ಕಲಬುರಗಿಯ ಹೈಕೋರ್ಟ್ ಪೀಠ ಆವರಣದಲ್ಲಿ ನಳನಳಿಸುತ್ತಿರುವ ಹಸಿರು ಹೊನ್ನು...
ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಕಲಬುರಗಿ: ‘ಹಸುರತ್ತಲ್! ಹಸುರಿತ್ತಲ್!
ಹಸುರೆತ್ತಲ್ ಕಡಲಿನಲಿ
ಹಸರ‍್ಗಟ್ಟಿತೊ ಕವಿಯಾತ್ಮಂ
ಹಸುರ್‌ನೆತ್ತರ್ ಒಡಲಿನಲಿ!’
ಇವು ರಸಋಷಿ ಕುವೆಂಪು ಅವರ ‘ಹಸುರು’ ಕವಿತೆಯ ಸಾಲುಗಳು. ಮಲೆನಾಡಿನ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಅವರು ಬಣ್ಣಿಸಿದ ಬಗೆ. ಇಂಥ ವರ್ಣನೆಯನ್ನು ಹೋಲುವ ದಟ್ಟಹಸಿರು ಬಿಸಿಲಿಗೆ ಹೆಸರಾದ ಕಲಬುರಗಿಯಲ್ಲೂ ಇದೆ!
ಅಲ್ಲಿ ಬೇವು, ಹೊಂಗೆ, ಆಲ, ಅರಳಿಯ ಹಸಿರು ಹರಡಿದೆ. ಆಕಾಶ ಮಲ್ಲಿಗೆ, ಸಾಗವಾನಿಯಂಥ ಮರಗಳು ದಿಗಂತಕ್ಕೆ ಮೈಚಾಚಿವೆ. ಮಾವು, ಪೇರಲ, ನೇರಳೆ, ಸಪೋಟಾ ಗಿಡಗಳು ಪಕ್ಷಿ ಸಂಕುಲವನ್ನು ಸೆಳೆಯುತ್ತಿವೆ. ತಿಳಿ ಹಸಿರಿನಿಂದ ಗಾಢ ಹಸಿರಿನ ತನಕ ಬಣ್ಣಗಳ ಛಾಯೆ ಕಣ್ಮನ ಸೆಳೆಯುತ್ತಿದೆ.
ಇಂಥ ನೋಟ ಕಾಣೋದು ನ್ಯಾಯದಾನದ ತಾಣ ಕಲಬುರಗಿ ಹೈಕೋರ್ಟ್ ಆವರಣದಲ್ಲಿ. 58 ಎಕರೆಗಳಷ್ಟು ವಿಸ್ತೀರ್ಣದ ಪ್ರದೇಶದಲ್ಲಿ ಕಟ್ಟಡಗಳು, ರಸ್ತೆಗಳು, ಪಾದಚಾರಿ ಮಾರ್ಗ ಹೊರತುಪಡಿಸಿದರೆ, ಅಲ್ಲಿ ಅಡಿ–ಅಡಿಗೂ ಹಸಿರು ಹಾಸು ಹಾಸಿದೆ. ಬಹುತೇಕ 35 ಎಕರೆಯಷ್ಟು ಪ್ರದೇಶದಲ್ಲಿ ಹಸಿರು ನಳನಳಿಸುತ್ತಿದೆ.
ಕಲಬುರಗಿ ರಿಂಗ್ ರಸ್ತೆಯಿಂದ ಹೈಕೋರ್ಟ್ ಆವರಣಕ್ಕೆ ಅಡಿಯಿಟ್ಟರೆ ಸಾಲು–ಸಾಲು ಗಿಡ–ಮರಗಳ ಹಸಿರು ಸ್ವಾಗತ ಕೋರುತ್ತದೆ. ಗಾಳಿ ಸುಳಿದು ತಂಪಿನ ಕಂಪು ನೀಡುತ್ತದೆ. ಅಲ್ಲಲ್ಲಿ ಅರಳಿದ ಪುಷ್ಪಗಳು ಕಣ್ಮನ ಸೆಳೆಯುತ್ತವೆ. ಮುಖ್ಯವಾಗಿ ಎರಡ್ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ತಗ್ಗಿದ್ದು ಮೈ–ಮನಸ್ಸಿಗೆ ವೇದ್ಯವಾಗುತ್ತದೆ.
10–12 ವರ್ಷಗಳ ಹಿಂದಿನ ತನಕ ಹೈಕೋರ್ಟ್ ಆವರಣ ಬೆಂಗಾಡಿನಂತಿತ್ತು. ಇದೀಗ ಹೈಕೋರ್ಟ್ ಆವರಣದಲ್ಲಿ ಸಾವಿರ ಗಿಡ–ಮರಗಳು ಸೋಂಪಾಗಿ ಬೆಳೆದು ಸಸ್ಯಕಾಶಿಯೇ ಮೈವೆತ್ತಿದೆ. ಹೈಕೋರ್ಟ್ ಆವರಣ ಹಸಿರುಡುಗೆ ತೊಡಲು ನಿಸರ್ಗ ಪ್ರೇಮಿ ನ್ಯಾಯಮೂರ್ತಿಗಳ ಒತ್ತಾಸೆಯೇ ಕಾರಣ. ನ್ಯಾಯಮೂರ್ತಿಗಳ ಕಾಳಜಿ ಸೂರ್ಯರಶ್ಮಿಯಂತೆಯೂ, ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಶ್ರಮ ನೀರು–ಗೊಬ್ಬರದಂತೆಯೂ ಕೆಲಸ ಮಾಡಿವೆ ಎಂಬುದು ನಿರ್ವಿವಾದ.
ಕಾಡು–ತೋಟದ ಜುಗಲ್‌ಬಂದಿ: ಹೈಕೋರ್ಟ್ ಆವರಣದ ‘ಹಸಿರು ಕ್ರಾಂತಿ’ಗೆ ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಶ್ರಮ ಜೀವದ್ರವ್ಯವಾಗಿ ಹರಿದಿದೆ. ಅರಣ್ಯ ಇಲಾಖೆಯು 2013–14ರಲ್ಲಿ 3,500 ಸಾವಿರ ಸಸಿಗಳನ್ನು ನಾಟಿ ಮಾಡಿತ್ತು. ಬೇವು, ಬಸರಿ, ಹೊಂಗೆ, ಆಲ, ಅರಳಿ, ತೇಗ/ಸಾಗುವಾನಿ, ಗುಲ್‌ಮೊಹರ್, ಶ್ರೀಗಂಧ, ಹೆಬ್ಬೇವು, ಹುಣಸೆ, ಸೀಸ, ಆಕಾಶ ಮಲ್ಲಿಗೆ, ಬಸವನ ಪಾದ ಸೇರಿದಂತೆ ಹತ್ತಾರು ಬಗೆಯ ಗಿಡಗಳನ್ನು ನೆಟ್ಟಿತ್ತು. ಅವೆಲ್ಲ ಈಗ ಮರಗಳಾಗಿ ಮುಗಿಲೆತ್ತರ ಬೆಳೆದು, ಹೈಕೋರ್ಟ್ ಆವರಣಕ್ಕೆ ಹಸಿರು ಉಡುಗೆ ತೊಡಿಸಿವೆ.
ತೋಟಗಾರಿಕೆ ಇಲಾಖೆಯು ಅವಕಾಶ ಸಿಕ್ಕಲ್ಲೆಲ್ಲ ಹಸಿರಿನ ಹಾಸುಹಾಸಿದೆ. ಒಟ್ಟಾರೆ ತೋಟಗಾರಿಕೆ ಇಲಾಖೆಯಿಂದ 2,500 ಗಿಡಗಳನ್ನು ನೆಟ್ಟು ಪೋಷಿಸುತ್ತಿದೆ. ಉದ್ಯಾನದಲ್ಲಿ ಹುಲ್ಲುಗಾವಲು ಬೆಳೆಸಿದೆ. ಉದ್ಯಾನದ ಮಧ್ಯೆ, ರಸ್ತೆ ವಿಭಜಕಗಳಲ್ಲಿ ಹೂವು ಬಿಡುವ ಸಸ್ಯಗಳನ್ನು ನೆಟ್ಟು ಅಂದ ಹೆಚ್ಚಿಸಿದೆ. ಜೊತೆಗೆ ಮಾವು, ಪೇರಲ, ಸಪೋಟಾ, ತೆಂಗು, ನೇರಳೆ, ನೆಲ್ಲಿ, ಬೆಟ್ಟದ ನೆಲ್ಲಿ, ಆ್ಯಪಲ್ ಬಾರೆ, ವಾಟರ್ ಆ್ಯಪಲ್, ಚೆರ್ರಿ, ಬೆಳವಲು, ಸೀತಾಫಲ, ನಿಂಬೆ, ಮೋಸಂಬಿಯಂಥ ಗಿಡಗಳನ್ನು ಬೆಳೆಸಿ ಮಾನವ–ಪಕ್ಷಿಗಳ ಸಂಕುಲಕ್ಕೂ ನೆರವಾಗಿದೆ. ನೇರಳೆ ವನ, ಆ್ಯಪಲ್ ಬಾರೆ ವನ, ನಿಂಬೆ–ಮೋಸಂಬಿ ವನವೂ ಹೈಕೋರ್ಟ್ ಆವರಣದಲ್ಲಿರುವುದು ವಿಶೇಷ.
ನ್ಯಾಯ ದಾನ ಸಂಸ್ಥೆಯಾದ ಹೈಕೋರ್ಟ್ ಪ್ರಾಕೃತಿಕ ಸುಸ್ಥಿರತೆಯ ಮಾದರಿಯಾಗಿಯೂ ಕೆಲಸ ಮಾಡುತ್ತಿದೆ. ಕೋರ್ಟ್ ಆವರಣದ ಗಿಡ ಮರಗಳ ಹಸಿರು ಬರೀ ಅಲಂಕಾರಕ್ಕಲ್ಲ; ಇದೆಲ್ಲ ನೈಸರ್ಗಿಕ ಪ್ರಪಂಚದ ಬಗೆಗೆ ನಮಗಿರುವ ಗೌರವ; ಭವಿಷ್ಯದ ಪೀಳಿಗೆ ಕುರಿತ ನಮ್ಮ ಕರ್ತವ್ಯದ ಸಂಕೇತ. ಈ ಹಸಿರಿನ ಪರಂಪರೆಯ ಸಂರಕ್ಷಣೆ ವೃದ್ಧಿ ನ್ಯಾಯಮೂರ್ತಿಗಳು ವಕೀಲರು ಸಿಬ್ಬಂದಿ ಹಾಗೂ ನಾಗರಿಕರ ಸಾಮೂಹಿಕ ಹೊಣೆ. ಹೈಕೋರ್ಟ್ ಬರೀ ನ್ಯಾಯದ ದೇಗುಲವಾಗದೇ ಸುಸ್ಥಿರತೆಯ ಧಾಮವೂ ಆಗಲಿ ಎಂಬುದು ನಮ್ಮ ಆಶಯ.-ನ್ಯಾಯಮೂರ್ತಿ ಮೊಹಮ್ಮದ್ ನವಾಜ್, ಹಿರಿಯ ನ್ಯಾಯಮೂರ್ತಿ ಕಲಬುರಗಿ ಹೈಕೋರ್ಟ್
ಸಸಿಗಳ ನಾಟಿ ನಿರಂತರ ಪ್ರಕ್ರಿಯೆ. ಅದರ ಫಲಿತಾಂಶ ಸಿಗಲು ಸಮಯಬೇಕು. ಹೈಕೋರ್ಟ್‌ನಲ್ಲಿ ನೆಟ್ಟ ಸಸಿಗಳು 10 ವರ್ಷಗಳಲ್ಲಿ ಮರಗಳಾಗಿ ಬೆಳೆದಿವೆ. ಹಸಿರು ಬೆಳೆಸಲು ಜನರ ಸಹಕಾರ ಅಗತ್ಯ.–ಸುಮಿತಕುಮಾರ್ ಪಾಟೀಲ್ ಡಿಸಿಎಫ್ ಕಲಬುರಗಿ
ಹೈಕೋರ್ಟ್ ಆವರಣದ ಹಸಿರು ನ್ಯಾಯಮೂರ್ತಿಗಳ ನಿರಂತರ ಕಾಳಜಿ ತೋಟಗಾರಿಕಾ ಇಲಾಖೆಯ ಸಿಬ್ಬಂದಿಯ ನಿತ್ಯ ಆರೈಕೆಯ ಫಲ. ಯೋಜಿತ ಶ್ರಮ ಸಾಂಘಿಕ ಪ್ರಯತ್ನದಿಂದ ಇದು ಸಾಧ್ಯವಾಗಿದೆ.–ಸಂತೋಷ ಇನಾಂದಾರ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.