ADVERTISEMENT

ರಾಷ್ಟ್ರ ನಿರ್ಮಾಣದಲ್ಲಿ ರೈತ, ಕಾರ್ಮಿಕರ ಪಾತ್ರ ಪ್ರಮುಖವಾದುದು

ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾ. ಜಿ.ಆರ್.ಶೆಟ್ಟರ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 4:10 IST
Last Updated 13 ಜನವರಿ 2021, 4:10 IST
ಕಾರ್ಮಿಕರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಕೆ.ಎಲ್. ಜಾನ್ಸನ್, ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಆರ್. ಶೆಟ್ಟರ್, ಆರತಿ ಪೂಜಾರಿ, ರೇಣುಕಾ ಗುಬ್ಬೇವಾಡಿ ಇದ್ದರು
ಕಾರ್ಮಿಕರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಕೆ.ಎಲ್. ಜಾನ್ಸನ್, ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಆರ್. ಶೆಟ್ಟರ್, ಆರತಿ ಪೂಜಾರಿ, ರೇಣುಕಾ ಗುಬ್ಬೇವಾಡಿ ಇದ್ದರು   

ಕಲಬುರ್ಗಿ: ರೈತರು ಮತ್ತು ಕಾರ್ಮಿಕರು ಈ ದೇಶದ ಬೆನ್ನೆಲುಬು. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ರೈತರು ಮತ್ತು ಕಾರ್ಮಿಕ ವರ್ಗದವರ ಪಾತ್ರ ಪ್ರಮುಖವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಆರ್.ಶೆಟ್ಟರ್ ಶ್ಲಾಘಿಸಿದರು.

ನಗರದ ಎಸ್.ಎಸ್.ಎಲ್ ಕಾನೂನು ಮಹಾವಿದ್ಯಾಲಯದ ಕಾಲೇಜು ಆವರಣದಲ್ಲಿ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಕಾರ್ಮಿಕ ಇಲಾಖೆ ಮತ್ತು ವಿವಿಧ ಮಂಡಳಿಗಳಿಂದ ವಿವಿಧ ಯೋಜನೆಗಳ ಅನುಷ್ಠಾನಗೊಳಿಸಲು ಕಾರ್ಮಿಕ ಇಲಾಖೆಯ ಅಧಿಕಾರಿ, ನಿರೀಕ್ಷಕರು, ಕಾರ್ಮಿಕರು ಹಾಗೂ ಸಿಬ್ಬಂದಿಗೆ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರು ಹಾಗೂ ಕಾರ್ಮಿಕರನ್ನು ಸದೃಢಗೊಳಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಸರ್ಕಾರ ಅವರಿಗೆ ನೇರವಾಗಿ ಕೆಲಸ ಮಾಡಲು ಅವರ ಕುಂದು–ಕೊರತೆಗಳನ್ನು ಆಲಿಸಲು ಕಾರ್ಮಿಕ ಇಲಾಖೆ ಇದೆ ಎಂದರು.

ADVERTISEMENT

ಶೋಷಿತರು ಮತ್ತು ಕಾರ್ಮಿಕ ವರ್ಗದವರಿಗೆ ಹಲವು ಕಾನೂನು ಸೌಕರ್ಯಗಳಿದ್ದರೂ ಅವರಿಗೆ ಅರಿವಿರುವುದಿಲ್ಲ. ಆದ್ದರಿಂದ ಸದೃಢ ಸಮಾಜ ನಿರ್ಮಾಣಕ್ಕೆ ಇವರೆಲ್ಲರ ಕುರಿತು ನಾವು ಕಾಳಜಿವಹಿಸುವುದು ಅಗತ್ಯವೆಂದರು. ಪ್ರತಿ ಹಳ್ಳಿ ಹಾಗೂ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ, ಕಾನೂನು ಸೇವಾ ಸೌಲಭ್ಯ, ವಿಮಾ ಸೌಕರ್ಯ ಕುರಿತು ತಿಳಿಸಬೇಕು ಎಂದು ಹೇಳಿದರು.

ಕಾರ್ಯಾಗಾರ ನಡೆಸಿಕೊಟ್ಟ ಬೆಂಗಳೂರಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯ ಉಪ ಕಾರ್ಯದರ್ಶಿ ಕೆ.ಎಲ್.ಜಾನ್ಸನ್, ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಪ್ರಮುಖ ಕಾಯ್ದೆಗಳ ಕುರಿತು ಪಿಪಿಟಿ ಮೂಲಕ ವಿವರಿಸಿದರು.

ಕಲಬುರ್ಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಆರತಿ ಪೂಜಾರಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ನುಡಿಗಳನ್ನಾಡಿದರು.

ಕಲಬುರ್ಗಿ ಉಪ–ವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಎಸ್.ಎಸ್.ಎಲ್ ಕಾನೂನು ಮಹಾ ವಿದ್ಯಾಲಯದ ಉಪ ಪ್ರಾಂಶುಪಾಲರಾದ ರೇಣುಕಾ, ಎನ್.ಸಿ.ಎಲ್.ಪಿ.ಯ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರ ಕುಮಾರ್, ದತ್ತಾತ್ರೇಯ ಗಾದಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.