ಸಾವು
(ಪ್ರಾತಿನಿಧಿಕ ಚಿತ್ರ)
ಕಲಬುರಗಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಹಳೇ ಸ್ನೇಹಿತನೊಬ್ಬ ಗೃಹಿಣಿಗೆ ತನ್ನ ಪತಿಯನ್ನು ಬಿಟ್ಟುಬರುವಂತೆ ಕಿರುಕುಳ ಕೊಟ್ಟು, ಬ್ಲ್ಯಾಕ್ ಮೇಲೆ ಮಾಡಿದಕ್ಕೆ ಮನನೊಂದು ಗೃಹಿಣಿಯು ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಾಮತೀರ್ಥ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಬಾಲೂರ (ಕೆ) ಮೂಲದ ವೈಷ್ಣವಿ ಮಾರುತಿ (24) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ಕಾರಣವಾದ ಆರೋಪದಲ್ಲಿ ಕಮಲನಗರದ ವಿಷ್ಣು ಅಂಕುಶ ವಗ್ದರೆ ವಿರುದ್ಧ ಸಬ್‌ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈಷ್ಣವಿ ಪತಿ ಮಾರುತಿ ಪಾನಿಪುರಿ ಅಂಗಡಿ ನಡೆಸುತ್ತಿದ್ದಾರೆ. ಬೀದರ್‌ನಲ್ಲಿ ವಾಸವಿದ್ದಾಗ ಸಂಬಂಧಿಕರ ಮಗಳು ಒಬ್ಬರು ವೈಷ್ಣವಿ ಮನೆಯಲ್ಲಿದ್ದು ಓದುತ್ತಿದ್ದರು. ಈ ವೇಳೆ ವಿಷ್ಣು ವಗ್ದರೆ ವೈಷ್ಣವಿಗೆ ಪರಿಚಯವಾಗಿದ್ದ. ಕಲಬುರಗಿಗೆ ಬಂದ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ರಿಕ್ವೆಸ್ಟ್ ಕಳುಹಿಸಿ ಸಂಪರ್ಕ ಸಾಧಿಸಿ, ಆಗಾಗ ಮೆಸೇಜ್ ಸಹ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿಕರ ಮಗಳ ನಡತೆ ಸರಿ ಇಲ್ಲ ಎಂದ ವಿಷ್ಣು, ಆಕೆಯ ಬಗ್ಗೆ ಪೋಷಕರಿಗೆ ತಿಳಿಸುವುದಾಗಿ ವೈಷ್ಣವಿಗೆ ಬೆದರಿಕೆ ಹಾಕಿದ್ದಾನೆ. ಪೋಷಕರಿಗೆ ತಿಳಿಸದಂತೆ ವೈಷ್ಣವಿ ಮನವಿ ಮಾಡಿಕೊಂಡಿದ್ದಳು. ಇದಕ್ಕೆ ಪ್ರತಿಯಾಗಿ, ತನ್ನೊಂದಿಗೆ ಮೆಸೇಜ್ ಮಾಡುತ್ತಾ ಇರಬೇಕು ಎಂದು ತಾಕೀತು ಮಾಡಿದ್ದಾನೆ. ಹಂಗಿಗೆ ಬಿದ್ದ ವೈಷ್ಣವಿ, ಆತ ಹೇಳಿದಂತೆ ಕೇಳಿದ್ದಾಳೆ. ಇದೇ ನೆಪದಲ್ಲಿ ಭೇಟಿಯಾದ ವಿಷ್ಣು, ಗಂಡನನ್ನು ಬಿಟ್ಟು ಬರುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದೆ ಇದ್ದಾಗ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅವನಿಗೆ (ವಿಷ್ಣು) ಗಲ್ಲು ಶಿಕ್ಷೆ ಕೊಡಿಸುವಂತೆ ಡೆತ್‌ನೋಟ್‌ನಲ್ಲಿ ವೈಷ್ಣವಿ ಬರೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನಿಷೇಧಿತ ವಸ್ತುಗಳು ಪತ್ತೆ: ಇಲ್ಲಿನ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಗೋಡೆಯ ಹೊರಭಾಗದಲ್ಲಿ ಉಂಡೆ ಆಕಾರದ ಪೊಟ್ಟಣದಲ್ಲಿ ನಿಷೇಧಿತ ವಸ್ತುಗಳ ಪತ್ತೆಯಾಗಿದ್ದು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲು ಸಿಬ್ಬಂದಿ ಸಂಗೀತಾ ಅವರಿಗೆ ಈ ಪೊಟ್ಟಣಗಳು ದೊರೆತಿವೆ. ಅವುಗಳನ್ನು ಪರಿಶೀಲಿಸಿದಾಗ ತಂಬಾಕು, ಗುಟ್ಕಾ, ಬೀಡಿ ಸಿಗರೇಟು, ಪಾನ್ ಮಸಾಲಾ ಪತ್ತೆಯಾಗಿವೆ. ಜೈಲಿನ ಕೈದಿಗಳಿಗೆ ನಿಷೇಧಿತವಾದ ಈ ವಸ್ತುಗಳನ್ನು ಬಿಸಾಡಿದ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲವು ದಿನಗಳಿಂದ ಕೇಂದ್ರ ಕಾರಾಗೃಹ ನಿರಂತರ ಸುದ್ದಿಯಲ್ಲಿದೆ. ವಿಡಿಯೊ ಕಾಲ್ ಪ್ರಕರಣ, ಹನಿಟ್ರ್ಯಾಪ್ ಆರೋಪದ ಆಡಿಯೊ ಕಾಲ್, ಕೈದಿಗಳ ನಡುವೆ ಕಲ್ಲು ತೂರಾಟ ಪ್ರಕರಣಗಳು ಕೇಳಿಬಂದಿವೆ. ಈಗ ಕಾರಾಗೃಹದಲ್ಲಿ ಕಾಂಪೌಂಡ್ ಗೋಡೆಯ ಆಚೆಯಿಂದ ನಿಷೇಧಿತ ವಸ್ತುಗಳ ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.