ADVERTISEMENT

ವಿವಿಧೆಡೆ ವಿಶ್ವ ಪರಿಸರ ದಿನಾಚರಣೆ; ನೈಸರ್ಗಿಕ ಆಮ್ಲಜನಕ ಹೆಚ್ಚಲು ಗಿಡ ಬೆಳೆಸಿ

ಸಾಂಕೇತಿಕವಾಗಿ ಸಸಿ ನೆಟ್ಟ ಜಿಲ್ಲಾಧಿಕಾರಿ ಜ್ಯೋತ್ಸ್ನಾ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 1:32 IST
Last Updated 6 ಜೂನ್ 2021, 1:32 IST
ಕಲಬುರ್ಗಿಯ ಎಸ್‌.ನಿಜಲಿಂಗಪ್ಪ ಡೆಂಟಲ್‌ ಕಾಲೇಜ್‌ನಲ್ಲಿ ಶನಿವಾರ ವಿಶ್ವ ಪರಿಸರದ ದಿನದ ಅಂಗವಾಗಿ ಸಸಿ ನೆಡಲಾಯಿತು
ಕಲಬುರ್ಗಿಯ ಎಸ್‌.ನಿಜಲಿಂಗಪ್ಪ ಡೆಂಟಲ್‌ ಕಾಲೇಜ್‌ನಲ್ಲಿ ಶನಿವಾರ ವಿಶ್ವ ಪರಿಸರದ ದಿನದ ಅಂಗವಾಗಿ ಸಸಿ ನೆಡಲಾಯಿತು   

ಕಲಬುರ್ಗಿ: ‘ಕೋವಿಡ್‌ನಿಂದ ಬಹಳಷ್ಟು ಮಂದಿಗೆ ಆಮ್ಲಜನಕದ ಕೊರತೆ ಉಂಟಾಯಿತು. ಎಲ್ಲರೂ ಸಾಕಷ್ಟು ಸಂಕಷ್ಟ ಅನುಭವಿಸಬೇಕಾಯಿತು. ಆಮ್ಲಜನಕ ನಮಗೆ ಎಷ್ಟು ಮುಖ್ಯ ಎನ್ನುವುದನ್ನು ಕೋವಿಡ್‌ ಕಲಿಸಿಕೊಟ್ಟಿದೆ. ಇನ್ನಾದರೂ ಪ್ರತಿಯೊಬ್ಬರೂ ಗಿಡ ಬೆಳೆಸುವಲ್ಲಿ ಆಸಕ್ತಿ ತೋರಬೇಕು’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಅರಣ್ಯ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಸಸಿ‌ ನೆಟ್ಟು ನೀರೆರೆದು ಅವರು ಮಾತನಾಡಿದರು.

‘ಭೂಮಿಯ ಮೇಲೆ ಇರುವ ಪ್ರತಿಯೊಂದು ಮರದಿಂದ ನಮಗೆ ಯಥೇಚ್ಚ ಆಮ್ಲಜನಕ ಸಿಗುತ್ತದೆ. ಇಡೀ ಜೀವ ಸಂಕುಲ ಪರಿಸರವೇ ಪೋಷಿಸುತ್ತಿದೆ. ಹೀಗಾಗಿ ಪರಿಸರ ಕಾಳಜಿಯು ದಿನಾಚರಣೆಗೆ ಸೀಮಿತವಾಗದೇ, ಪ್ರತಿಯೊಬ್ಬರು ಪ್ರತಿನಿತ್ಯ ಪರಿಸರ ಸಂರಕ್ಷಣೆಯ ಕಾಳಜಿ ವಹಿಸಬೇಕು’ ಎಂದರು.

ADVERTISEMENT

‘ಪ್ರತಿ ವರ್ಷ ನಾವು ವಿಶ್ವ ಪರಿಸರ ದಿನ ಆಚರಿಸುತ್ತಲೇ ಇದ್ದೇವೆ. ಆದರೆ, ಗಿಡಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ. ಸರ್ಕಾರ ಕಾರ್ಯಕ್ರಮ ಮಾತ್ರ ರೂಪಿಸುತ್ತದೆ. ಅದು ಸಂಪೂರ್ಣ ಯಶಸ್ವಿಯಾಗಬೇಕಾದರೆ ಜನರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಪ್ರತಿಯೊಬ್ಬರೂ ಪರಿಸರದೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡರೆ ಇದು ಸಾಧ್ಯವಾಗಲಿದೆ’ ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಡಾ.ಸಿಮಿ ಮರಿಯಮ್ ಜಾರ್ಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಬುರಾವ್ ಪಾಟೀಲ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೇವು, ಚಳ್ಳೆ, ಸಿಸು, ಗುಲ್ ಮೋಹರ್ ಸಸಿಗಳನ್ನು
ನೆಡಲಾಯಿತು.

ಗುಲಬರ್ಗಾ ವಿಶ್ವವಿದ್ಯಾಲಯ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ವಿಶ್ವ ಪರಿಸರ ದಿನವನ್ನು ಪರಿಸರ ವಿಜ್ಞಾನ ವಿಭಾಗದ ಹೊಸ ಕಟ್ಟಡದ ಮುಂದೆ ಸಸಿ ನೆಡುವ ಮೂಲಕ
ಆಚರಿಸಲಾಯಿತು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ, ಕುಲಸಚಿವ ಶರಣಬಸಪ್ಪ ಕೋಟ್ಯಪ್ಪಗೋಳ, ಮೌಲ್ಯಮಾಪನ ಕುಲಸಚಿವ ಪ್ರೊ.ಸೋನಾರ ನಂದಪ್ಪ, ವಿತ್ತಾಧಿಕಾರಿ ಪ್ರೊ.ಬಿ.ವಿಜಯ, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ ಕರಿಅಜ್ಜನವರ್, ಡಾ.ಎಂ.ಎಸ್. ಪಾಸೋಡಿ, ಪ್ರೊ.ಕೆ.ಎಸ್. ಮಾಲಿಪಾಟೀಲ, ಪ್ರೊ.ಎಚ್.ಟಿ. ಪೋತೆ, ಪ್ರೊ.ಡಿ.ಬಿ. ಪಾಟೀಲ, ಡಾ.ಎನ್.ಜಿ. ಕಣ್ಣೂರ, ಪ್ರೊ.ಚಂದ್ರಕಾಂತ ಯಾತನೂರ್, ವಿಶ್ವವಿದ್ಯಾಲಯದ ಸಿಬಂದಿ ಭಾಗವಹಿಸಿದ್ದರು.

‘ಹಸಿರು ಉಳಿದರೆ ಉಸಿರೂ ಉಳಿಯುತ್ತದೆ’

ಇಲ್ಲಿನ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್‌.ನಿಜಲಿಂಗಪ್ಪ ದಂತ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಶನಿವಾರ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಕಾಲೇಜಿನ ಸಂಯೋಜಕ ಡಾ. ಅನಿಲ ಪಟ್ಟಣ ಮಾತನಾಡಿ, ‘ಭೂಮಿಯ ಮೇಲಿನ ಹಸಿರು ಎಷ್ಟು ಮಹತ್ವ ಎಂಬ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸಬೇಕಿದೆ. ವರ್ಷದಿಂದ ವರ್ಷಕ್ಕೆ ನಮ್ಮ ಕಾಡು ನಾಶವಾಗುತ್ತಲೇ ಇದೆ. ಇದರಿಂದ ಭೂಮಿಯ ತಾಪಮಾನ ಹೆಚ್ಚುತ್ತಿದೆ. ಈ ತಾಪಮಾನದ ಪರಿಣಾಮ ಹಿಮವು ಹೆಚ್ಚಿನ ಪ್ರಮಾಣದಲ್ಲಿ ಕರಗುತ್ತಿದೆ. ಇದು ವಿಶ್ವಕ್ಕೆ ಮಾರಕವಾದದ್ದು. ಮುಂದಿನ ಪೀಳಿಗೆ ಅಪಾಯಕ್ಕೆ ಸಿಲುಕಲಿದೆ’ ಎಂದರು.

‘ಹಿಮನದಿ, ಚಂಡಮಾರುತ, ಭೂಕಂಪ ಮುಂತಾದ ಪ್ರಾಕೃತಿಕ ದುರಂತಗಳು ಭೂಮಿ ತಾಪಮಾನದ ವ್ಯತ್ಯಾಸದ ಕಾರಣಕ್ಕೇ ಆಗುತ್ತವೆ. ಒಂದೆಡೆಯಿಂದ ಅರಣ್ಯ ನಾಶ ಇನ್ನೊಂದಡೆಯಿಂದ ಹೆಚ್ಚುತ್ತಿರುವ ವಾಹನಗಳ ಬಳಕೆ; ಮಾನವನ ತಪ್ಪುಗಳಿಂದಲೇ ಇಂದು ಭೂಮಿ ಅಪಾಯಕ್ಕೆ ಸಿಲುಕಿದೆ’ ಎಂದು ಹೇಳಿದರು.

ಪ್ರಾಂಶುಪಾಲ ಡಾ.ಅರವಿಂದ ಮೋಲ್ಡಿ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ಕೈಲಾಶ್‌ ಪಾಟೀಲ ಮಾತನಾಡಿದರು. ವಿದ್ಯಾರ್ಥಿಗಳು ಕೂಡ ಸಸಿ ನೆಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.