ಕಲಬುರಗಿಯಲ್ಲಿ ಸೋಮವಾರ ವಿದ್ಯುತ್ ತಂತಿ ತಗುಲಿದ್ದ ಶಾಲಾ ವಾಹನದ ಬಳಿ ಗಾಯಗೊಂಡು ಬಿದ್ದ ಮಹಿಳೆ
ಕಲಬುರಗಿ: ನಗರದಲ್ಲಿ ಸೋಮವಾರ ಬುದ್ಧಿಮಾಂದ್ಯ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಶಾಲಾ ವಾಹನದ ಮೇಲೆ ವಿದ್ಯುತ್ ತಂತಿ ಕಡಿದು ಬಿದ್ದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.
ವಿದ್ಯುತ್ ಶಾಕ್‌ನಿಂದಾಗಿ ಭಾಗಶ್ರೀ ರವೀಂದ್ರ ಎಂಬುವವರ ಹೊಟ್ಟೆ, ಕೈ ಮತ್ತು ಕಾಲಿಗೆ ಸುಟ್ಟ ಗಾಯಗಳಾಗಿವೆ. ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪರಿವರ್ತನಾ ಶಾಲಾ ವಾಹನದಲ್ಲಿ ಸುಮಾರು 14 ಬುದ್ಧಿಮಾಂದ್ಯ ಮಕ್ಕಳನ್ನು ಶಾಲಾ ತರಗತಿಗೆ ಕರೆದೊಯ್ಯಲಾಗುತ್ತಿತ್ತು. ಹಳೇ ಜೇವರ್ಗಿ ಕ್ರಾಸ್ ಸಮೀಪದಲ್ಲಿ ಮಕ್ಕಳನ್ನು ಹತ್ತಿಸಿಕೊಳ್ಳಲು ನಿಂತಿದ್ದ ವಾಹನದ ಮೇಲೆ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಈ ಬಗ್ಗೆ ಅರಿವಿಲ್ಲದೆ ಭ್ಯಾಗ್ಯಶ್ರೀ ಅವರು ತಮ್ಮ ಪುತ್ರ ಆಯುಷ್‌ನನ್ನು ಶಾಲಾ ವಾಹನದಲ್ಲಿ ಹತ್ತಿಸಿದ್ದರು. ನೆಲದ ಮೇಲೆ ನಿಂತು ವಾಹನಕ್ಕೆ ಕೈ ತಾಗಿಸಿದ್ದರಿಂದ ಭೂಸಂಪರ್ಕದಿಂದಾಗಿ (ಅರ್ಥಿಂಗ್) ಮಹಿಳೆಗೆ ವಿದ್ಯುತ್ ಶಾಕ್ ತಗುಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿದ್ಯುತ್ ಶಾಕ್‌ನಿಂದ ಕೆಳಗೆ ಬಿದ್ದ ಭಾಗ್ಯಶ್ರೀ ಅವರ ಮೈ ಮೇಲೆ ಬೆಂಕಿ ಕಾಣಿಸಿಕೊಂಡು ಹೊಟ್ಟೆ, ಕೈ ಮತ್ತು ಕಾಲಿಗೆ ಸುಟ್ಟ ಗಾಯಗಳಾದವು. ಸಹಾಯಕ್ಕೆ ಬರುವಂತೆ ಚೀರಾಡಿದರು. ಕೆಲವರು ದಿಕ್ಕಾಪಾಲಾಗಿ ಓಡಿದರು. ವಾಹನದಲ್ಲಿದ್ದ ಮಕ್ಕಳೂ ಆತಂಕಕ್ಕೆ ಒಳಗಾಗಿ ರೋಧಿಸಿದರು. ಸ್ಥಳೀಯರು ಬಂದು ಮಹಿಳೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದರು. ಮಕ್ಕಳನ್ನು ಸಮಾಧಾನಪಡಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
ಶಾಸಕ ಅಲ್ಲಮಪ್ರಭು ಪಾಟೀಲ, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಗೆ ದಾಖಲಾದ ಮಹಿಳೆಯ ಆರೋಗ್ಯವನ್ನು ವಿಚಾರಿಸಿ, ಧೈರ್ಯ ತುಂಬಿದರು.
ಮತ್ತೊಂದು ಪ್ರಕರಣ: ಕೇಂದ್ರ ಬಸ್ ನಿಲ್ದಾಣ ಮುಂಭಾಗದಲ್ಲಿ ರಸ್ತೆಯ ವಿಭಜಕ ದಾಟುವಾಗ ಕಡಿದು ಬಿದ್ದ ವಿದ್ಯುತ್ ತಂತಿ ತಗುಲಿ 14 ವರ್ಷದ ಬಾಲಕ ಕೆಲವು ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದ. ಈ ಅವಘಡ ಮಾಸುವ ಮುನ್ನವೇ ಅದೇ ರಸ್ತೆಯಲ್ಲಿ ಮತ್ತೊಂದು ಅವಘಡ ನಡೆದಿದೆ. ಮಹಾನಗರ ಪಾಲಿಕೆ ಹಾಗೂ ಜೆಸ್ಕಾಂ ನಿರ್ಲಕ್ಷ್ಯಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.