

ಅನುಭವ ಮಂಟಪವೇ ಮೊದಲ ಸಂವಹನ ಕೇಂದ್ರ: ರಂಜಾನ್ ದರ್ಗಾ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 4:52 IST
Last Updated 13 ನವೆಂಬರ್ 2021, 4:52 IST
ಕಲಬುರಗಿಯ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಬಸವವರಾಜ ದೇಶಮುಖ ಉದ್ಘಾಟಿಸಿರು. ರಂಜಾನ್ ದರ್ಗಾ,‌ ಟಿ.ವಿ. ಸಿವಾನಂದನ್‌ , ಡಾ.ನೀಲಾಂಬಿಕಾ ಶೇರಿಕಾರ, ಕೃಪಾಸಾಗರ ಗೊಬ್ಬೂರ್ ಇದ್ದರು
ಕಲಬುರಗಿಯ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಬಸವವರಾಜ ದೇಶಮುಖ ಉದ್ಘಾಟಿಸಿರು. ರಂಜಾನ್ ದರ್ಗಾ,‌ ಟಿ.ವಿ. ಸಿವಾನಂದನ್‌ , ಡಾ.ನೀಲಾಂಬಿಕಾ ಶೇರಿಕಾರ, ಕೃಪಾಸಾಗರ ಗೊಬ್ಬೂರ್ ಇದ್ದರು   

ಕಲಬುರಗಿ: ‘12ನೇ ಶತಮಾನದಲ್ಲಿ ಬಸವಾದಿ ಶರಣರು ಕಟ್ಟಿಕೊಂಡ ಅನುಭವ ಮಂಟಪವೇ ಭಾರತದ ಮೊದಲ ಕಮ್ಯೂನಿಕೇಶನ್ ಸೆಂಟರ್. ವಚನಗಳೇ ಮಾಧ್ಯಮಗಳಾಗಿವೆ’ ಎಂದುಪತ್ರಕರ್ತ ರಂಜಾನ್ ದರ್ಗಾ ಅಭಿಪ್ರಾಯ ಪಟ್ಟರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ‘ಮೀಡಿಯಾ ವ್ಯಾಲ್ಯೂಸ್ ಇನ್ ದಿ ಪ್ರಸೆಂಟ್ ಸಿನೆರಿಯೊ’ ವಿಷಯ ಕುರಿತು ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮುಖ್ಯತಿಥಿಯಾಗಿ ಮಾತನಾಡಿದರು.

‘12ನೇ ಶತಮಾನದ ಬಸವಣ್ಣನವರಂತೆ ಶರಣಬಸವೇಶ್ವರರು ಅರಿವನ್ನು ಬರವಣಿಗೆಯಲ್ಲಿ ತರಲಿಲ್ಲ. ಆದರೆ, ಅರಿವನ್ನು ಆಚರಣೆಗೆ ತಂದರು’ ಎಂದ ಅವರು, ‘ಪ್ರಶ್ನೆ ಮಾಡುವ ನೈತಿಕ ಶಕ್ತಿ ಇರುವ ಪತ್ರಕರ್ತ ಮನುಷ್ಯರನ್ನು ಒಂದಾಗಿ ನೋಡುವ ಪರಿಪಾಠ ಇಟ್ಟುಕೊಳ್ಳಬೇಕು’ ಎಂದೂ ಹೇಳಿದರು.

ADVERTISEMENT

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ‘ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಹಾಗೂ ಜ್ಞಾನಕ್ಕೆ ಹೆಚ್ಚು ಹೊತ್ತು ನೀಡಲಾಗುತ್ತಿದ್ದು, ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅವರ 87ನೇ ಹುಟ್ಟು ಹಬ್ಬದ ಅಂಗವಾಗಿ ಐದು ದಿನದ ಕಾರ್ಯಕ್ರಮ ಹಮ್ಮಿಕೊಳ್ಖಲಾಗಿದೆ.‌ ಕಾರ್ಯಕ್ರಮ ಔಚಿತ್ಯ ಹಾಗೂ ಅರ್ಥಪೂರ್ಣವಾಗಿದೆ’ ಎಂದರು.

‘ಸಂಪಾದಕ ಆಗುವುದು ಸುಲಭ. ಆದರೆ ಪತ್ರಕರ್ತರಾಗುವುದು ಕಷ್ಟ. ಸರಳವಾಗಿ ಬರೆಯುವುದೂ ಕಠಿಣ. ಸತ್ಯ, ನ್ಯಾಯ, ನೀತಿ ಕಾಪಾಡಿಕೊಂಡು ಬರುವುದು ಪತ್ರಿಕೋದ್ಯಮದ ಮುಖ್ಯ ಧ್ಯೇಯವಾಗಿದೆ’ ಎಂದು ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಡೀನ್ ಟಿ.ವಿ. ಸಿವಾನಂದನ್‌ ಅಭಿಪ್ರಾಯ ಪಟ್ಟರು.

ನಂತರ ಜರುಗಿದ ‘21ನೇ ಶತಮಾನದಲ್ಲಿ ವಿದ್ಯುನ್ಮಾನ ಮತ್ತು ಸೋಷಿಯಲ್ ಮೀಡಿಯಾ’ ವಿಷಯ ಕುರಿತು ಹೈದರಾಬಾದ್‌ನ ಧರ್ಮೇಂದ್ರ ಪೂಜಾರಿ, ನಮ್ರತಾ, ಡಾ.ಸುನೀತಾ ಪಾಟೀಲ ವಿಷಯ ಮಂಡಿಸಿದರು. ಪತ್ರಕರ್ತ– ಲೇಖಕ ಡಾ.ಶಿವರಂಜನ್ ಸತ್ಯಂಪೇಟೆ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಪಿ.ಎಂ.‌ಮಣ್ಣೂರ ಸಮಾರೋಪ ಭಾಷಣ ಮಾಡಿದರು.

ಡಾ.‌ಸೀಮಾ ಪಾಟೀಲ ಪ್ರಾರ್ಥಿಸಿದರು. ಡಾ.ಸಿದ್ದಮ್ಮ ಗುಡೇದ ನಿರೂಪಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂಹನ ವಿಭಾಗದ ಸಂಚಾಲಕ ಕೃಪಾಸಾಗರ ಗೊಬ್ಬೂರ್ ಪ್ರಾಸ್ತಾವಿಕ ಮಾತನಾಡಿದರು. ಜಾನಕಿ ಹೊಸೂರ ವೇದಿಕೆಯಲ್ಲಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ.ನೀಲಾಂಬಿಕಾ ಶೇರಿಕಾರ ಅಧ್ಯಕ್ಷತೆ ವಹಿಸಿದ್ದರು.‌

ಗೋಷ್ಠಿಗಳು: ‌‘ಶ್ರವ್ಯ ಹಾಗೂ ದೃಶ್ಯಗಳ ಸಂಗಮವಾಗಿರುವ ಎಲೆಕ್ಟ್ರಾನಿಕ್ ಮತ್ತು ಸೋಷಿಯಲ್ ಮೀಡಿಯಾಗಳಿಗೆ 21ನೇ ಶತಮಾನದಲ್ಲಿ ಅಗ್ರಸ್ಥಾನವಿದೆ. ಈ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ಹರಿಬಿಡಲಾಗುತ್ತಿದ್ದು, ಇವುಗಳ ಸತ್ಯಾಸತ್ಯತೆಯನ್ನು ಒರೆಗಲ್ಲಿಗೆ ಹಚ್ಚಿ ನಂಬಬೇಕು. ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವಂತೆ ಸಮೂಹ ಮಾಧ್ಯಮ ಕ್ಷೇತ್ರದಲ್ಲಿ ನೈತಿಕತೆಯ ಗೈರು ಹಾಜರಿ ಎದ್ದು ಕಾಣುತ್ತಿದೆ’ ಎಂದು ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಹೇಳಿದರು.

ವಿಚಾರ ಸಂಕಿರಣದಲ್ಲಿ ‘ವಿದ್ಯುನ್ಮಾನ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ’ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಮಾಹಿತಿ, ಮನರಂಜನೆ ಜೊತೆಗೆ ಅರಿವು, ಜಾಗೃತಿ ಮೂಡಿಸುವುದು ಅಗತ್ಯವಾಗಿದೆ’ ಎಂದರು.

ನಂತರ ನಡೆದ ಗೋಷ್ಠಿಯಲ್ಲಿ ನಮ್ರತಾರಾವ, ‘ಮಾಧ್ಯಮದಲ್ಲಿ ಮಹಿಳೆಯನ್ನು ಕೇವಲ ಕೈಗೊಂಬೆಯನ್ನಾಗಿ ಮಾಡಲಾಗುತ್ತಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಇಂದಿಗೂ ನಲುಗುತ್ತಿದ್ದು, ಅದರಿಂದ ಮಹಿಲಕೆ ಹೊರ ಬರಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.