ADVERTISEMENT

ನೀರ್‌ ಕೊಡ್ಲಾಕ್‌ ಆಗದ ಪಂಚಾಯ್ತಿ ಯಾಕ್‌ ಬೇಕ್ರೀ?

ಕುಡಿಯುವ ನೀರಿಗಾಗಿ ಯಳಸಂಗಿ ಗ್ರಾಮಸ್ಥರ ಪರದಾಟ, ಕಣ್ಣೆತ್ತಿ ನೋಡದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಛೀಮಾರಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 14:12 IST
Last Updated 30 ಆಗಸ್ಟ್ 2019, 14:12 IST
ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಮಹಿಳೆಯರು ಶುಕ್ರವಾರ ಖಾಲಿ ಕೊಡಗಳು ಪ್ರದರ್ಶಿಸಿ ಪ್ರತಿಭಟಿಸಿದರು
ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಮಹಿಳೆಯರು ಶುಕ್ರವಾರ ಖಾಲಿ ಕೊಡಗಳು ಪ್ರದರ್ಶಿಸಿ ಪ್ರತಿಭಟಿಸಿದರು   

ಆಳಂದ: ಏಳು ತಿಂಗಳಾಯಿತು ಮನೆ ಹತ್ತಿರಕ್ಕೆ ಒಂದೇ ಒಂದು ಕೊಡ ನೀರನ್ನೂ ಹರಿಸಲು ಸಾಧ್ಯವಾಗಿಲ್ಲ. ರಾತ್ರಿ– ಹಗಲು ಎನ್ನದೇ ಕುಡಿಯುವ ನೀರಿಗಾಗಿಯೇ ಇಡೀ ದಿನ ಕಳೆಯಬೇಕಾಗಿದೆ. ಹಳ್ಳಿ ಮಂದಿಗೆ ಅಗತ್ಯವಿರುವ ಕನಿಷ್ಠ ಸೌಲಭ್ಯವನ್ನೂ ನೀಡಲು ಆಗುವುದಿಲ್ಲ ಎನ್ನುವುದಾದರೆ ಈ ಊರಿಗೆ ಪಂಚಾಯಿತಿ ಯಾವ ಕರ್ಮಕ್ಕೆ ಬೇಕು ಹೇಳ್ರೀ...

ತಾಲ್ಲೂಕಿನ ಯಳಸಂಗಿ ಗ್ರಾಮದಶಾಂತಾಬಾಯಿ ಖಂಡಾಗಳೆ ಅವರೂ ಸೇರಿದಂತೆ ನೂರಾರು ಮಹಿಳೆಯರು ಕೇಳುವ ಪ್ರಶ್ನೆ ಇದು.‌

ಜನವರಿ ತಿಂಗಳ ಆರಂಭದಿಂದಲೂ ಈ ಗ್ರಾಮದಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿ ಇದೆ. ಬೇಸಿಗೆ ಸಂದರ್ಭದಲ್ಲಿ ಗ್ರಾಮದ ನೀರಿನ ಮೂಲಗಳೆಲ್ಲ ಬತ್ತಿದವು. ಇದರಿಂದಾಗಿ ಜನರು ಹೇಗೋ ಸಹಿಸಿಕೊಂಡರು. ಹೊಲ– ಗದ್ದೆ– ಪಕ್ಕದೂರುಗಳಿಗೆ ಅಲೆದು ನೀರು ಸಂಗ್ರಹಿಸಿಕೊಂಡರು. ಆದರೆ, ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ಇನ್ನೂ ಒಂದೇ ಒಂದು ಕೊಡ ನೀರನ್ನೂ ಗ್ರಾಮ ಪಂಚಾಯಿತಿ ಪೂರೈಸುತ್ತಿಲ್ಲ ಎಂಬ ಸಂಗತಿ ಅವರ ಆಕ್ರೋಶಕ್ಕೆ ಕಾರಣವಾಯಿತು.

ADVERTISEMENT

ಇದರಿಂದ ಬೇಸತ್ತ ನೂರಾರು ಮಹಿಳೆಯರು, ಮಕ್ಕಳು, ಹಿರಿಯರು ಖಾಲಿ ಕೊಡಗಳನ್ನು ಹಿಡಿದು ಶುಕ್ರವಾರ ಗ್ರಾಮ‍ಪಂಚಾಯಿತಿ ಕಚೇರಿಗೆ ನುಗ್ಗಿದರು. ಗಂಟೆಗಟ್ಟಲೇ ಧರಣಿ ಕುಳಿತರು. ಆಡಳಿತ ಯಂತ್ರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ಹೊರಹಾಕಿದರು. ಗ್ರಾಮದ ಸಮಸ್ಯೆಗಳನ್ನು ಕಣ್ಣೆತ್ತಿಯೂ ನೋಡದ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧವೂ ಕಿಡಿ ಕಾರಿದರು.

ಬೇಸಿಗೆಯಲ್ಲಿ ಹನಿ ನೀರಿಗಾಗಿ ಜನರು ಪರದಾಡಿದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಸಮಸ್ಯೆ ಬಗೆಹರಿಸಲು ಹೆಚ್ಚಿನ ಕಾಳಜಿ ವಹಿಸಿಲ್ಲ. ಆಗ ನೀರಿನ ಮೂಲಗಳು ಬತ್ತಿವೆ ಎಂದು ನೆಪ‍ ಹೇಳಿದರು. ಆದರೆ, ಈಗ ಮಳೆಗಾಲದಲ್ಲಿಯೂ ಸಮಸ್ಯೆ ಹಾಗೇ ಮುಂದುವರಿದಿದೆ. ಇದು ಆಡಳಿತ ಯಂತ್ರದ ವೈಫಲ್ಯ. ಗ್ರಾಮದ ಮಹಿಳೆಯರ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಶರಣಬಸಪ್ಪ ಮಾಂಗ ಮಾತನಾಡಿ, ‘ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆಗೆ ಅನಧಿಕೃತ ನಳಗಳ ಸಂಪರ್ಕ ಕಡಿತಗೊಳಿಸಬೇಕು. ಹಾಳದ ಕೊಳವೆಬಾವಿಗಳು ದುರಸ್ತಿ ಕೈಗೊಳ್ಳಬೇಕು. ಪಿಡಿಒ ಜನರ ಸಮಸ್ಯೆ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆಪಾದಿಸಿದರು.

ಗ್ರಾಮದಲ್ಲಿ ವಿದ್ಯುತ್‌ ಸರಬರಾಜು ಸಮರ್ಪಕವಾಗಿ ಇಲ್ಲ. ಮುಖ್ಯರಸ್ತೆಗಳಲ್ಲಿಯೇ ಬೀದಿದೀಪಗಳು ಇಲ್ಲ. ರಾತ್ರಿ ನೀರು ತರಲು ಆತಂಕ ಮೂಡುತ್ತಿದೆ, ಜನರಿಗೆ ಅನುಕೂಲ ಮಾಡದಿದ್ದರೆ ಪಂಚಾಯಿತಿಗೆ ಕೀಲಿ ಹಾಕಿ ಎಂದೂ ಮಹಿಳೆಯರು ದೂರಿದರು.

ಪ್ರತಿದಿನ ನೀರು ಪೂರೈಕೆಗೆ ಕೂಡಲೇ ಕೈಗೊಳ್ಳಬೇಕು, ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್‌, ನೀರು ಪೂರೈಕೆ ಸಿಬ್ಬಂದಿಯನ್ನು ಅಮಾನತು ಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ಈ ಸಂದರ್ಭ ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಸಹಾಯಕ ಅಧಿಕಾರಿ ಸಲೀಂ ಪ್ರತಿಭಟನಾಕಾರರ ಮನವಿ ಆಲಿಸಿದರು. ಸಮಸ್ಯೆ ಬಗೆಹರಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಖಂಡರಾದ ಶಾಂತಗೌಡ ಪಾಟೀಲ, ರಾಜಶೇಖರ ಬುಳ್ಳಾ, ಮಂಜುನಾಥ ಅಕ್ಕಲಕೋಟ, ಹಣಮಂತ ಅವಟೆ, ಸಚಿನ ಎಲ್ದೆ, ಶಾಂತಗೌಡ, ಮಲ್ಕಣ್ಣಾ ಯಳಸಂಗಿ ಹಾಗೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.