ಕಲಬುರಗಿ: ‘ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಬಳಿಕ ರೈತರ ಪಂಪ್‌ಸೆಟ್, ಹಾಲಿನ ದರ ಹೆಚ್ಚಳ, ಬಸ್ ಪ್ರಯಾಣ ದರ ಹೆಚ್ಚಳ, ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಲೆ ಏರಿಕೆಯ ಗ್ಯಾರಂಟಿಯನ್ನೂ ನೀಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹರಿಹಾಯ್ದರು.
ಬೆಲೆ ಏರಿಕೆ ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ ‘ಜನಾಕ್ರೋಶ ಯಾತ್ರೆ’ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆಯಾಗಿದೆ. ₹ 25 ಸಾವಿರಕ್ಕೆ ಸಿಗುತ್ತಿದ್ದ ರೈತರ ನೀರಾವರಿ ಪಂಪ್‌ಸೆಟ್ ಇದೀಗ ₹ 3 ಲಕ್ಷಕ್ಕೆ ಏರಿಕೆಯಾಗಿದೆ. ಹಾಲಿನ ಬೆಲೆ ₹ 9 ಹೆಚ್ಚಾಗಿದೆ. ಪ್ರಯಾಣದರ ಹೆಚ್ಚಳದಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.
‘ಕೇವಲ ಬಾಯಿ ಮಾತಿನಲ್ಲಿ ದಲಿತರ, ಕಲ್ಯಾಣ ಕರ್ನಾಟಕದ ಉದ್ಧಾರ ಮಾಡುತ್ತೇವೆ ಎಂದು ಹೇಳುತ್ತಾರೆ. ತಾಕತ್ತಿದ್ದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಯಡಿಯೂರಪ್ಪ ಸೇರಿ ಬಿಜೆಪಿ ಸರ್ಕಾರದಲ್ಲಿ ಎಷ್ಟು ಅನುದಾನ ದೊರಕಿದೆ ಹಾಗೂ ಸಿದ್ದರಾಮಯ್ಯ ಎಷ್ಟು ಅನುದಾನ ನೀಡಿದ್ದಾರೆ ಎಂಬ ಕುರಿತು ಬಹಿರಂಗ ಚರ್ಚೆಗೆ ಬರಲಿ’ ಎಂದು ವಿಜಯೇಂದ್ರ ಸವಾಲು ಹಾಕಿದರು.
ನಿತ್ಯ ಲವ್ ಜಿಹಾದ್ ಪ್ರಕರಣಗಳು ಕಂಡು ಬರುತ್ತಿವೆ. ರಾಜ್ಯದ ಹಲವೆಡೆ ಗೋಹತ್ಯೆ ನಡೆಯುತ್ತಿದೆ. ಆದರೆ ಲಜ್ಜೆಗೆಟ್ಟ ಮುಖ್ಯಮಂತ್ರಿ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದ್ದಾರೆಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಮಧ್ಯೆ ಜಗಳ ತಂದಿಟ್ಟು ತಮ್ಮ ಮಗ ಪ್ರಿಯಾಂಕ್ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲು ತಂತ್ರಗಾರಿಕೆ ಹೆಣೆದಿದ್ದಾರೆ. ಸರ್ಕಾರ ಬಿದ್ದರೆ ಖರ್ಗೆ ಅವರೇ ಕಾರಣವೇ ಹೊರತು ಮೋದಿಯವರಲ್ಲಬಿ.ಶ್ರೀರಾಮುಲು ಮಾಜಿ ಸಚಿವ
ಕಾಂಗ್ರೆಸ್ ಕಾರ್ಯಕರ್ತರಿಂದ ಧಿಕ್ಕಾರದ ಸ್ವಾಗತ
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರ ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮದ ಬಳಿಯ ಕಾಗಿಣಾ ನದಿಯಲ್ಲಿ ಅವರ ಬೆಂಬಲಿಗರಿಂದ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪರಿಶೀಲಿಸಲು ಬಿ.ವೈ.ವಿಜಯೇಂದ್ರ ಅವರು ನದಿ ಪಾತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿದರು. ‘ಬಿಜೆಪಿ ಸರ್ಕಾರ ಇದ್ದಾಗಲೇ ಇಲ್ಲಿ ಮರಳು ತೆಗೆಯಲು ಕೆಆರ್‌ಐಡಿಎಲ್‌ಗೆ ಅನುಮತಿ ನೀಡಿತ್ತು. ಈಗಿನ ಸರ್ಕಾರವೂ ಅದನ್ನು ಮುಂದುವರಿಸುತ್ತಿದೆ. ನೀವು ಅನುಮತಿ ನೀಡಿ ಈಗ ವಿರೋಧಿಸಿದರೆ ಹೇಗೆ’ ಎಂದು ಪ್ರಶ್ನಿಸಿದರು. ಕೆಲ ಕ್ಷಣದಲ್ಲೇ ಪರಿಶೀಲನೆ ಕೆಲಸ ಮುಗಿಸಿದ ವಿಜಯೇಂದ್ರ ಸ್ಥಳದಿಂದ ಕಲಬುರಗಿಗೆ ಮರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.