ADVERTISEMENT

ವಾಡಿ | 'ಮರ್ಯಾದೆಗೇಡು ಹತ್ಯೆ ವಿರುದ್ಧ ಕಠಿಣ ಕಾನೂನು ಜಾರಿಯಾಗಲಿ'

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:55 IST
Last Updated 12 ಜನವರಿ 2026, 7:55 IST
ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಪಟ್ಟಣದಲ್ಲಿ ರವಿವಾರ ಜರುಗಿದ ಉಪನ್ಯಾಸ ಕಾರ್ಯಕ್ರಮವನ್ನು ಪುರಸಭೆ ಸಮುದಾಯ ಸಂಘಟಕ ಕಾಶಿನಾಥ ಧನ್ನಿ ಉದ್ಘಾಟಿಸಿದರು. ಜಗದೇವಿ ಗಾಯಕವಾಡ, ಶ್ರಾವಣಕುಮಾರ ಮೊಸಲಗಿ ಹಾಗೂ ಇನ್ನಿತರರು ಇದ್ದರು
ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಪಟ್ಟಣದಲ್ಲಿ ರವಿವಾರ ಜರುಗಿದ ಉಪನ್ಯಾಸ ಕಾರ್ಯಕ್ರಮವನ್ನು ಪುರಸಭೆ ಸಮುದಾಯ ಸಂಘಟಕ ಕಾಶಿನಾಥ ಧನ್ನಿ ಉದ್ಘಾಟಿಸಿದರು. ಜಗದೇವಿ ಗಾಯಕವಾಡ, ಶ್ರಾವಣಕುಮಾರ ಮೊಸಲಗಿ ಹಾಗೂ ಇನ್ನಿತರರು ಇದ್ದರು   

ವಾಡಿ: ‘ಜಾತಿವಿನಾಶವಾಗಿ ಸಮಸಮಾಜ ನಿರ್ಮಾಣದ ಹಂಬಲ ಹೊತ್ತಿದ್ದ ಶರಣರ ನಾಡಿನಲ್ಲಿ ಮರ್ಯಾದೆಗೇಡು ಹತ್ಯೆ ಮಾರ್ಧನಿಸುತ್ತಿರುವುದು ಅತ್ಯಂತ ಕರಳು ಹಿಂಡುವ ಸಂಗತಿಯಾಗಿದೆ’ ಎಂದು ಮಹಿಳಾಪರ ಚಿಂತಕಿ ಜಯದೇವಿ ಗಾಯಕವಾಡ ಹೇಳಿದರು.

ಪಟ್ಟಣದ ಸೆಂಟ್ ಅಂಬ್ರೊಸ್ ಕಾನ್ವೆಂಟ್ ಶಾಲೆಯಲ್ಲಿ ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ರವಿವಾರ ಆಯೋಜಿಸಿದ್ದ ‘ಮರ್ಯಾದೆಗೇಡು ಹತ್ಯೆ ಹಿಂದಿನ ಮನುವಾದ ಹುಡುಕುತ್ತಾ ಒಂದು ಚರ್ಚೆ’ ಎಂಬ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಮರ್ಯಾದೆಗೇಡು ಹತ್ಯೆ ವಿರುದ್ಧ ರಾಜ್ಯ ಸರ್ಕಾರ ಈ ಕೂಡಲೇ ಕಠಿಣ ಕಾನೂನು ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಬುದ್ಧ ತನ್ನ ಸಂಘದಲ್ಲಿ ಜಾತಿ ಪರಿಗಣಿಸದೆ ಎಲ್ಲರಿಗೂ ಸಮಾನ ಅವಕಾಶ ನೀಡಿದರು. ನಂತರ ಬಸವಣ್ಣನ ನೇತೃತ್ವದಲ್ಲಿ ನಡೆದ ಶರಣ ಚಳುವಳಿಯಲ್ಲಿ, ಜಾತಿ ಧರ್ಮದ ಗಡಿ ದಾಟಿ ಅಂತರಜಾತಿ ವಿವಾಹ ಮಾಡಿಸಿದರು. ಜಾತಿಯೇ ಇಲ್ಲದ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಅರ್ಥ ಮಾಡಿಕೊಂಡು ಅವರ ಹೋರಾಟ ಮುನ್ನೆಡೆಸಬೇಕು’ ಎಂದರು.

‘ಮಾನ್ಯಳ ಹತ್ಯೆ ಖಂಡಿಸಿ ಯಾವ ಮಹಿಳೆ ಸಂಘಟನೆಗಳು ಧ್ವನಿ ಎತ್ತದಿರುವುದು ಬೇಸರದ ಸಂಗತಿಯಾಗಿದೆ. ಮಾನ್ಯಳ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆವಿಧಿಸಬೇಕು’ ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಪುರಸಭೆ ಸಮುದಾಯ ಸಂಘಟಕ ಕಾಶಿನಾಥ ಧನ್ನಿ, ಸೆಂಟ್ ಅಂಬ್ರೊಸ್ ಶಾಲೆಯ ಪ್ರಿನ್ಸಿಪಾಲರಾದ ಗ್ರೇಸಿ, ಯಶೋಧಾ ಪವಾರ, ವೇದಿಕೆಯ ಅಧ್ಯಕ್ಷ ಶ್ರಾವಣಕುಮಾರ ಮೊಸಲಗಿ ಮಾತನಾಡಿದರು

ಖೇಮಲಿಂಗ ಬೆಳಮಗಿ ಅಧ್ಯಕ್ಷತೆ ವಹಿಸಿದ್ದರು, ದೇವಿಂದ್ರ ಕರದಳ್ಳಿ ಪ್ರಾಸ್ತಾವಿಕ ಮಾತನಾಡಿದರು, ದಯಾನಂದ ಖಜೂರಿ ಸ್ವಾಗತಿಸಿದರು, ಸಿದ್ದಯ್ಯ ಶಾಸ್ತ್ರಿ ನಂದೂರಮಠ ವಂದಿಸಿದರು. ರವಿಕುಮಾರ ಕೊಳಕೂರ ನಿರೂಪಿಸಿದರು.

ಜನಕಲಾ ತಂಡದ ಶೋಭಾ ನಿಂಬರ್ಗಾ ಮತ್ತು ಸಂಗಡಿಗರು ಜಾಗೃತ ಗೀತೆಗಳ ಪ್ರಸ್ತುತಪಡಿಸಿದರು.

ವಿಕ್ರಮ ನಿಂಬರ್ಗಾ, ಹರಿಶ್ಚಂದ್ರ ಕರಣಿಕ, ರಾಯಪ್ಪ ಕೊಟಗಾರ, ಮಡಿವಾಳಪ್ಪ ಹೇರೂರ, ಭೀಮಾ ನಾಟೇಕರ, ಬೈಲಪ್ಪ ಜೇವರ್ಗಿ, ಬಸವರಾಜ ಕೇಶ್ವಾರ, ಈರಣ್ಣ ಯಲಗಟ್ಟಿ, ಶೇಖ್ ಅಲ್ಲಾಭಕ್ಷ, ಸುಜಾತ ಮೊಸಲಗಿ, ಸುನಿತಾ ಖಜೂರಿ, ಗೀತಾ ಕೋಳಕೂರ, ವಿಜಯಕುಮಾರ ಗಾಯಕವಾಡ, ವಿಠ್ಠಲ ಠಾಣೆದಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.