ಕಲಬುರಗಿ: ‘ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ಧರ್ಮದೊಂದಿಗೆ ಗುರುತಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾನೆ. ಯಾವುದೇ ಜಮಾತ್ ಅಥವಾ ಸಂಸ್ಥೆಯು ಈ ಮೂಲಭೂತ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಅಹ್ಮದಿಯಾ ಮುಸ್ಲಿಂ ಸಂಘಟನೆ ತಿಳಿಸಿದೆ.
ಜಮಾತ್ ಅಹ್ಮದಿಯಾ ಮುಸ್ಲಿಂ ಸಮಾಜದ ಜಿಲ್ಲಾ ಅಧ್ಯಕ್ಷ ಅಬ್ದುಲ್ ಖಾದಿರ್ ಸಜ್ಜಿ ಹೇಳಿಕೆ ನೀಡಿ, ‘ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಕಾಫೀರ ಘೋಷಣೆ ಅಧಿಕಾರ ವಕ್ಫಬೋರ್ಡ್‌ಗೆ ಇಲ್ಲ ಎಂದು ಹೇಳಿಕೆ ನೀಡಿರುವುದು ಸ್ವಾಗತ. ಸಮಾಜದ ನಿಯೋಗದ ಮನವಿಗೆ ಸ್ಪಂದಿಸಿದ ಸಚಿವರು, ಅಹ್ಮದಿಯಾ ಮುಸ್ಲಿಮರನ್ನು ಕಾಫೀರರೆಂದು ಜರೆದಿರುವ ತೆಲಂಗಾಣ ರಾಜ್ಯ ವಕ್ಫ್ ಕಮಿಟಿ ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸಂತಸ ತಂದಿದೆ’ ಎಂದು ಹೇಳಿದ್ದಾರೆ.
‘ಸಂವಿಧಾನದ ಪ್ರಕಾರ, ಈ ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ತನ್ನ ಆಯ್ಕೆಯ ಯಾವುದೇ ಧರ್ಮದೊಂದಿಗೆ ಗುರುತಿಸಿಕೊಳ್ಳುವ ಹಕ್ಕು ಇದೆ. ಇದರ ಹೊರತಾಗಿಯೂ, ಕೆಲವು ಮುಸ್ಲಿಂ ಜಮಾತ್, ಸಂಘಟನೆಗಳು ಮತ್ತು ವಕ್ಫ್ ಮಂಡಳಿಗಳು ಅಹ್ಮದಿಯಾ ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ’ ಎಂದು ದೂರಿದ್ದಾರೆ.
ಶಾಂತಿಯುತ ವಾತಾವರಣ ಇರುವ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಅಹ್ಮದಿಯಾ ಮುಸ್ಲಿಂ ಜಮಾತ್‌ನ ವಿರುದ್ಧ ಜನರನ್ನು ಕೆರಳಿಸುವ, ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.