ಕಲಬುರಗಿ: ಭೀಮಾ, ಕಾಗಿಣಾ, ಬೆಣ್ಣೆತೊರಾ, ಅಮರ್ಜಾ ಸೇರಿದಂತೆ ಐದಾರು ಪ್ರಮುಖ ನದಿಗಳಿದ್ದರೂ ನೀರಾವರಿಯಲ್ಲಿ ಹಿಂದೆ ಬಿದ್ದಿರುವ ಕಲಬುರಗಿ ಜಿಲ್ಲೆಯ ಜನ ತಡವಾಗಿಯಾದರೂ ಅಲ್ಲಲ್ಲಿ ಚೆಕ್ ಡ್ಯಾಂ, ಗೋಕಟ್ಟೆ, ಕಿರು ಕೆರೆ ನಿರ್ಮಾಣ, ಹಾಳಾದ ಕೊಳವೆಬಾವಿಗಳ ಪುನಶ್ಚೇತನಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಇವರಿಗೆ ‘ವಾಟರ್ ಏಡ್ ಇಂಡಿಯಾ’ ಸಂಸ್ಥೆ ಪೂರಕವಾಗಿ ಕೆಲಸ ಮಾಡುತ್ತಿದೆ.
ಈ ಯೋಜನೆಗೆ ಗ್ರಾಮಸ್ಥರ ಸಹಕಾರವೂ ಸಿಕ್ಕಿರುವುದರಿಂದ ಹೆಚ್ಚಿನ ಸಂಖ್ಯೆಯ ಗೋಕಟ್ಟೆ, ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ರಾಷ್ಷ್ರಮಟ್ಟದ ಸರ್ಕಾರೇತರ ಸಂಸ್ಥೆಯಾದ ‘ವಾಟರ್ ಏಡ್ ಇಂಡಿಯಾ’ ಮುಂದಡಿ ಇಟ್ಟಿದೆ. ಜಿಲ್ಲೆಯಲ್ಲಿ ಕಡಿಮೆ ಖರ್ಚಿನಲ್ಲಿ ಅಂತರ್ಜಲ ಸಂರಕ್ಷಿಸುವ ಕೆಲಸಗಳು ಸದ್ದಿಲ್ಲದೇ ನಡೆಯುತ್ತಿವೆ.
ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಸೇಡಂ ತಾಲ್ಲೂಕುಗಳಲ್ಲಿ ಭೀಮಾ, ಕಾಗಿಣಾ ನದಿಗಳು ಹರಿಯುತ್ತಿದ್ದು, ಅಂತರ್ಜಲದ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಆದರೆ, ಕಲಬುರಗಿ, ಕಮಲಾಪುರ ಹಾಗೂ ಆಳಂದ ತಾಲ್ಲೂಕುಗಳಲ್ಲಿ ಜಲಮೂಲಗಳು ಅಷ್ಟಾಗಿಲ್ಲ. ಹೀಗಾಗಿ, ಜಾಗತಿಕ ತಂತ್ರಜ್ಞಾನ ದಿಗ್ಗಜ ಬಿಲ್ ಗೇಟ್ಸ್ ಅವರ ಸಂಸ್ಥೆಯಿಂದ ಆರ್ಥಿಕ ನೆರವು ಪಡೆದುಕೊಂಡು ‘ವಾಟರ್ ಏಡ್ ಇಂಡಿಯಾ’ ಸಂಸ್ಥೆಯು ಕಲಬುರಗಿ, ಕಮಲಾಪುರ, ಆಳಂದ ತಾಲ್ಲೂಕುಗಳ 10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೂರು ವರ್ಷಗಳಿಂದ ಗೋಕಟ್ಟೆ, ಚೆಕ್ ಡ್ಯಾಮ್‌ಗಳನ್ನು ನಿರ್ಮಿಸುತ್ತಿದೆ. ಪಾಳು ಬಿದ್ದ ಕೊಳವೆಬಾವಿಗಳನ್ನು ಗುರುತಿಸಿ ಅವುಗಳನ್ನು ‘ಇಂಜೆಕ್ಷನ್ ಶಾಫ್ಟ್’ ತಂತ್ರಜ್ಞಾನದ ಮೂಲಕ ಭೂಮಿಯ ಮೇಲ್ಭಾಗದಲ್ಲಿ ಹರಿಯುವ ನೀರು ಫಿಲ್ಟರ್ ಆಗಿ ಭೂಮಿಯ ಆಳದಲ್ಲಿ ಹೋಗುವಂತೆ ಮಾಡುವ ಕೆಲಸ ಜಿಲ್ಲೆಯ ಗಣಜಲಖೇಡ, ಆಲಗೂಡ, ಅವರಾದ (ಬಿ), ಯಳವಂತಗಿ, ತೆಗನೂರು, ಬನ್ನೂರು ಗ್ರಾಮಗಳಲ್ಲಿ ನಡೆಯುತ್ತಿದೆ.
10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗೋಕಟ್ಟೆಯ ಹೂಳು ತೆರವು, ಹೊಸ ಗೋಕಟ್ಟೆ, ಕೆರೆ ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣ ಸೇರಿದಂತೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ವಾಟರ್ ಏಡ್ ಇಂಡಿಯಾದ ತಾಂತ್ರಿಕ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಅವರ ಅಗತ್ಯವನ್ನು ತಿಳಿದುಕೊಳ್ಳುತ್ತಾರೆ. ನಂತರ ಕಾಮಗಾರಿ ಶುರು ಮಾಡುತ್ತಾರೆ. ಚೆಕ್ ಡ್ಯಾಂ, ಗೋಕಟ್ಟೆ, ಕೊಳವೆಬಾವಿ ಮರುಪೂರಣ ವ್ಯವಸ್ಥೆ ಕಲ್ಪಿಸಲು ತಗಲುವ ಒಟ್ಟು ವೆಚ್ಚದ ಶೇ 90ರಷ್ಟು ಭಾಗವನ್ನು ‘ವಾಟರ್ ಏಡ್ ಇಂಡಿಯಾ’ ಸಂಸ್ಥೆಯೇ ಭರಿಸುತ್ತದೆ. ಗ್ರಾಮಸ್ಥರ ಸಹಭಾಗಿತ್ವವನ್ನು ಖಚಿತಪಡಿಸಲು ಉಳಿದ ಶೇ 10ರಷ್ಟು ಮೊತ್ತವನ್ನು ಗ್ರಾಮಸ್ಥರಿಂದ ಸಂಗ್ರಹಿಸುತ್ತದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಅದನ್ನು ಗ್ರಾಮಸ್ಥರು ಸದಸ್ಯರಾಗಿರುವ ನೀರು ಬಳಕೆದಾರರ ಸಂಘದ ಸುಪರ್ದಿಗೆ ಒಪ್ಪಿಸುತ್ತದೆ.
ಕಲಬುರಗಿ ಜಿಲ್ಲೆಯಲ್ಲಿ ಏಳು ಜನ ಸದಸ್ಯರಿರುವ ವಾಟರ್ ಏಡ್ ಸಂಸ್ಥೆಯು ಮೂರು ತಾಲ್ಲೂಕುಗಳಲ್ಲಿ ಮಳೆ ನೀರು ಸಂಗ್ರಹಿಸುವ ಅಭಿಯಾನದಡಿ ಗೋಕಟ್ಟೆ, ಚೆಕ್ ಡ್ಯಾಂ, ಕೊಳವೆಬಾವಿಗಳ ಮರುಪೂರಣ, ನೀರು ಸಂಗ್ರಹ ತೊಟ್ಟಿಗಳ ದುರಸ್ತಿ ಕಾರ್ಯ ನಿರ್ವಹಿಸುತ್ತಿದೆ.
‘ಮಳೆ ನೀರು ಇಂಗಿದರೆ ಮುಂದೆಯೂ ಅಂತರ್ಜಲ ಬಳಸಿಕೊಳ್ಳಲು ಸಾಧ್ಯವಾಗಲಿದೆ. ಗ್ರಾಮದಲ್ಲಿ ಮತ್ತೊಂದು ಗೋಕಟ್ಟೆಯನ್ನು ನಿರ್ಮಿಸುತ್ತಿದ್ದೇವೆ. ಪ್ರತಿ ವರ್ಷ ಎರಡು ಗೋಕಟ್ಟೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿಕೊಂಡಿದ್ದೇವೆ’ ಎನ್ನುತ್ತಾರೆ ಗಣಜಲಖೇಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಪಾಟೀಲ.
ಕಲಬುರಗಿ ಜಿಲ್ಲೆಯ ಹತ್ತು ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆ ನೀರು ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇವೆ. ಗ್ರಾಮಸ್ಥರ ಸಹಕಾರ ಕಾಮಗಾರಿಗಳ ಯಶಸ್ಸು ಆಧರಿಸಿ ಮುಂದಿನ ಯೋಜನೆ ರೂಪಿಸುತ್ತೇವೆಅಭಯ ರಾಜ್ ಜಿಲ್ಲಾ ಸಂಯೋಜಕ ವಾಟರ್ ಏಡ್ ಇಂಡಿಯಾ
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಶ್ರಮಿಸುತ್ತಿರುವ ವಾಟರ್ ಏಡ್ ಇಂಡಿಯಾ ಸಂಸ್ಥೆಯು ಜಿಲ್ಲಾ ಪಂಚಾಯಿತಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅವರು ಕಾಮಗಾರಿಗೆ ಪೂರಕವಾಗಿ ಬಾಕಿ ಕೆಲಸಗಳನ್ನು ನರೇಗಾದಡಿ ತೆಗೆದುಕೊಳ್ಳುತ್ತಿದ್ದೇವೆಭಂವರ್ ಸಿಂಗ್ ಮೀನಾ ಜಿಲ್ಲಾ ಪಂಚಾಯಿತಿ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.