ADVERTISEMENT

ಡಿಸಿ ಕೆಆರ್‌ಐಡಿಎಲ್‌ಗೆ ಏಕೆ ನೋಟಿಸ್ ನೀಡಿಲ್ಲ: ಸಿದ್ದಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 6:34 IST
Last Updated 26 ಸೆಪ್ಟೆಂಬರ್ 2025, 6:34 IST
<div class="paragraphs"><p>ಸಿದ್ದಲಿಂಗ ಸ್ವಾಮೀಜಿ</p></div>

ಸಿದ್ದಲಿಂಗ ಸ್ವಾಮೀಜಿ

   

ಕಲಬುರಗಿ: ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಲು ಕರ್ನಾಟಕ ಚಿತ್ತಾಪುರದ ಕಾಗಿಣಾ ನದಿಯಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌)ಕ್ಕೆ ಹಂಚಿಕೆಯಾದ ಮರಳು ಬ್ಲಾಕ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮರಳನ್ನು ಉಸ್ತುವಾರಿ ಸಚಿವರ ಸಂಬಂಧಿಕರೇ ಅಗೆದಿದ್ದಾರೆ. ಆದರೂ, ಜಿಲ್ಲಾಧಿಕಾರಿ ಅವರು ಕೆಆರ್‌ಐಡಿಎಲ್‌ಗೆ ಏಕೆ ನೋಟಿಸ್ ಜಾರಿ ಮಾಡಿಲ್ಲ ಎಂದು ಶಿವಸೇನಾ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾಧಿಕಾರಿ ಅವರು ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ತಾಲ್ಲೂಕು ಮರಳು ಸಮಿತಿಯ ಅಧ್ಯಕ್ಷರಾದ ಉಪವಿಭಾಗಾಧಿಕಾರಿ, ಕಾರ್ಯದರ್ಶಿಯಾದ ತಹಶೀಲ್ದಾರ್ ಅವರಿಗೆ ನೋಟಿಸ್ ಜಾರಿ ಮಾಡಿ 24 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದರು. ಆದರೆ, ಹಲವು ದಿನಗಳಾದರೂ ಪ್ರತಿಕ್ರಿಯೆ ನೀಡಿಲ್ಲ. ಇಡೀ ಅಕ್ರಮಕ್ಕೆ ಕೆಆರ್‌ಐಡಿಎಲ್‌ ಅಧಿಕಾರಿಗಳು ಶಾಮೀಲಾಗಿರುವುದೇ ಕಾರಣವಾಗಿದೆ. ಆದರೆ, ಜಿಲ್ಲಾಧಿಕಾರಿ ಅವರು ಮಾತ್ರ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿಲ್ಲ. ಯಾರಾದರೂ ಜಿಲ್ಲಾಧಿಕಾರಿ ಮೇಲೆ ಒತ್ತಡ ತಂದಿದ್ದಾರೆಯೇ’ ಎಂದು ಪ್ರಶ್ನಿಸಿದರು.

ADVERTISEMENT

‘ಮರಳು ಅಕ್ರಮ ಗಣಿಗಾರಿಕೆ ನಡೆದಿರುವ ಕುರಿತು ಪರಿಶೀಲಿಸಲು ಬಳ್ಳಾರಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಬಂದಾಗ ಬೇಕೆಂತಲೇ ಅವರು ನದಿಯ ಗಣಿಗಾರಿಕೆ ನಡೆದ ಸ್ಥಳಕ್ಕೆ ಹೋಗದಂತೆ ಕಲ್ಲು, ಮಣ್ಣು ಹಾಕಿ ಮುಚ್ಚಿದ್ದಾರೆ. ತಹಶೀಲ್ದಾರ್ ಅವರು ತನಿಖೆಗೆ ಅಗತ್ಯವಾದ ಉಪಕರಣಗಳನ್ನು ಒದಗಿಸದಿರುವ ಬಗ್ಗೆ ಅಧಿಕಾರಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ’ ಎಂದರು.

‘ದಿನ ಬೆಳಗಾದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುತ್ತಾರೆ. ಅವರದೇ ಕ್ಷೇತ್ರದಲ್ಲಿ ಸಂವಿಧಾನಕ್ಕೆ ಧಕ್ಕೆ ಬಂದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆದರೂ, ಆ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.