ವಾಡಿ: ‘ಭಾರತ ದೇಶ ಸುರಕ್ಷಿತ, ಸದೃಢವಾಗಬೇಕಾದರೆ ನರೇಂದ್ರ ಮೋದಿಯಂತ ನಾಯಕ ಮತ್ತೊಮ್ಮೆ ಪ್ರಧಾನಿಯಾಗಬೇಕು’ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದ ಸೇವಾಲಾಲ್ ದೇವಸ್ಥಾನ ಆವರಣದಲ್ಲಿ ಭಾನುವಾರ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಪರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮತಯಾಚಿಸಿ ಮಾತನಾಡಿದರು.
‘ಸಮರ್ಥ ನಾಯಕ ಇಲ್ಲದಿದ್ದರೆ ದೇಶ ಭಯೋತ್ಪಾದಯ ಕಪಿಮುಷ್ಟಿಗೆ ಸಿಲುಕುತ್ತದೆ. ಕಾಂಗ್ರೆಸ್ ಆಡಳಿತದಲ್ಲಿ ಇದನ್ನು ನೋಡಿದ್ದೇವೆ. ಮೋದಿ ಪ್ರಧಾನಿಯಾದ ಬಳಿಕ 10 ವರ್ಷಗಳಲ್ಲಿ ಯಾವ ಭಯೋತ್ಪಾದಕ ದುಷ್ಕೃತ್ಯಗಳು ದೇಶದಲ್ಲಿ ನಡೆದಿಲ್ಲ’ ಎಂದರು.
‘ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿಗಳ ಹೆಸರಲ್ಲಿ ಶೋಷಣೆ ಮಾಡುತ್ತಿದೆ. ಅಡುಗೆ ಮನೆಗೆ ಅಕ್ಕಿ ಬಂದಿಲ್ಲ, ಹೆಣ್ಣು ಮಕ್ಕಳಿಗೆ ಬಸ್ ಪ್ರಯಾಣ ಉಚಿತ ಮಾಡಿ ಗಂಡು ಮಕ್ಕಳಿಗೆ ಡಬಲ್ ಮಾಡಿದ್ದಾರೆ. ವಿದ್ಯುತ್ ಸಹ ಉಚಿತವಾಗಿಲ್ಲ. ಗರೀಬಿ ಹಠಾವೊ ಎನ್ನುತ್ತಲೇ ತಾವು ಶ್ರೀಮಂತರಾದರೇ ಹೊರತು ಬಡವರ ಬದುಕು ಹಸನು ಮಾಡಲಿಲ್ಲ’ ಎಂದು ಕಿಡಿಕಾರಿದರು.
‘ಭಾರತದ ಮುಸ್ಲಿಮರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಹೆಚ್ಚಿದೆ. ನಮ್ಮ ಕ್ಷೇತ್ರದಲ್ಲಿ ಮುಸ್ಲಿಂ ಓಣಿಗಳಿಗೆ ಹೋಗಬೇಡಿ ಸಮಯ ವ್ಯರ್ಥ ಅಷ್ಟೇ. ಅವರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ನಾನು ಯಾವಾಗ್ಲೂ ನಮ್ಮ ಕಾರ್ಯಕರ್ತರಿಗೆ ಹೇಳುತ್ತೇನೆ’ ಎಂದರು.
ಮಾಜಿ ಸಚಿವ ಬಾಬುರಾವ್ ಚವ್ಹಾಣ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಶಾಸಕ ಅವಿನಾಶ ಜಾಧವ, ಮಾತನಾಡಿದರು.
ಪ್ರಮುಖರಾದ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಬಾಬುರಾವ ಚವ್ಹಾಣ, ಶರಣಪ್ಪ ತಳವಾರ, ವಿಠ್ಠಲ್ ನಾಯಕ, ರವೀಂದ್ರ ಸಜ್ಜನಶೆಟ್ಟಿ, ಶಿವಲಿಂಗಪ್ಪ ವಾಡೆದ, ಸ್ಥಳೀಯ ಶಕ್ತಿಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ, ಕಾರ್ಯದರ್ಶಿ ರವಿನಾಯಕ, ಬಸವರಾಜ್ ಪಂಚಾಳ, ಸಿದ್ದಣ್ಣ ಕಲ್ಲಶೆಟ್ಟಿ, ರಾಜು ಮುಕ್ಕಣ್ಣ, ರಿಚರ್ಡ್ ಮಾರೆಡ್ಡಿ, ಭೀಮರಾವ್ ದೊರಿ, ರಮೇಶ ಕಾರಬಾರಿ, ಶರಣಗೌಡ ಚಾಮನೂರು, ಯಂಕಮ್ಮ ಗೌಡಗಾಂವ, ಸುನೀತಾ ರಾಠೋಡ, ಶರಣಮ್ಮ,ನಿರ್ಮಲ ಇಂಡಿ, ಪ್ರಭಾವತಿ ಹಾಗೂ ಇನ್ನಿತರರು ವೇದಿಕೆ ಮೇಲಿದ್ದರು.
ದಲಿತರ ಬಗ್ಗೆ ಮಾತನಾಡುವ ಮಲ್ಲಿಕಾರ್ಜುನ ಖರ್ಗ ತಮ್ಮ ಅರ್ದ ಆಸ್ತಿಯನ್ನು ದಲಿತರಿಗೆ ಹಂಚಲಿ. ಅಪ್ಪ–ಮಗನಿಗೆ ಅಧಿಕಾರದ ದುರಾಸೆ ಬಂದಿದ್ದು ಈಗ ತಮ್ಮ ಅಳಿಯನಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಲು ಹೋರಾಡುತ್ತಿದ್ದಾರೆ
-ಬಸವನಗೌಡ ಪಾಟೀಲ ಯತ್ನಾಳ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.