ADVERTISEMENT

ಲೋಕ ಕಲ್ಯಾಣಕ್ಕಾಗಿ ಯಜ್ಞ: ವಿಜ್ಞಾನ್ ದೇವಜಿ ಮಹಾರಾಜ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 6:05 IST
Last Updated 14 ಜುಲೈ 2024, 6:05 IST
ಸತ್ಸಂಗದಲ್ಲಿ ವಿಜ್ಞಾನ್ ದೇವಜಿ ಮಹಾರಾಜ ಮಾತನಾಡಿದರು
ಸತ್ಸಂಗದಲ್ಲಿ ವಿಜ್ಞಾನ್ ದೇವಜಿ ಮಹಾರಾಜ ಮಾತನಾಡಿದರು   

ಕಲಬುರಗಿ: ‘ನಮ್ಮ ಋಷಿ, ಮುನಿಗಳು ಲೋಕ ಕಲ್ಯಾಣಕ್ಕಾಗಿ ಯಜ್ಞ–ಯಾಗಾದಿಗಳನ್ನು ಕೊಟ್ಟಿದ್ದಾರೆ’ ಎಂದು ಉತ್ತರ ಪ್ರದೇಶದ ವಿಜ್ಞಾನ್ ದೇವಜಿ ಮಹಾರಾಜ ಹೇಳಿದರು.

ನಗರದ ಮಾಯಿ ಮಂದಿರದಲ್ಲಿ ಶನಿವಾರ ಮಾರವಾಡಿ ಸಮಾಜ ಮತ್ತು ಮಹೇಶ್ವರಿ ಪ್ರಗತಿ ಮಂಡಳದ ವತಿಯಿಂದ ಆಯೋಜಿಸಿದ್ದ ವಿಹಂಗಮ ಯೋಗದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವೆಲ್ಲರೂ ಋಷಿ– ಮುನಿಗಳ ಮಕ್ಕಳು. ಯಜ್ಞ ಸಂಸ್ಕೃತಿ ನಮ್ಮೆಲ್ಲರ ಪ್ರಾಣವಾಗಿದೆ. ಭಾರತ ದೇಶ ಋಷಿಗಳಿಂದ ಕೂಡಿದ್ದ ಪ್ರಧಾನ ರಾಷ್ಟ್ರವಾಗಿದ್ದು, ನಮ್ಮ ಋಷಿಗಳು ನಮ್ಮೆಲ್ಲರ ಕಲ್ಯಾಣಕ್ಕಾಗಿ ಯಜ್ಞಾ–ಯಾಗದಿಗಳನ್ನು ಬಿಟ್ಟು ಹೋಗಿದ್ದಾರೆ. ದುಃಖಕ್ಕೆ ಇನ್ನಷ್ಟು ದುಃಖ ಕೊಡುವುದಾಗಲಿ, ಪೀಡಿತರಿಗೆ ಇನ್ನಷ್ಟು ಪೀಡೆ ನೀಡುವುದಾಗಲಿ ಅಲ್ಲ. ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಮನೋಭಾವ ಸಿದ್ಧಿ, ಸರ್ವರ ಕಲ್ಯಾಣ ಮಾಡುವುದೇ ಯಜ್ಞದ ಮಹಾ ಉದ್ದೇಶವಾಗಿದೆ’ ಎಂದರು.

ADVERTISEMENT

‘ಮಂತ್ರ ಪಠಿಸಿದವರು ಋಷಿಗಳಾಗುತ್ತಾರೆ. ಮಂತ್ರಗಳ ಉಚ್ಚಾರಣೆಯ ಶಬ್ದದ ಲಹರಿ ಮಾಧ್ಯಮವಾಗಿ ಸೂಕ್ಷ್ಮ ತರಂಗದ ವಾತಾವರಣದಲ್ಲಿ ಸ್ಪಂದನೆಯಾಗಿ ಮನ– ಮಸ್ತಿಷ್ಕದಲ್ಲಿ ಸಕಾರಾತ್ಮಕ ಮತ್ತು ರಚನಾತ್ಮಕ ವಿಚಾರಗಳು ಮೂಡಿಸುತ್ತದೆ’ ಎಂದು ಹೇಳಿದರು.

‘ಸೂರ್ಯ, ಚಂದ್ರ, ನಕ್ಷತ್ರಗಳು ದೇವರ ಸೃಷ್ಟಿಯ ಅನಂತ ಶಕ್ತಿಯಾಗಿ ಅಹರ್ನಿಶಿಯಾಗಿ ದುಡಿಯುತ್ತಿದ್ದು, ದೇವರ ಅನಂತ ಶಕ್ತಿ ನಮ್ಮೆಲ್ಲರಿಗೂ ನಿರಂತರ ಕರ್ಮಶೀಲವಾಗಿದೆ. ಅನಂತ ಶಕ್ತಿಯನ್ನು ನಮಗಾಗಿ ಧಾರೆ ಎರೆದ ದೇವರಿಗೆ ಕೃತಜ್ಞತೆ ಸಲ್ಲಿಸದೆ ಇದ್ದರೆ ಹೇಗೆ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕು’ ಎಂದರು.

‘ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದರೆ ಈ ದೇಹ ನಮ್ಮದಲ್ಲ. ತಾಯಿಯ ಗರ್ಭದಿಂದ ಹೊತ್ತುಕೊಂಡು ಬಂದ ಶರೀರವನ್ನು, ಆತ್ಮ ಇಲ್ಲಿಯೇ ಬಿಟ್ಟು ಹೋಗುತ್ತದೆ. ಆಧ್ಯಾತ್ಮಿಕ ಬದುಕಿನಲ್ಲಿ ನಾವು ಯಾರು ಎಂಬುದನ್ನು ಅರ್ಥೈಸಿಕೊಳ್ಳಬೇಕು. ನಾನು ಯಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೊರಟ್ಟಿದ್ದೇನೆ? ಏನು ಮಾಡುತ್ತಿದ್ದೇನೆ? ನನ್ನ ಗಮ್ಯ ಎಲ್ಲಿದೆ...? ಎಂಬೆಲ್ಲ ವಿಚಾರಗಳ ಚಿಂತನೆ ಮಾಡಿದಾಗ ಬದುಕಿನ ಅನುಭವವಾಗುತ್ತದೆ’ ಎಂದು ವಿವರಿಸಿದರು.

‘ಸಮಯದ ಚಕ್ರದಲ್ಲಿ ಬದುಕಿನ ಕುದುರೆ ವೇಗವಾಗಿ ಸಾಗುತ್ತದೆ. ನಿತ್ಯದ ಹಗಲು– ರಾತ್ರಿಗಳ ನಡುವೆ ವಯಸ್ಸು ಕಳೆದು ಹೋಗುತ್ತದೆ. ಸುಖ, ದುಃಖ, ನಾನು, ನೀನು, ಅವನು, ಇವನು... ಎಂದೆಲ್ಲ ಜೀವನ ಸಾಗುತ್ತಿರುತ್ತದೆ. ಆದರೆ, ಜ್ಞಾನ ಪ್ರಾಪ್ತಿಗೆ ಸಮಯವೇ ಸಿಗುವುದಿಲ್ಲ. ನಿತ್ಯದ ಜಂಜಾಟದಲ್ಲಿ ಜ್ಞಾನಕ್ಕೂ ಸಮಯ ಮೀಸಲಿಡಬೇಕು’ ಎಂದು ಸಲಹೆ ನೀಡಿದರು.

ಮಾರವಾಡಿ ಸಮಾಜದ ಅಧ್ಯಕ್ಷ ಲಕ್ಷ್ಮಿರಮನ್ ಮುಂದಡಾ, ಮಹೇಶ್ವರಿ ಪ್ರಗತಿ ಮಂಡಳದ ಅಧ್ಯಕ್ಷ ವಿಷ್ಣುದಾಸ ತಾಪಡಿಯಾ, ಪ್ರಮುಖರಾದ ನಾಗಿಂದ್ರಪ್ಪ ದಂಡೋತಿಕರ್, ವೆಂಕಟೇಶ ಗಿಲ್ದಾ, ಸುಶೀಲ್ ಕವಾಲ್ದಾರ್, ಗುರುಪಾದಪ್ಪ ಹಾರಕೂಡೆ, ಶಾಮಸುಂದರ, ಉತ್ತಮ್‌ ಬಜಾಜ್‌ ಉಪಸ್ಥಿತರಿದ್ದರು.

ಕಲಬುರಗಿಯ ಮಾಯಿ ಮಂದಿರದಲ್ಲಿ ಶನಿವಾರ ನಡೆದ ವಿಹಂಗಮ ಯೋಗದ ಸತ್ಸಂಗದಲ್ಲಿ ಪಾಲ್ಗೊಂಡಿದ್ದ ಜನರು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.