ADVERTISEMENT

ವೈಮಾನಿಕ ಸಮೀಕ್ಷೆ ನಡೆಸುವಂತೆ ಯಡಿಯೂರಪ್ಪ ಅವರಿಗೆ ಮನವಿ: ಸಂಸದ ಡಾ.ಉಮೇಶ ಜಾಧವ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 7:03 IST
Last Updated 18 ಅಕ್ಟೋಬರ್ 2020, 7:03 IST
ಕಲಬುರ್ಗಿಯ ಸಂಸದ ಉಮೇಶ್ ಜಾಧವ್
ಕಲಬುರ್ಗಿಯ ಸಂಸದ ಉಮೇಶ್ ಜಾಧವ್    

ಕಲಬುರ್ಗಿ: ಜಿಲ್ಲೆಯಲ್ಲಿ ಭೀಮಾ,‌ ಕಾಗಿಣಾ ನದಿಗಳ ಪ್ರವಾಹದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ‌ನೆರವು ನೀಡಿವೆ.‌ ಹೆಚ್ಚಿನ ನೆರವು ಘೋಷಿಸುವ ನಿಟ್ಟಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಿದ್ದೇವೆ ಎಂದು ಸಂಸದ ಡಾ.ಉಮೇಶ ಜಾಧವ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಕ್ಷಣಕ್ಕೆ ₹ 20 ಕೋಟಿ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸಲಾಗಿದೆ. ಅಧಿಕಾರಿಗಳು ನಿರಂತರವಾಗಿ ನೆರೆ ಸಂತ್ರಸ್ತರ ಸ್ಥಳಾಂತರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ‌ಕಾರಜೋಳ ಅವರು ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಬರಲು ಆಗಿಲ್ಲ. ನಾನೂ ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಮತ್ತೆ ಎದೆ ನೋವಿನಿಂದ ಬಳಲಿದ್ದೇನೆ. ಅದೆಲ್ಲವನ್ನೂ ಪಕ್ಕಕ್ಕಿಟ್ಟು ನೆರೆ ಬಂದ ಸ್ಥಳಗಳಿಗೆ ಭೇಟಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿಯಲ್ಲಿ ನಾಲ್ಕೈದು ಜನರು ಸಿಲುಕಿಕೊಂಡ ಬಗ್ಗೆ ಮಾಹಿತಿ ಬಂತು. ತಕ್ಷಣ ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿ ಎನ್.ಡಿ.ಆರ್.ಎಫ್. ತಂಡವನ್ನು ಕಳಿಸಿಕೊಟ್ಟೆ. ಆದರೂ ಕಾಂಎ ಶಾಸಕ ಪ್ರಿಯಾಂಕ್‌ ಖರ್ಗೆ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಗಾರಂಪಳ್ಳಿ ಗ್ರಾಮ ಸೇಡಂ ಶಾಸಕ ರಾಜಕುಮಾರ ‌ಪಾಟೀಲ ತೆಲ್ಕೂರ ಅವರ ಕ್ಷೇತ್ರದಲ್ಲಿದೆ. ನನ್ನ ಪುತ್ರ ಡಾ.ಅವಿನಾಶ್ ಜಾಧವ ಪ್ರತಿನಿಧಿಸುವ ಚಿಂಚೋಳಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಪುತ್ರ ವ್ಯಾಮೋಹದಿಂದ ಚಿಂಚೋಳಿಗೆ ಮಾತ್ರ ಸೀಮಿತವಾಗಿ‌ ಕೆಲಸ ಮಾಡುತ್ತಿದ್ದೇನೆ ಎಂಬ ಟೀಕೆಯಲ್ಲಿ ಹುರುಳಿಲ್ಲ ಎಂದರು‌.

ADVERTISEMENT

ಉಸ್ತುವಾರಿ ಕಾರ್ಯದರ್ಶಿಯೊಂದಿಗೆ ಮಾತಾಡುವೆ: ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ‌ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಇಲ್ಲಿಯೇ ಮೊಕ್ಕಾಂ ಹೂಡಿದರೆ ಪರಿಹಾರ ಕಾರ್ಯಗಳು ಚುರುಕಾಗಲಿವೆ. ಈ ಸಂಬಂಧ ಅವರೊಂದಿಗೆ ಫೋನ್ ನಲ್ಲಿ ಮಾತನಾಡುವೆ ಎಂದು ಹೇಳಿದರು.

ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೋರಿಕೆ; ಜಿಲ್ಲೆಯಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಪ್ರವಾಹ ಬಂದಿದೆ. ಆದ್ದರಿಂದ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಗೃಹಸಚಿವರಿಗೆ ಮನವಿ ಮಾಡಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ಉಸ್ತುವಾರಿ ಸಚಿವರಾದಿಯಾಗಿ, ಸಂಸದರು, ಶಾಸಕರು ಸಂತ್ರಸ್ತ ಜನರನ್ನು ಭೇಟಿ ಮಾಡಿಲ್ಲ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ.ಅಜಯ್ ಸಿಂಗ್, ಮಾಜಿ ಶಾಸಕರಾದ ಬಿ.ಆರ್. ಪಾಟೀಲ, ಡಾ.ಶರಣ ಪ್ರಕಾಶ ಪಾಟೀಲ ಟೀಕಿಸಿದ್ದಾರೆ.

ನೆರೆ ಬಂದ ತಕ್ಷಣ ಕಂದಾಯ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಸಂಸದರು, ಶಾಸಕರು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಅಜಯ್ ಸಿಂಗ್ ಅವರು ಸಿನಿಮಾ ಸ್ಟಾರ್ ನಂತೆ ತಿಂಗಳಿಗೊಮ್ಮೆ ಬಂದು ಫೋಟೊಗೆ ಪೋಸ್ ಕೊಟ್ಟು ಹೋಗುತ್ತಾರೆ. ಅವರು ಪ್ರತಿನಿಧಿಸುವ ಜೇವರ್ಗಿ ಕ್ಷೇತ್ರಕ್ಕೆ ತಿಂಗಳಿಗೊಮ್ಮೆ ಭೇಟಿ ಕೊಟ್ಟರೆ ಸಾಕೇ ಎಂದು ಪ್ರಶ್ನಿಸಿದರು.

ಶಾಸಕರಾದ ಬಸವರಾಜ ‌ಮತ್ತಿಮೂಡ, ಡಾ.ಅವಿನಾಶ್ ಜಾಧವ, ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಮಹಾನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.