ಕೃಷ್ಣಾ ನದಿ
ಯಾದಗಿರಿ: ಫೋಟೊ ತೆಗೆಯುವ ನೆಪದಲ್ಲಿ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ್ದ ಆರೋಪ ಹೊತ್ತಿರುವ ಪತ್ನಿ ಅಪ್ರಾಪ್ತೆ. ಆಕೆಯ ಪತಿ, ಸಂಬಂಧಪಟ್ಟವರ ವಿರುದ್ಧ ಬಾಲ್ಯವಿವಾಹ, ಪೋಕ್ಸೊ ಅಡಿ ಪ್ರಕರಣ ದಾಖಲಿಸಲು ರಾಯಚೂರು ಡಿಸಿಪಿಒಗೆ ಪತ್ರ ಬರೆಯಲಾಗಿದೆ.
ರಾಯಚೂರು ತಾಲ್ಲೂಕಿನ ಗುರ್ಜಾಪುರ ಸಮೀಪದ ಕೃಷ್ಣಾ ನದಿಯ ಬ್ರಿಜ್ ಕಂ ಬ್ಯಾರೇಜ್ ಮೇಲೆ ಫೋಟೊ ತೆಗೆಸಿಕೊಳ್ಳುವಾಗ ಘಟನೆ ನಡೆದಿತ್ತು. ಶಕ್ತಿನಗರದ ತಾತಪ್ಪನನ್ನು ಆತನ ಪತ್ನಿ (ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ನಿವಾಸಿ) ತಳ್ಳಿದ್ದಾರೆ ಎಂಬ ಆರೋಪವಿತ್ತು.
‘ಸಂಬಂಧಿಸಿದ ವಿಡಿಯೊ ಆಧರಿಸಿ ಸಂತ್ರಸ್ತೆಯ ಶಾಲಾ ದಾಖಲಾತಿ ಮಾಹಿತಿ ಕಲೆ ಹಾಕಿದಾಗ ಪತ್ನಿ ಅಪ್ರಾಪ್ತೆ ಎಂದು ಗೊತ್ತಾಗಿದೆ. 2025ರ ಏಪ್ರಿಲ್ 14ರಲ್ಲಿ ಶಕ್ತಿನಗರದ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು, ಆಗ ಆಕೆಗೆ 15 ವರ್ಷ 8 ತಿಂಗಳು’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (ಡಿಸಿಪಿಒ) ನಿರ್ಮಲಾ ಸುರಪುರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಾಲಕಿ ವಿವಾಹ ನಡೆದ ಸ್ಥಳವು ರಾಯಚೂರು ಜಿಲ್ಲಾ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ರಾಯಚೂರು ಡಿಸಿಪಿಒಗೆ ಪತ್ರ ಬರೆಯಲಾಗಿದೆ. ಭಾನುವಾರ ಬಾಲಮಂದಿರಕ್ಕೆ ಬಾಲಕಿ ಕರೆತರಲಾಗಿದೆ. 21ರಂದು ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರುಪಡಿಸಿ ಕೌನ್ಸಿಲಿಂಗ್ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.