ADVERTISEMENT

ನಾವು ಭೂಮಿಯ ಬಾಡಿಗೆದಾರರೇ ಹೊರತು ಮಾಲೀಕರಲ್ಲ: ಪ್ರಕಾಶ್

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿಶ್ವ ಭೂ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 4:32 IST
Last Updated 26 ಏಪ್ರಿಲ್ 2024, 4:32 IST
ಆಳಂದ ತಾಲ್ಲೂಕಿನ ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿಶ್ವ ಭೂ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ದೀಪ ಬೆಳಗಿಸಿದರು
ಆಳಂದ ತಾಲ್ಲೂಕಿನ ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿಶ್ವ ಭೂ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ದೀಪ ಬೆಳಗಿಸಿದರು   

ಕಲಬುರಗಿ: ‘ನಾವು ಭೂಮಿಯ ಬಾಡಿಗೆದಾರರೇ ಹೊರತು ಮಾಲೀಕರಲ್ಲ. ಹೋಗುವ ಮೊದಲು ಭೂಮಿಯನ್ನು ಇದ್ದ ಹಾಗೆಯೇ ಬಿಟ್ಟು ಹೋಗಬೇಕು’ ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಮಾಜಿ ಉಪಮಹಾನಿರ್ದೇಶಕ ಎಚ್.ಎಸ್.ಎಂ. ಪ್ರಕಾಶ್ ಹೇಳಿದರು.

ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅತಿಯಾದ ಕೈಗಾರೀಕರಣ ಮತ್ತು ನಗರೀಕರಣವು ಸಂಪನ್ಮೂಲಗಳ ಅತಿಯಾದ ಬಳಕೆಗೆ ಕಾರಣವಾಗಿದೆ. ಪ್ರಪಂಚವು ವೇಗವಾಗಿ ಬದಲಾಗುತ್ತಿದೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ನಾವು ಹಿಮಗಡ್ಡೆಗಳ ಸಂಗ್ರಹ ಮತ್ತು ಅವುಗಳ ನಾಶವಾಗುವಿಕೆಯನ್ನು ಕಂಡಿದ್ದೇವೆ’ ಎಂದು ಹೇಳಿದರು.

ADVERTISEMENT

‘ಭೂಮಿಯಲ್ಲಿನ ಪ್ರಮುಖ ಬದಲಾವಣೆಯಿಂದ ಈಗ ಆಫ್ರಿಕನ್ ಖಂಡವು ಎರಡು ಭಾಗಗಳಾಗಿ ಚಲಿಸುತ್ತಿದೆ. ನೈಜೀರಿಯಾ ಪ್ರತ್ಯೇಕ ಖಂಡವಾಗಬಹುದು. ಅದೇ ರೀತಿ 20 ದಿನಗಳ ಹಿಂದಷ್ಟೇ ರಾಜಸ್ಥಾನದ ಬಿಕಾನೇರ್‌ನಲ್ಲಿ ಭೂಮಿ ಬೇರ್ಪಡಲಾರಂಭಿಸಿದೆ. ಇದು ಹೀಗೆ ಮುಂದುವರೆದರೆ ಭಾರತವನ್ನು ಭೌಗೋಳಿಕವಾಗಿ ಎರಡು ಭಾಗಗಳಾಗಿ ವಿಭಜಿಸಲು ಕಾರಣವಾಗಬಹುದು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್‌ ಕಲಬುರಗಿ ವಿಭಾಗದ ಅಧ್ಯಕ್ಷ ಪ್ರೊ. ಎಂ.ಎಸ್.ಜೋಗದ್ ಅವರು ಮಾತನಾಡಿದರು.

ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ್ ಅಧ್ಯಕ್ಷತೆ ವಹಿಸಿ, ‘ಪ್ಲಾಸ್ಟಿಕ್ ಮಾನವ ನಿರ್ಮಿತ ಸಮಸ್ಯೆ. ನಮ್ಮ ನಗರಗಳು, ಸರೋವರಗಳು, ನದಿಗಳು ಮತ್ತು ಕಡಲತೀರಗಳು ಪ್ಲಾಸ್ಟಿಕ್‌ನಿಂದ ತುಂಬಿವೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ಭೂಮಿಗೆ ಮತ್ತು ಮನುಷ್ಯನಿಗೆ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದೇವೆ. ಸಂಪನ್ಮೂಲಗಳ ಬಳಕೆಯಲ್ಲಿ ನಾವು ಜಾಗರೂಕರಾಗಿರಬೇಕು’ ಎಂದು ಹೇಳಿದರು.

ಕಾರ್ಯಕ್ರಮದ ಸಂಚಾಲಕಿ ಅರ್ಚನಾ ಕುಜೂರು ಸ್ವಾಗತಿಸಿದರು. ಶುಭಶ್ರೀ ಪ್ರಿಯದರ್ಶಿನಿ ನಿರೂಪಿಸಿದರು. ತೇಜಸ್ವಿ ಲಕ್ಕುಂಡಿ ವಂದಿಸಿದರು.

ಭೂ ವಿಜ್ಞಾನ ವಿಭಾಗದ ಡೀನ್ ಪ್ರೊ. ಎಂ.ಎ.ಅಸ್ಲಂ, ಭೂ ವಿಜ್ಞಾನ ವಿಭಾಗದ ಮುಖ್ಯಸ್ಥ ಎಂ.ಲಿಂಗದೇವರು, ಪ್ರೊ. ಪ್ರಶಾಂತ್, ಚನ್ನಬಸಪ್ಪ, ಅಲೀಂ ಪಾಷಾ, ಬಿ.ಮಹಾಲಿಂಗ, ಎನ್.ಬಾಬು, ಸಂಜಿತ್ ಸರ್ಕಾರ್, ಸ್ವಾಗತ ಘೋಷ್, ಡಾ. ವಿಶ್ವನಾಥ್ ಬಿ.ಸಿ., ಇತರ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.