ADVERTISEMENT

‘ಉತ್ತರ ಕರ್ನಾಟಕದಲ್ಲಿ ಜಲಾಂದೋಲನ ರೂಪಿಸಿ’

ಸಮಾವೇಶದಲ್ಲಿ ಜಲತಜ್ಞ ರಾಜೇಂದ್ರ ಸಿಂಗ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:31 IST
Last Updated 8 ಡಿಸೆಂಬರ್ 2019, 20:31 IST
ಕಲಬುರ್ಗಿಯಲ್ಲಿ ನಡೆದ ಜಲ ಜಾಗೃತಿ ಸಮಾವೇಶದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಜಲತಜ್ಞ ಡಾ.ರಾಜೇಂದ್ರ ಸಿಂಗ್‌ ಮಾತನಾಡಿದರು
ಕಲಬುರ್ಗಿಯಲ್ಲಿ ನಡೆದ ಜಲ ಜಾಗೃತಿ ಸಮಾವೇಶದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಜಲತಜ್ಞ ಡಾ.ರಾಜೇಂದ್ರ ಸಿಂಗ್‌ ಮಾತನಾಡಿದರು   

ಕಲಬುರ್ಗಿ:ರಾಜಸ್ಥಾನಕ್ಕಿಂತ ಮೂರು ಪಟ್ಟು ಅಧಿಕ ನೀರಿನ ಮೂಲವನ್ನು ಹೊಂದಿರುವ ಕರ್ನಾಟಕವು ಜಲಸಾಕ್ಷರತೆಯ ಕಾರಣದಿಂದಾಗಿ ನೀರನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಎನ್‌ಎಸ್‌ಎಸ್‌, ಎನ್‌ಸಿಸಿ ಘಟಕಗಳು, ವಿವಿಧ ಕಾಲೇಜುಗಳ ಭೂಗರ್ಭಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಸಹಯೋಗದಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಆಂದೋಲನ ರೂಪಿಸಬೇಕು ಎಂದು ಖ್ಯಾತ ಜಲತಜ್ಞ ರಾಜೇಂದ್ರ ಸಿಂಗ್‌ ಅಭಿಪ್ರಾಯಪಟ್ಟರು.

ಇಲ್ಲಿನ ಶರಣಬಸವ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ, ಥ್ರೀಜೆ ಕ್ಲಬ್‌ ಆಳಂದ, ವಿವಿಧ ಜಲಸಮಿತಿಗಳ ಒಕ್ಕೂಟದ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಜಲಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಇಂದಿನ ಯುವಕರಲ್ಲಿ ನೀರಿನ ಸದ್ಬಳಕೆಯ ಬಗ್ಗೆ ಮಾಹಿತಿ ಸಿಕ್ಕರೆ ನೀರು ಪೋಲಾಗುವುದನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪದೇ ಪದೇ ಬರಗಾಲವನ್ನು ಎದುರಿಸುವ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಆಂದೋಲನ ವ್ಯಾಪಕವಾಗಿ ನಡೆಯಬೇಕು. ಇದಕ್ಕೆ ಅಗತ್ಯ ಮಾರ್ಗದರ್ಶನವನ್ನು ನೀಡಲು ಸಿದ್ಧ. ಈ ಭಾಗದ ಜನಪ್ರತಿನಿಧಿಗಳು, ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಆಸಕ್ತಿ ವಹಿಸಿ ವಿದ್ಯಾರ್ಥಿಗಳು ಸಕ್ರಿಯವಾಗಿ ಈ ಆಂದೋಲನದಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಬೇಕು ಎಂದು ಸಿಂಗ್ ಸಲಹೆ ನೀಡಿದರು.

ADVERTISEMENT

ಪ್ರಸಿದ್ಧ ರಾಜಮನೆತನಗಳು ಆಳಿದ ಈ ಭಾಗದಲ್ಲಿ ಕಲ್ಯಾಣಿಗಳು, ಪುಷ್ಕರಣಿಗಳು, ಬಾವಿಗಳು, ತಾಲಾಬ್‌ (ಕೆರೆಗಳು)ಗಳಿಗೆ ಬರವಿಲ್ಲ. ನಿರ್ವಹಣೆ ಇಲ್ಲದೇ ಅವು ಪಾಳು ಬಿದ್ದಿವೆ. ಸಾಂಪ್ರದಾಯಿಕ ನೀರಿನ ಮೂಲಗಳಾದ ಇವುಗಳನ್ನು ಪುನರುಜ್ಜೀವನಗೊಳಿಸಬೇಕು. ಇದಕ್ಕೆ ಸರ್ಕಾರವನ್ನು ನೆಚ್ಚಿಕೊಳ್ಳುವ ಅಗತ್ಯವಿಲ್ಲ. ಆಯಾ ಗ್ರಾಮಸ್ಥರೇ ಪರಸ್ಪರ ಸಹಕಾರ ಭಾವನೆಯಿಂದ ಇದನ್ನು ಸಾಧಿಸಬೇಕು. ಓಡುವ ನೀರನ್ನು ನಿಧಾನಗೊಳಿಸಬೇಕು. ಅಂದಾಗ ಮಾತ್ರ ಆ ನೀರು ಅಂತರ್ಜಲ ಸೇರುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ನೀರಿನ ಮಟ್ಟದಲ್ಲಿ ಹೆಚ್ಚಳವಾಗುತ್ತದೆ. ಆ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ವಿವಿಧ ಜಲ ಒಕ್ಕೂಟಗಳ ಸದಸ್ಯರು ನೀರನ್ನು ಉಳಿಸುವ ಪ್ರಮಾಣ ವಚನ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.