ADVERTISEMENT

ಕಲಬುರಗಿ | ಮತದಾನದ ಹಕ್ಕು, ಜನರ ಧ್ವನಿ: ಟಿ.ಎನ್.ಇನವಳ್ಳಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:12 IST
Last Updated 26 ಜನವರಿ 2026, 7:12 IST
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿದವರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿದವರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು   

ಕಲಬುರಗಿ: ‘ಮತದಾನ ಕೇವಲ ಕಾಗದದ ಮೇಲಿನ ಹಕ್ಕಲ್ಲ. ಅದು ಜನರ ಧ್ವನಿ’ ಎಂದು ಕಲಬುರಗಿ ಹೈಕೋರ್ಟ್‌ ಪೀಠದ ನ್ಯಾಯಮೂರ್ತಿ ಟಿ.ಎನ್.ಇನವಳ್ಳಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಎಸ್‌.ಎಂ.ಪಂಡಿತ್ ರಂಗಮಂದಿರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಂವಿಧಾನ ನಮಗೆ ನೀಡಿರುವ ಈ ಹಕ್ಕನ್ನು ಬಹಳ ಬುದ್ಧಿವಂತಿಕೆಯಿಂದ ಬಳಸಬೇಕು. ಸಮಾನತೆ, ನ್ಯಾಯ ಮತ್ತು ಸಮಾಜಕ್ಕಾಗಿ ಕೆಲಸ ಮಾಡುವ ನಾಯಕರನ್ನು ಆಯ್ಕೆ ಮಾಡಬೇಕು. ಹೇಗೆ ಮತ್ತು ಯಾರಿಗೆ ಮತ ಹಾಕಬಾರದು ಎನ್ನುವುದನ್ನು ಅರಿತುಕೊಳ್ಳಬೇಕು’ ಎಂದರು.

ADVERTISEMENT

‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ನಿಜವಾದ ಯಜಮಾನರು. ಆದ ಕಾರಣ ಆಮಿಷಕ್ಕೆ ಒಳಗಾಗದೆ ಮತ ಚಲಾವಣೆ ಮಾಡಬೇಕು. ಸ್ವಂತ ದುಡಿದಿದ್ದೇ ಉಳಿಯುವುದಿಲ್ಲ. ಸುಲಭ ಹಾಗೂ ಉಚಿತವಾಗಿ ಸಿಗುವುದು ಹೇಗೆ ಉಳಿಯುತ್ತದೆ’ ಎಂದು ಪ್ರಶ್ನಿಸಿದರು.   

‘ಮುಕ್ತ, ನಿರ್ಭೀತಿಯಿಂದ ಮತ ಚಲಾಯಿಸುವಂಥ ವಾತಾವರಣ ನಿರ್ಮಾಣವಾಗಬೇಕು. ಮತಗಟ್ಟೆಗಳಲ್ಲಿ ಪೊಲೀಸರ ನೆರವಿಲ್ಲದೆ ಮತ ಚಲಾಯಿಸುವಂಥ ಮುಕ್ತತೆ ಬೇಕು. ಆಗ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ. ಇದಕ್ಕೆ ಅಧಿಕಾರಿಗಳು ಶ್ರಮಿಸಬೇಕು’ ಎಂದು ಹೇಳಿದರು. 

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ, ‘ಕೆಲಸದ ಒತ್ತಡದ ನಡುವೆಯೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮವಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ಒಟ್ಟು 24 ಲಕ್ಷ ಮತದಾರರಿದ್ದಾರೆ. 9 ಕ್ಷೇತ್ರಗಳಿವೆ. 2,300ಕ್ಕೂ ಹೆಚ್ಚು ಮತಗಟ್ಟೆಗಳಿವೆ. ಇಂಥ ದೊಡ್ಡ ಜಿಲ್ಲೆಯಲ್ಲಿ ಚುನಾವಣಾ ಕಾರ್ಯ ಸವಾಲಿನ ಕೆಲಸ. ಅದರ ನಡುವೆಯೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ ಕಾರಣ ಜಿಲ್ಲೆಗೆ ಹೆಸರು ಬಂದಿದೆ’ ಎಂದು ತಿಳಿಸಿದರು.

ಇದೇ ವೇಳೆ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿದವರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು. 

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿವರೆಗೂ ಸೈಕಲ್ ಜಾಥಾ ನಡೆಯಿತು. ಜಗತ್ ವೃತ್ತದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ಅವರು ಜಾಥಾಕ್ಕೆ ಚಾಲನೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ, ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹಾಜರಿದ್ದರು.

ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಸೈಕಲ್ ಜಾಥಾ ನಡೆಸಲಾಯಿತು

2,300ಕ್ಕೂ ಹೆಚ್ಚು ಮತಗಟ್ಟೆಗಳು ಚುನಾವಣಾ ಸಾಕ್ಷರತಾ ಕ್ಷಬ್‌ ಸ್ಥಾಪನೆ ಗುರುತಿನ ಚೀಟಿ ವಿತರಣೆ

ಮೊದಲು ಜಿಲ್ಲೆಯ ಮತದಾರರ ಪಟ್ಟಿಯಲ್ಲಿ 1000 ಪುರುಷರಿಗೆ ಕೇವಲ 932 ಮಹಿಳೆಯರ ಹೆಸರಿತ್ತು. ಜಾಗೃತಿಯ ಪರಿಣಾಮ ಆ ಸಂಖ್ಯೆ ಈಗ 988ಕ್ಕೆ ತಲುಪಿದೆ
ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ

‘ತಾಂಡಾಗಳಲ್ಲಿ ಮತದಾನ ಜಾಗೃತಿ’ ‘ಜಿಲ್ಲೆಯಲ್ಲಿ ತಾಂಡಾಗಳು ಹೆಚ್ಚಿನ ಪ್ರಮಾಣದಲ್ಲಿವೆ. ಗುಳೆ ಸಾಮಾನ್ಯವಾಗಿದೆ. ತಾಂಡಾಗಳಿಗೆ ಭೇಟಿ ನೀಡಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ. ಇದರ ಪರಿಣಾಮ ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 67ರಷ್ಟು ಮತದಾನವಾಗಿದೆ’ ಎಂದು ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ ತಿಳಿಸಿದರು. ‘ಮತದಾನದ ಪ್ರಮಾಣ ಹೆಚ್ಚಳ ಮಾಡಲು ಸ್ವೀಪ್ ಸಮಿತಿ ಮೂಲಕ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಕಾಲೇಜು ಸಾರ್ವಜನಿಕ ಸ್ಥಳಗಳು ಮತ್ತು ಕೆಲಸದ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.