ADVERTISEMENT

ಅಫಜಲಪುರ | ಅವೈಜ್ಞಾನಿಕ ಗೇಟು ಅಳವಡಿಕೆ: ಬ್ಯಾರೇಜ್ ಕಂ ಬ್ರಿಡ್ಜ್ ಖಾಲಿ

ಶಿವಾನಂದ ಹಸರಗುಂಡಗಿ
Published 30 ಮಾರ್ಚ್ 2025, 7:58 IST
Last Updated 30 ಮಾರ್ಚ್ 2025, 7:58 IST
ಅಫಜಲಪುರ ತಾಲೂಕಿನ ದಿಕ್ಸಂಗ (ಕೆ) ಗ್ರಾಮದ ಬ್ಯಾರೇಜ್ ಕಮ್ ಬ್ರಿಡ್ಜ್ ಬತ್ತಿರುವುದು
ಅಫಜಲಪುರ ತಾಲೂಕಿನ ದಿಕ್ಸಂಗ (ಕೆ) ಗ್ರಾಮದ ಬ್ಯಾರೇಜ್ ಕಮ್ ಬ್ರಿಡ್ಜ್ ಬತ್ತಿರುವುದು   

ಅಫಜಲಪುರ: ತಾಲ್ಲೂಕಿನ 10ಕ್ಕಿಂತ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ಅನುಕೂಲವಾಗುವ ದಿಕ್ಸಂಗ (ಕೆ) ಬ್ಯಾರೇಜ್ ಕಂ ಬ್ರಿಡ್ಜ್‌ಗೆ ಅವೈಜ್ಞಾನಿಕ ಗೇಟು ಅಳವಡಿಸಿದ್ದರಿಂದ ನೀರು ಸೋರಿಕೆಯಾಗಿ ಪೂರ್ತಿ ಖಾಲಿಯಾಗಿದೆ. ಕುಡಿಯಲು, ಕೃಷಿಗೆ ನೀರು ಸಿಗದೆ ಜನ ಹೈರಾಣಾಗಿದ್ದಾರೆ. 

‘ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ದಿಕ್ಸಂಗ (ಕೆ) ಬ್ಯಾರೇಜ್ ಕಂ ಬ್ರಿಡ್ಜ್‌ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಇಲಾಖೆಯವರು ಗೇಟ್‌ಗಳನ್ನ ಸರಿಯಾಗಿ ಅಳವಡಿಸಿದ ಕಾರಣ ನೀರು ಸೋರಿಕೆಯಾಗುತ್ತದೆ. ಇರುವ ಗೇಟ್‌ಗಳು ಹಾಳಾಗಿವೆ. ಗೇಟ್‌ ಹಾಕಿದಾಗ ನೀರು ಸೋರಿಕೆಯಾಗಿ ತಿಂಗಳಲ್ಲಿಯೇ ಬ್ಯಾರೇಜ್‌ ಖಾಲಿಯಾಗುತ್ತದೆ’ ಎಂದು ಗೌರ (ಬಿ) ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಭೀಮರಾವ್ ಗೌರ ಹೇಳಿದರು.

‘ಸರಿಯಾಗಿ ಗೇಟ್‌ ಅಳವಡಿಸಿದರೆ ಬೇಸಿಗೆಯಲ್ಲಿ ಕೃಷಿಗೆ ಮತ್ತು ಜನ ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತದೆ. ವೈಜ್ಞಾನಿಕವಾಗಿ ಗೇಟ್ ಅಳವಡಿಸಿದರೆ ನಿರಂತರವಾಗಿ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಅಂತರ್ಜಲಮಟ್ಟವೂ ಹೆಚ್ಚಳವಾಗುತ್ತದೆ’ ಎನ್ನುವುದು ರೈತ ಮುಖಂಡರಾದ ಶ್ರೀಶೈಲ ಪಾಟೀಲ, ಹನುಮಂತರಾಯ ಬಿರಾದಾರ ಅವರ ಅಭಿಪ್ರಾಯ.

ADVERTISEMENT

‘ಮಳೆ ನಿಂತಾಗ ಗೇಟ್‌ ಹಾಕಲಾಗಿತ್ತು. ಅವು ಹಳೆಯದಾಗಿದ್ದು ಅಲ್ಲಲ್ಲಿ ಸೋರುತ್ತವೆ. ಸುತ್ತಲೂ ಮಣ್ಣು ಹಾಕಿದರೂ ಸೋರಿಕೆ ನಿಲ್ಲುತ್ತಿಲ್ಲ. ಸರ್ಕಾರ ಅನುದಾನ ನೀಡಿದರೆ ಹೊಸ ಗೇಟ್‌ ಹಾಕುತ್ತೇವೆ’ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಾಂತಪ್ಪ ಜಾದವ್ ಪ್ರಜಾವಾಣಿಗೆ ತಿಳಿಸಿದರು. 

‘ದಿಕ್ಸಂಗ (ಕೆ) ಗ್ರಾಮದ ಬ್ಯಾರೇಜ್ ಕಂ ಬ್ರಿಡ್ಜ್‌ಗೆ ಹೊಸ ಗೇಟ್‌ಗಳನ್ನು ಅಳವಡಿಸಲು ಇಲಾಖೆಗೆ ಸರ್ಕಾರ ಅನುದಾನ ನೀಡಬೇಕು. ಇದರಿಂದ ಈ ಭಾಗದ ಸುಮಾರು 10 ಗ್ರಾಮಗಳಿಗೆ ಬೇಸಿಗೆಯಲ್ಲಿ ಜನ–ಜಾನುವಾರು, ಕೃಷಿಗೆ ಅನುಕೂಲವಾಗಲಿದೆ’ ಎಂದು ರೈತ ಮುಖಂಡ ಅಮೃತ್ ಸೂರ್ಯವಂಶಿ ಆಗ್ರಹಿಸಿದರು.

ಅಮೃತ್ ಸೂರ್ಯವಂಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.