
ವಾಡಿ: ಕಾರ್ಮಿಕ ನಗರಿ ವಾಡಿ ಪಟ್ಟಣದಲ್ಲಿನ ಸರ್ಕಾರಿ ಮಾದರಿ ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿ ನಿಂತಿದ್ದು, ಕೂಡಲೇ ಅನುದಾನ ಒದಗಿಸಿ ಸುಸುಜ್ಜಿತ ಕಟ್ಟಡ ನಿರ್ಮಿಸಿ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಮತ್ತು ನಮ್ಮ ಕರ್ನಾಟಕ ಸೇನೆ ವತಿಯಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಲಾಯಿತು.
ಅತ್ಯಂತ ಹಳೆಯ ಶಾಲೆ ಇದಾಗಿದೆ. 13 ಕೋಣೆಗಳು ಸಂಪೂರ್ಣ ಹಾಳಾಗಿ ನಿಂತಿದ್ದು, ಮಳೆ ಬಂದಾಗ ಸೋರುತ್ತವೆ. ಈಚೆಗೆ ಸುರಿದ ಮಳೆಯಿಂದ ಚತ್ತು ಕಳಚಿ ಬಿದ್ದು ಪೀಠೋಪಕರಣಗಳು ಪುಡಿಪುಡಿಯಾಗಿದ್ದವು. ರಜೆಯ ಕಾರಣ ದೊಡ್ಡ ಅನಾಹುತ ತಪ್ಪಿತ್ತು. ಇದೇ ಶಾಲೆಯ ಅಂಗಳದಲ್ಲಿ ಆಂಗ್ಲ, ಮರಾಠಿ ಮತ್ತು ಉರ್ದು ಮಾಧ್ಯಮ ಶಾಲೆಗಳು ನಡೆಯುತ್ತಿವೆ. ಶಾಲಾ ಕೋಣೆಗಳನ್ನು ಸಂಪೂರ್ಣ ಕೆಡವಿ ಹೊಸದಾಗಿ 3 ಅಂತಸ್ತಿನ ಕಟ್ಟಡ ನಿರ್ಮಿಸಿ ಇಲ್ಲಿಯೇ ಕಾಲೇಜು ಶಿಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಕಸಾಪ ಅಧ್ಯಕ್ಷ ಸಿದ್ದಯ್ಯಶಾಸ್ತ್ರಿ ನಂದೂರಮಠ, ಕರ್ನಾಟಕ ಸೇನೆಯ ತಾಲ್ಲೂಕು ಅಧ್ಯಕ್ಷ ಸುನೀಲ ಗುತ್ತೇದಾರ, ಕ.ರ.ವೇ ಸ್ಥಳೀಯ ಅಧ್ಯಕ್ಷ ಶಿವಕುಮಾರ ಗುತ್ತೇದಾರ, ಪ್ರಮುಖರಾದ ಚಂದ್ರು ಕರುಣಿಕ, ಅಂಬರೀಶ ಮಾಳಗಿ, ಖೇಮಲಿಂಗ ಬೆಳಮಗಿ, ಗಣೇಶ ರಾಠೋಡ, ಬಸವರಾಜ ಕೇಶ್ವಾರ ಇನ್ನಿತರರು ಇದ್ದರು.