ADVERTISEMENT

‘ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಜೀವನ’

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 5:15 IST
Last Updated 22 ಏಪ್ರಿಲ್ 2022, 5:15 IST
ಸ್ವಯಂ ಉದ್ಯೋಗದಲ್ಲಿ ಯಶಸ್ವಿಯಾದ ಅನ್ನಪೂರ್ಣಾ ಸಂಗೊಳಗಿ ಅವರನ್ನು ಕಲಬುರಗಿಯಲ್ಲಿ ಬುಧವಾರ ಸನ್ಮಾನಿಸಲಾಯಿತು. ಡಾ.ಮಹಾದೇವಿ ಮಾಲಕರಡ್ಡಿ, ಸಂತೋಷ ಜವಳಿ, ವೈಶಾಲಿ ದೇಶಮುಖ, ಸಂಧ್ಯಾ ಹೊನಗುಂಟಿಕರ್ ಇದ್ದರು
ಸ್ವಯಂ ಉದ್ಯೋಗದಲ್ಲಿ ಯಶಸ್ವಿಯಾದ ಅನ್ನಪೂರ್ಣಾ ಸಂಗೊಳಗಿ ಅವರನ್ನು ಕಲಬುರಗಿಯಲ್ಲಿ ಬುಧವಾರ ಸನ್ಮಾನಿಸಲಾಯಿತು. ಡಾ.ಮಹಾದೇವಿ ಮಾಲಕರಡ್ಡಿ, ಸಂತೋಷ ಜವಳಿ, ವೈಶಾಲಿ ದೇಶಮುಖ, ಸಂಧ್ಯಾ ಹೊನಗುಂಟಿಕರ್ ಇದ್ದರು   

ಕಲಬುರಗಿ: ‘ಹೆಣ್ಣುಮಕ್ಕಳು ನೌಕರಿಗಾಗಿ ಯೋಚನೆ ಮಾಡುವುದಕ್ಕಿಂತ, ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ಸಾಗಿಸಬೇಕು. ಸ್ವ ‍ಪ್ರತಿಷ್ಠೆ ಬಿಟ್ಟರೆ ಸ್ವಯಂ ಉದ್ಯೋಗದಲ್ಲಿ ಯಶಸ್ವಿಯಾಗಲು ಸಾಧ್ಯ’ ಎಂದು ಉದ್ಯಮಿ ಸಂತೋಷ ಜವಳಿ ಸಲಹೆ ನೀಡಿದರು.

ಇಲ್ಲಿನ ಸಂಗಮೇಶ್ವರ ಮಹಿಳಾ ಮಂಡಳದಿಂದ ಬುಧವಾರ ಮಹಿಳೆಯರಿಗಾಗಿ ಆಯೋಜಿಸಿದ್ದ ಉದ್ಯಮಶೀಲತೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನಾನು ಬೇರೊಬ್ಬರ ಕಡೆ ಮಾಡುತ್ತಿದ್ದ ಉದ್ಯೋಗವನ್ನು ಬಿಟ್ಟು ಸ್ವಯಂ ಉದ್ಯೋಗ ಆರಂಭಿಸಿದ ಮೇಲೆ ಯಶಸ್ವಿಯಾದೆ. ಹೆಣ್ಣುಮಕ್ಕಳಿಗೂ ಹೆಚ್ಚಿನ ಅವಕಾಶಗಳಿವೆ. ಅವರಲ್ಲಿ ದೊಡ್ಡ ಪ್ರಮಾಣದ ಕೌಶಲವಿದೆ. ಮನೆಯಲ್ಲಿ ಇದ್ದುಕೊಂಡೇ ಮಾಡಬಹುದಾದ ಉದ್ಯಮಗಳೂ ಸಾಕಷ್ಟಿವೆ. ಧೈರ್ಯ ಮಾಡಿ ಮುಂದೆ ಬಂದರೆ ಯಶಸ್ಸು ಸಾಧ್ಯ’ ಎಂದರು.

ಸ್ವಯಂ ಉದ್ಯೋಗ ಮಾಡಿ ಯಶಸ್ವಿಯಾದಅನ್ನಪೂರ್ಣಾ ಸಂಗೊಳಗಿ ಅವರನ್ನು ಮಂಡಳದಿಂದ ಸನ್ಮಾನಿಸಲಾಯಿತು. ‘ನಾನು ಆಕಸ್ಮಿಕವಾಗಿ ಉದ್ಯೋಗ ಮಾಡುವತ್ತ ವಾಲಿದೆ. ಮನೆಯಲ್ಲಿಯೇಚಕ್ಕುಲಿ, ಸೇವ್‌, ಶಂಕರಪೋಳಿ, ಘಾಟಿ, ಅವಲಕ್ಕಿ, ಚೂಡಾ ಮುಂತಾದವನ್ನು ತಿನಿಸುಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತ ಬಂದಂತೆ ಉದ್ಯಮವಾಗಿ ಬೆಳೆಯಿತು. ಈಗ 80 ಕುಟುಂಬಗಳು ಇದನ್ನೇ ನಂಬಿ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿವೆ. ಈ ಸೇವೆ ಗುರುತಿಸಿ ಮಹಿಳಾ ಮಂಡಳದವರು ನೀಡಿದ ಸನ್ಮಾನ ಇನ್ನಷ್ಟು ಕೆಲಸ ಮಾಡಲು ಹುಮ್ಮಸ್ಸು ತಂದಿದೆ. ಬೆಳೆಯುವವರಿಗೆ ಇಂಥ ಪ್ರೋತ್ಸಾಹ ಆಸರೆಯಾಗುತ್ತದೆ’ ಎಂದು ಅನ್ನಪೂರ್ಣಾ ತಮ್ಮ ಅನುಭವ ಬಿಚ್ಚಿಟ್ಟರು.

ADVERTISEMENT

ಮಂಡಳದ ಉಪಾಧ್ಯಕ್ಷೆ ಡಾ.ಮಹಾದೇವಿ ಮಾಲಕರಡ್ಡಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರು ಕೂಡ ಮಾರುಕಟ್ಟೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇಂಥ ಪ್ರಯತ್ನಗಳಿಂದ ಮಹಿಳೆಯರ ಬದುಕಿನ ಶೈಲಿ ಬದಲಾಗಲಿದೆ ಎಂದರು.

ವೈಶಾಲಿ ದೇಶಮುಖ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಹಲವಾರು ಕುಟುಂಬಗಳು ಅತ್ಯಂತ ಕಷ್ಟಕ್ಕೀಡಾಗಿ ಆದಾಯ ಇಲ್ಲದಂತಾಯಿತು. ಸಾಲ ಮಾಡಿಕೊಂಡು ಕಟ್ಟಪಟ್ಟಿದ್ದನ್ನು ನಾನು ಕಂಡಿದ್ದೇನೆ. ಆ ಕಾರಣದಿಂದ ಸಂಗಮೇಶ್ವರ ಮಹಿಳಾ ಮಂಡಳ ಇಂತಹ ಕುಟುಂಬಗಳಿಗೆ ಮತ್ತೆ ಚೈತನ್ಯ ತುಂಬಲು ಸ್ವಯಂ ಉದ್ಯೋಗ ತರಬೇತಿಗಳನ್ನು ಆಯೋಜಿಸಲು ಮುಂದಾಗಿದೆ’ ಎಂದರು.

ಶಾಂತಾ ಪಸ್ತಾಪುರ ಪ್ರಾರ್ಥನೆ ಹಾಡಿದರು.ನೀಲಾಂಬಿಕಾ ಮಹಾಗಾಂವಕರ್ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಹೊನಗುಂಟಿಕರ್ ಸ್ವಗತಿಸಿದರು. ಶಾಂತಾ ಭೀಮಸೇನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.