ADVERTISEMENT

ಸೇಡಂ: ಬಟ್ಟೆ ತೊಳೆಯಲು ಹೋಗಿ ನದಿಪಾಲಾದ ಮಹಿಳೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 17:00 IST
Last Updated 16 ಜುಲೈ 2021, 17:00 IST
ಸೇಡಂ ತಾಲ್ಲೂಕು ಸಂಗಾವಿ (ಎಂ) ಬಳಿ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಸಿಬ್ಬಂದಿ ನದಿಯಲ್ಲಿ ಕೊಚ್ಚಿಕೊಂಡ ಹೋದ ಮಹಿಳೆಯನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸಿದರು
ಸೇಡಂ ತಾಲ್ಲೂಕು ಸಂಗಾವಿ (ಎಂ) ಬಳಿ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಸಿಬ್ಬಂದಿ ನದಿಯಲ್ಲಿ ಕೊಚ್ಚಿಕೊಂಡ ಹೋದ ಮಹಿಳೆಯನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸಿದರು   

ಸೇಡಂ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಸಂಗಾವಿ (ಎಂ) ಗ್ರಾಮದ ಬಳಿಯ ಕಾಗಿಣಾ ನದಿಯಲ್ಲಿ ಬಟ್ಟೆಯ ತೊಳೆಯಲು ಹೋದ ಮಹಿಳೆ ಶುಕ್ರವಾರ ನೀರಿನಲ್ಲಿ ಕೊಚ್ಚಿಕೊಂಡ ಹೋಗಿದ್ದಾಳೆ.

ಗ್ರಾಮದ ಮಾಣಿಕಮ್ಮ ಗಂಡ ಸಂಗಪ್ಪ (28) ಎನ್ನುವ ಮಹಿಳೆಯೇ ನೀರು ಪಾಲಾಗಿದ್ದಾಳೆ. ಬಟ್ಟೆ ತೊಳೆಯಲು ಕಾಗಿಣಾ ನದಿಗೆ ತೆರಳಿದ್ದ ಸಂದರ್ಭದಲ್ಲಿ ಬಟ್ಟೆಯನ್ನು ತುಂಬಿದ್ದ ಬುಟ್ಟಿ ನೀರಿಗೆ ಉರುಳಿದೆ. ಅದನ್ನು ತೆಗೆದುಕೊಳ್ಳಲು ಮುಂದಾದಾಗ ನದಿ ನೀರಿಗೆ ಕೊಚ್ಚಿಕೊಂಡು ಹೋಗಿದ್ದಾಳೆ ಎನ್ನಲಾಗಿದೆ.

ಗ್ರಾಮದ ಕವಿತಾ ಎನ್ನುವರು ನದಿಯತ್ತ ತೆರಳಿದಾಗ ವಿಷಯ ಗಮನಕ್ಕೆ ಬಂದಿದೆ. ಸುದ್ದಿ ತಿಳಿದು ಗ್ರಾಮಸ್ಥರು ನದಿಯತ್ತ ದೌಡಾಯಿಸಿ ಅಗ್ನಿಶಾಮಕ ಠಾಣೆ ಸೇರಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಳಖೇಡ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ದಿನ ಪೂರ್ತಿ ದೋಣಿ ಮೂಲಕ ಕಾಗಿಣಾ ನದಿಯ ದಂಡೆಗಳಲ್ಲಿ ಹಾಗೂ ಮುಳ್ಳುಕಂಟಿಗಳಲ್ಲಿ ಹುಡುಕಿದ್ದಾರೆ. ಜೊತೆಗೆ ಮಳಖೇಡ ಸೇತುವೆವರೆಗೆ ತೆರಳಿ ಕಾರ್ಯಾಚರಣೆ ನಡೆಸಿದರೂ ಮಹಿಳೆ ದೇಹ ಸಿಗಲಿಲ್ಲ. ಶನಿವಾರವೂ ಕಾರ್ಯಾಚರಣೆ ನಡೆಯಲಿದೆ.

ಮಾಣಿಕಮ್ಮ ಅವರಿಗೆ ಗಂಡ, ಒಂದು ಗಂಡು, ಒಂದು ಹೆಣ್ಣು ಮಗು ಇದೆ. ಕೊಡದೂರ ಗ್ರಾಮದ ಮಹಿಳೆಯಾಗಿದ್ದು ಸಂಗಾವಿ (ಎಂ) ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು.

ಸ್ಥಳಕ್ಕೆ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದರು. ಮಳಖೇಡ ಠಾಣೆಯ ಪಿಎಸ್‌ಐ ಪೃಥ್ವಿರಾಜ ತಿವಾರಿ, ಎಎಸ್‌ಐ ಶಿವಶರಣಪ್ಪ, ಹುಲಿಗೆಪ್ಪ ಭೇಟಿ ನೀಡಿದರು.

ಮಾಣಿಕಮ್ಮ ಅವರ ಮಾವ 'ಬಟ್ಟೆ ತೊಳೆಯಲು ನೀರಿಗೆ ಹೋಗಬೇಡ. ಮನೆಯಲ್ಲಿಯೇ ನೀರು ತುಂಬಿಟ್ಟಿದ್ದೇನೆ. ಅವುಗಳಲ್ಲಿಯೇ ಬಟ್ಟೆ ತೊಳೆ, ನದಿಯಲ್ಲಿ ನೀರು ಬಹಳ ಇದೆ' ಎಂದು ಹೇಳಿದ್ದರು. ಆದರೂ ಮಹಿಳೆ ನದಿಗೆ ಹೋಗಿದ್ದಳು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.