ADVERTISEMENT

ಮಣ್ಣಿನ ಸಂರಕ್ಷಣೆ ಎಲ್ಲರ ಹೊಣೆ: ರಾಜು ತೆಗ್ಗೆಳ್ಳಿ

ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 17:21 IST
Last Updated 5 ಡಿಸೆಂಬರ್ 2018, 17:21 IST
ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ರೈತರೊಬ್ಬರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಯಿತು
ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ರೈತರೊಬ್ಬರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಯಿತು   

ಕಲಬುರ್ಗಿ: ‘ಭೂಮಿಯಲ್ಲಿ ಒಂದು ಇಂಚು ಮಣ್ಣು ತಯಾರಾಗಲು ಎಂಟು ನೂರರಿಂದ ಒಂದು ಸಾವಿರ ವರ್ಷಗಳು ಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮಣ್ಣಿನ ಸಂರಕ್ಷಣೆ ಮಾಡಬೇಕು’ ಎಂದು ಹಿರಿಯ ವಿಜ್ಞಾನಿ ಡಾ.ರಾಜು ತೆಗ್ಗೆಳ್ಳಿ ಹೇಳಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ ಹಾಗೂ ಮೈರಾಡ್ ಸಂಸ್ಥೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆ ಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಮಾತನಾಡಿ, ‘ಬೊಗಸೆ ಮಣ್ಣು ಕೋಟ್ಯಂತರ ಜೀವಿಗಳಿಂದ ಕೂಡಿದ ಹೊನ್ನು ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬ ರೈತರು ಮಣ್ಣನ್ನು ಸಂರಕ್ಷಿಸಲು ತಮ್ಮ ಹೊಲಗಳಲ್ಲಿ ಚೆಕ್-ಡ್ಯಾಮ್‌ಗಳನ್ನು ನಿರ್ಮಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿರಸಗಿ ಅವರು, ರೈತ ಮಹಿಳೆಯರು ಕೃಷಿ ಇಲಾಖೆಯ ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ‘ರೈತರು ರಾಸಾಯನಿಕ ಗೊಬ್ಬರಗಳ ಮೇಲೆ ಅವಲಂಬಿತರಾಗದೇ ಸಾವಯವ ಗೊಬ್ಬರಗಳನ್ನು ಬಳಸಿ ಕೃಷಿ, ತೋಟಗಾರಿಕೆ ಹಾಗೂ ಪಶು ಸಂಗೋಪನೆ ಕೈಗೊಳ್ಳಬೇಕು’ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ರತೀಂದ್ರನಾಥ ಸೂಗೂರು ಅವರು, ಕೃಷಿ ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳು ಹಾಗೂ ಮಣ್ಣು ಆರೋಗ್ಯ ಕಾರ್ಡ್‌ನ ಮಹತ್ವದ ಬಗ್ಗೆ ತಿಳಿಸಿದರು.

ಚಿಂಚೋಳಿ, ಹಾಗರಗಾ, ತೆಲ್ಲೂರು, ಮೇಳಕುಂದಾ (ಬಿ), ಮಹಾಗಾಂವ, ಶ್ರೀನಿವಾಸ ಸರಡಗಿ, ಹಡಗಿಲ ಹಾರುತಿ ಹಾಗೂ ಕಡಗಂಚಿ ಗ್ರಾಮಗಳ 150ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ 10 ರೈತರಿಗೆ ಸಾಂಕೇತಿಕವಾಗಿ ಮಣ್ಣಿನ ಆರೋಗ್ಯ ಕಾರ್ಡ್‌ ವಿತರಿಸಲಾಯಿತು.

ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಜೆ.ಆರ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಸಸ್ಯರೋಗ ತಜ್ಞ ಡಾ.ಜಹೀರ್ ಅಹಮದ್ ಸ್ವಾಗತಿಸಿದರು. ಪ್ರಾಣಿ ವಿಜ್ಞಾನಿ ಡಾ. ಮಂಜುನಾಥ ಪಾಟೀಲ ನಿರೂಪಿಸಿ, ವಂದಿಸಿದರು.

*
ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಮಣ್ಣಿನ ಪರೀಕ್ಷೆಯಿಂದ ಮಣ್ಣಿನ ಗುಣಧರ್ಮಗಳನ್ನು ತಿಳಿದುಕೊಳ್ಳಬಹುದು.
-ಡಾ. ಜೆ.ಆರ್.ಪಾಟೀಲ, ಸಹ ಸಂಶೋಧನಾ ನಿರ್ದೇಶಕ, ಕೆವಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.