ಕಲಬುರಗಿ: ‘ವಿಶ್ವಕರ್ಮ ಸಮಾಜದವರು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದು ಅಫಜಲಪುರದ ಪ್ರಣವನಿರಂಜನ ಸ್ವಾಮೀಜಿ ಹೇಳಿದರು.
ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ಕಾರ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮಾಜದವರು ಧರ್ಮದ ಕಾಲಂನಲ್ಲಿ ‘ಹಿಂದೂ’, ಜಾತಿ ಕಾಲಂನಲ್ಲಿ ‘ವಿಶ್ವಕರ್ಮ’ ಎಂದು ಬರೆಸಬೇಕು’ ಎಂದು ಸಲಹೆ ನೀಡಿದರು.
ಸುಲೇಪೇಟದ ದೊಡ್ಡೇಂದ್ರ ಸ್ವಾಮೀಜಿ ಮಾತನಾಡಿ, ‘ಶರಣರು, ಸಂತರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ’ ಎಂದು ಹೇಳಿದರು.
ಸಮಾಜದ ಮುಖಂಡ ಗುಂಡಪ್ಪ ಡಿ.ವಿಶ್ವಕರ್ಮ ವಿಶೇಷ ಉಪನ್ಯಾಸ ನೀಡಿದರು. ಕಲಬುರಗಿ– ಯಾದಗಿರಿ ವಿಶ್ವಕರ್ಮ ಏಕದಂಡಗಿ ನರಸಿಂಹ ಮಠದ ಸುರೇಂದ್ರ ಸ್ವಾಮೀಜಿ, ಸೊಂತ ಶರಣ ಶಂಕರಲಿಂಗ ಮಹಾರಾಜರು, ನಾಗೇಶ ಮುತ್ಯಾ ಗಣಜಲಖೇಡ, ಬೀದರ್‌ನ ಸಿದ್ದೇಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಿವರಾಜ ಶಾಸ್ತ್ರಿ ಕುಸನೂರ, ವಿಶ್ವಕರ್ಮ ಸಮಾಜದ ಅಧ್ಯಕ್ಷ ವೀರಣ್ಣ ಮುತ್ಯಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ಅ.ನಾಶಿ, ಚುನಾವಣಾ ತಹಶೀಲ್ದಾರ್ ಪಂಪಯ್ಯ, ಶಿವಶರಣಪ್ಪ ಧನ್ನಿ ಉಪಸ್ಥಿತರಿದ್ದರು. ಸೂರ್ಯಕಾಂತ ಬಡಿಗೇರ ನಿರೂಪಿಸಿದರು.
ವರ್ಷಿಣಿ ಆರ್.ವಿಶ್ವಕರ್ಮ, ಅವನಿ ಪಂಚಾಳ ಅವರ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಸಮಾರಂಭಕ್ಕೂ ಮುನ್ನ ನಗರದ ಸಂತ್ರಾಸವಾಡಿಯಲ್ಲಿನ ಕಾಳಿಕಾದೇವಿ ದೇವಸ್ಥಾನದಿಂದ ರಂಗಮಂದಿರದ ವರೆಗೆ ಭಗವಾನ್ ವಿಶ್ವಕರ್ಮರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.