
ಕಲಬುರಗಿ: ‘ಘನ ತ್ಯಾಜ್ಯ ನಾಗರಿಕ ಪ್ರಪಂಚದ ಅತ್ಯಂತ ಕೆಟ್ಟ ಕೊಡುಗೆ’ ಎಂದು ಗುಲಬರ್ಗಾ ವಿವಿ ಕುಲಪತಿ ಪ್ರೊ.ಶಶಿಕಾಂತ್ ಎಸ್.ಉಡಿಕೇರಿ ಕಳವಳ ವ್ಯಕ್ತಪಡಿಸಿದರು.
ಕಲಬುರಗಿಯ ಪರಿಸರ ಸಂಗಮ, ರಾಷ್ಟ್ರೀಯ ಮಾನವ ಅಭಿವೃದ್ಧಿ ಫೌಂಡೇಷನ್, ಜಿಲ್ಲಾ ಹಿರಿಯ ನಾಗರಿಕರ ಸಂಘ ಹಾಗೂ ಕರ್ನಾಟಕ ಹಿಂದಿ ಪ್ರಚಾರ ಸಭಾ ಜಂಟಿಯಾಗಿ ನಗರದ ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಜಾಗತಿಕ ತಾಪಮಾನ– ನಮ್ಮ ಜವಾಬ್ದಾರಿ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾವೆಲ್ಲ ಬಳಸುವ ಚರ್ಮದ ಚಪ್ಪಲಿ ತ್ಯಾಜ್ಯಕ್ಕೆ ಬಿಸಾಕಿದರೆ ಅದು ಕರಗಲು 43 ವರ್ಷ ಬೇಕಾಗುತ್ತದೆ. ಇನ್ನು, ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾದ ಪ್ಲಾಸ್ಟಿಕ್ ಯಾವ ಕಾಲಕ್ಕೆ ಕರಗಬಹುದು? ಹೀಗಾಗಿ ಜೀವನ ಶೈಲಿ ಬದಲಾಯಿಸಿಕೊಂಡು ಪರಿಸರಕ್ಕೆ ಮಾರಕವಾದ ಪರಿಕರಗಳ ಬಳಕೆ ಆದಷ್ಟು ತಗ್ಗಿಸಬೇಕು. ನಮ್ಮ ಆಸೆ–ಆಕಾಂಕ್ಷೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಆಗ ಮಾತ್ರವೇ ನಮ್ಮ ಪೂರ್ವಜರು ನಮಗೆ ಉಳಿಸಿದಂಥ ಪ್ರಾಕೃತಿಕ ಸಂಪನ್ಮೂಲವನ್ನು ಮುಂದಿನ ಪೀಳಿಗೆಗೆ ಒದಗಿಸಲು ಸಾಧ್ಯ. ಇಲ್ಲದಿದ್ದರೆ ಮುಂದಿನ ಪೀಳಿಗೆಯ ಭವಿಷ್ಯವೇ ಕಸಿದಂತಾಗುತ್ತದೆ’ ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ ಉಪನ್ಯಾಸ ನೀಡಿದ ಗುಲಬರ್ಗಾ ವಿವಿ ಪರಿಸರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಕಾಶ ಕೆ. ಅವರು, ‘ಜಾಗತಿಕ ತಾಪಮಾನವು ಪ್ರಕೃತಿಯು ನಮ್ಮೆಲ್ಲರ ದುರಾಸೆ–ತಪ್ಪುಗಳಿಗಾಗಿ ನಮ್ಮ ಮೇಲೆ ತೋರಿಸುವ ಕೋಪವಾಗಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಜಾಗತಿಕ ತಾಪಮಾನದ ದುಷ್ಪರಿಣಾಮಗಳು. ಫ್ಲೋರೈಡ್‌ನಂತೆಯೇ ಜಾಗತಿಕ ತಾಪಮಾನವೂ ನಿಧಾನಕ್ಕೆ ತನ್ನ ದುಷ್ಪರಿಣಾಮ ತೋರುತ್ತದೆ’ ಎಂದರು.
‘ಮನುಷ್ಯನ ಬೇಡಿಕೆಗಳಿಗೂ ಜಾಗತಿಕ ತಾಪಮಾನಕ್ಕೂ ಸಂಬಂಧವಿದೆ. ದುರಾಸೆ, ಧಾವಂತ, ಬದುಕಿನ ವೇಗ ಹೆಚ್ಚಿದಷ್ಟೂ ಕೈಗಾರಿಕರಣ, ಆ ಮೂಲಕ ಪರಿಸರ ನಾಶ, ಜಾಗತಿಕ ತಾಪಮಾನ ಏರಿಕೆಯಾಗುತ್ತದೆ. ಹೀಗಾಗಿ ನಾವೆಲ್ಲ ದುರಾಸೆಗಳನ್ನು ಬಿಡಬೇಕು. ಹೆಚ್ಚೆಚ್ಚು ಗಿಡಗಳನ್ನು ಬೆಳೆಸಬೇಕು. ಸಾಧ್ಯವಾದಷ್ಟು ಕೆರೆಗಳನ್ನು ನಿರ್ಮಿಸಬೇಕಿದೆ. ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್ ಪರಿಸರಕ್ಕೆ ಸೇರದಂತೆ ಜಾಗ್ರತೆ ವಹಿಸಬೇಕಿದೆ’ ಎಂದು ಸಲಹೆ ನೀಡಿದರು.
ಪರಿಸರ ಸಂಗಮದ ಸಂಚಾಲಕ ನಾಗೇಂದ್ರಪ್ಪ ಬುಳ್ಳಾ, ಮಲ್ಲಣ್ಣ ಮಡಿವಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ನೀರು ಮಣ್ಣು ಸೇರಿದಂತೆ ಪರಿಸರ ಸಂರಕ್ಷಣೆಗೆ ಬೇಕಾದ ಬದಲಾವಣೆ ನಮ್ಮೆಲ್ಲರ ಮನೆಗಳಿಂದಲೇ ಆರಂಭವಾಗಬೇಕಿದೆ. ಪ್ಲ್ಯಾಸ್ಟಿಕ್ ಬಿಟ್ಟು ಬಟ್ಟೆ ಬ್ಯಾಗ್ ಬಳಸೋಣಪ್ರತಾಪ್ಸಿಂಗ್ ತಿವಾರಿ ಕಲಬುರಗಿ ಜಿಲ್ಲಾ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ
ಹೇಗೆ ಹೂವಿಗೂ ನೋವಾಗದಂತೆ ಜೇನು ಹುಳು ಮಕರಂದ ಸಂಗ್ರಹಿಸಿ ಮನುಜರಿಗೆ ಸಿಹಿ ಹಂಚುತ್ತದೆಯೋ ಅಂತೆಯೇ ನಾವೆಲ್ಲ ಪರಿಸರವನ್ನು ಬದುಕಿಗಾಗಿ ಬಳಸಬೇಕಿದೆಅಶೋಕ ಜೀವಣಗಿ ಪರಿಸರ ತಜ್ಞ
ಅವಶ್ಯಕತೆ ಬೇಡಿಕೆ ಆಸೆ ಈ ಮೂರನ್ನು ಮನದೊಳಗೇ ಇರಿಸಿಕೊಂಡರೆ ಬದುಕು ಸರಳವಾಗುತ್ತದೆ. ಎಷ್ಟು ಸರಳವಾಗಿರುತ್ತೇವೋ ಅಷ್ಟು ಆನಂದವಾಗಿರುತ್ತೇವೆಸುಂದರರಾಜ್ ಅರಸ್ ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ
‘ತೀರ್ಥರೂಪದಲ್ಲೂ ಗಂಗೆ ಲಭ್ಯವಿಲ್ಲ’
‘ಹಿಮಾಲಯ ಕರಗುತ್ತಿದೆ; ನದಿಗಳು ಬತ್ತುತ್ತಿವೆ. ಕಳೆದ ವರ್ಷ ಮಹಾಕುಂಭಮೇಳ ಜರುಗಿತು. ಕೋಟ್ಯಂತರ ಮಂದಿ ಪುಣ್ಯಸ್ನಾನ ಮಾಡಿದರು. ಆದರೆ ಆ ಗಂಗೆ ಎಲ್ಲಿದ್ದಾಳೆ? ಐದು ನದಿಗಳ ಸಂಗಮ ಗಂಗೆ ಎಂಬ ಮಾತಿದೆ. ಇಂಥ ಗಂಗೆ ಇದೀಗ ತೀರ್ಥ ರೂಪದಲ್ಲೂ ಲಭ್ಯವಿಲ್ಲ. ಇಂಥ ನದಿ ಕಾಣೆ ಮಾಡಿದವರಾರು? ಗಂಗೆಯನ್ನು ಪೂಜಿಸುವವರೇ ಅದರ ಅವನತಿಗೂ ಕಾರಣವಾಗಿದ್ದೇವೆ. ಗಂಗೆ ಇದೀಗ ಪುನಶ್ಚೇತನಗೊಳ್ಳಬೇಕಿದೆ. ನಿಸರ್ಗದ ಎಲ್ಲ ಜಲಸಂಗ್ರಹ ತಾಣಗಳು ಪುನಶ್ಚೇತಗೊಳ್ಳಬೇಕು. ಭೂಮಿಯಲ್ಲಿನ ನೀರು ಮತ್ತೆ ಚಿಲುಮೆಯಾಗಿ ಹೊರಹೊಮ್ಮಬೇಕು’ ಎಂದು ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಆಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.