ADVERTISEMENT

ವಿಟಿಯುದಿಂದ ಆನ್‌ಲೈನ್‌ ತರಬೇತಿ

ಮಸ್ಕಟ್‌, ಒಮಾನ್, ನೇಪಾಳ, ಸಿಂಗಪುರದ ಪ‍್ರತಿನಿಧಿಗಳೂ ಭಾಗಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 16:29 IST
Last Updated 8 ಜುಲೈ 2020, 16:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಲಬುರ್ಗಿ: ಕೊರೊನಾ ಹಾವಳಿಯಿಂದಾಗಿ ತರಗತಿ ಬೋಧನೆ ತಾತ್ಕಾಲಿಕವಾಗಿ ಮುಂದೂಡಿರುವ ಈ ಸಂದರ್ಭದಲ್ಲಿ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರ್ಗಿ ಪ್ರಾದೇಶಿಕ ಕೇಂದ್ರದಿಂದ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ ಆನ್‌ಲೈನ್‌ ಮೂಲಕ ತರಬೇತಿ ನಡೆಯುತ್ತಿದೆ.

ಕೊರೊನಾ ಎದುರಿಸುವುದು ಹೇಗೆ ಎಂಬ ಬಗ್ಗೆ ತಜ್ಞ ವೈದ್ಯರಿಂದಲೂ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ಕೊಡಿಸಲಾಗಿದೆ. ವಿಟಿಯು ಕಲಬುರ್ಗಿಯ ಪಿ.ಜಿ. ಕೇಂದ್ರ ಅಷ್ಟೇ ಅಲ್ಲದೇ ಪ್ರಾದೇಶಿಕ ಕಚೇರಿಯೊಂದಿಗೆ ಸಂಯೋಜನೆ ಹೊಂದಿರುವ ವಿವಿಧ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಗೂ ಇದರಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಜಿಮ್ಸ್‌ ಆಸ್ಪತ್ರೆಯ ಮನೋರೋಗ ತಜ್ಞ ಡಾ.ಪ್ರಭುಕಿರಣ ಗೋಗಿ ಅವರು ಭಾಗವಹಿಸಿದ್ದರು ಎಂದು ವಿಟಿಯು ಪ್ರಾದೇಶಿಕ ನಿರ್ದೇಶಕ ಡಾ.ಬಸವರಾಜ ಗಾದಗೆ ತಿಳಿಸಿದರು.

ಕೊರೊನಾ ಸಂದರ್ಭದಲ್ಲಿಯೂ ಪ್ರಾದೇಶಿಕ ಕಚೇರಿಯಿಂದ ಹಮ್ಮಿಕೊಂಡಿರುವ ವಿವಿಧ ಚಟುವಟಿಕೆಗಳ ಬಗ್ಗೆ ವಿವರ ನೀಡಿದ ಅವರು, ‘ಸಿವಿಲ್ ಎಂಜಿನಿಯರಿಂಗ್, ಎಂಸಿಎ, ಎಂಬಿಎ ಕೋರ್ಸ್‌ ಓದುತ್ತಿರುವ ವಿದ್ಯಾರ್ಥಿಗಳಿಗೆ ವೆಬಿನಾರ್‌ಗಳನ್ನು ನಡೆಸಲಾಗಿದೆ. ಜೊತೆಗೆ, ‍ಪ್ರಾಧ್ಯಾಪಕ ಸಿಬ್ಬಂದಿಗೆ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಶನ್ಸ್‌ ಅಂಡ್‌ ಕಂಪ್ಯೂಟರ್‌ ಸೈನ್ಸ್‌ನಲ್ಲಿನ ಸಮಕಾಲೀನ ಸಂಶೋಧನಾ ಬೆಳವಣಿಗೆಗಳ ಕುರಿತು ಜುಲೈ 6ರಿಂದ ಆನ್‌ಲೈನ್‌ ಬೋಧನೆ ಆರಂಭವಾಗಿದ್ದು, ಜು 10ರವರೆಗೂ ಮುಂದುವರಿಯಲಿದೆ’ ಎಂದರು.

ADVERTISEMENT

ಭುವನೇಶ್ವರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಡಾ.ಪ್ರಶಾಂತ ಕುಮಾರ್‌ ಸಾಹು, ಒಡಿಶಾದ ಬೆರ್ಹಾಮ್‌ಪುರದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿಯ ಡಾ.ಅಜಿತ್ ಕುಮಾರ್‌ ಪಾಂಡಾ, ರಾಜಸ್ಥಾನದ ಜೈಪುರದ ಮಾಳವೀಯ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಡಾ.ರವಿಕುಮಾರ್‌ ಮದ್ದಿಲ, ಲಾತೂರ್‌ನ ಎಂ.ಎಸ್‌.ಬಿಡವೆ ಎಂಜಿನಿಯರಿಂಗ್ ಕಾಲೇಜಿನ ಡಾ.ಸುರೇಶ್ ರೇಣುಕಾದಾಸ್‌ ಹಾಲಹಳ್ಳಿ, ಭಾಲ್ಕಿಯ ಭೀಮಣ್ಣ ಖಂಡ್ರೆ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಡಾ.ಸಂಜಯಕುಮಾರ್‌ ಗೌರೆ, ತುಮಕೂರಿನ ಸಿದ್ಧಗಂಗಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಡಾ.ವಿಶ್ವನಾಥ ಕಪಿನಯ್ಯ, ಮಹಾರಾಷ್ಟ್ರದ ನಾಂದೇಡ್‌ನ ಎಸ್‌ಜಿಜಿಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಅಂಡ್‌ ಟೆಕ್ನಾಲಜಿಯ ಡಾ.ಸಂಜೀವ ಬೋಂಡೆ, ಮದನಪಲ್ಲಿಯ ತಾಂತ್ರಿಕ ಕಾಲೇಜಿನ ಆರ್‌.ರವೀಂದ್ರಯ್ಯ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.