ADVERTISEMENT

ಅಗ್ನಿಶಾಮಕ ಠಾಣೆಗೆ ಸಿಬ್ಬಂದಿ ಕೊರತೆ

​ಪ್ರಜಾವಾಣಿ ವಾರ್ತೆ
Published 12 ಮೇ 2015, 11:00 IST
Last Updated 12 ಮೇ 2015, 11:00 IST

ಕುಶಾಲನಗರ : ಪಟ್ಟಣ ಹಾಗೂ ಸುತ್ತ ಮುತ್ತ ಜಿಲ್ಲೆಯ ಮತ್ತು ರಾಜ್ಯದ ಹಲವು ಪ್ರಥಮಗಳಿಗೆ ಸಾಕಷ್ಟು ಉದಾಹರಣೆ ಗಳಿವೆ. ಅವುಗಳ ಪೈಕಿ ಸಮೀಪದ ಸುಂದರನಗರದಲ್ಲಿ ಇರುವ ಅಗ್ನಿ ಶಾಮಕ ಠಾಣೆ ಕೂಡ ಒಂದು. ಆದರೆ ಇಲ್ಲಿ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಎದು ರಿಸುವಂತೆ ಆಗಿರುವುದು ವಿಪರ್ಯಾಸ.

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಅಂದರೆ 1984 ರಲ್ಲಿ ಠಾಣೆ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಬಳಿಕ ಕಟ್ಟಡ ಕಾಮಗಾರಿ ಮುಗಿದು 1989 ರಲ್ಲಿ ಕಾರ್ಯಾರಂಭವಾಯಿತು.

ಕುಶಾಲನಗರ ಹೋಬಳಿ ಬಹುತೇಕ ಪ್ರದೇಶ ಬಯಲು ಸೀಮೆಯಂತಿದೆ. ಅಲ್ಲದೆ ಬೇಸಿಗೆ ಬಂತೆಂದರೆ ಅರಣ್ಯ ಪ್ರದೇಶದಲ್ಲಿ ಅಗ್ನಿ ದುರಂತಗಳು ಸಂಭಿಸುವುದು ಹೆಚ್ಚಾಗಿ ಕಂಡು ಬರು ತ್ತವೆ. ಇಂಥ ಸಂದರ್ಭಗಳಲ್ಲಿ ಅಗ್ನಿಶಾಮಕ ದಳಕ್ಕೆ ಸಿಬ್ಬಂದಿ ಕೊರತೆ ಹೇಳತೀರದು.

ಮತ್ತೊಂದು ಸಮಸ್ಯೆ ಎಂದರೆ ಕಚೇರಿಯ ಸ್ಥಿರ ದೂರವಾಣಿ ವಾರದಲ್ಲಿ ಎರಡು ಬಾರಿ ಕೆಟ್ಟುಹೋಗಿರುತ್ತದೆ. ಸಂಬಂಧಿಸಿದ ಇಲಾಖೆಯವರು ದುರಸ್ತಿ ಮಾಡಿ ಹೋಗುತ್ತಿರುತ್ತಾರೆ. ಆದರೂ ಯಾವುದೇ ಪ್ರಯೋಜವಾಗಿಲ್ಲ ಎನ್ನುತ್ತಾರೆ ಸಿಬ್ಬಂದಿ ಲತೇಶ್‌ಕುಮಾರ್.

ಎರಡು ವಾಟರ್‌ ಟೆಂಡರ್‌ಗಳಿದ್ದು ಒಂದು ಅಂಬುಲೆನ್ಸ್‌ ಇದೆ. ಆದರೆ ಎಲ್ಲೆಡೆ 108 ಅಂಬುಲೆನ್ಸ್‌ ಸೇವೆ ಆರಂಭ ಆಗಿರುವುದರಿಂದ ಈ ಅಬುಲೆನ್ಸ್‌ನ್ನು ಹಾಗೇ ನಿಲ್ಲಿಸಲಾಗಿದೆ ಎನ್ನುತ್ತಾರೆ ಇಲ್ಲಿನ ಸಹಾಯಕ ಠಾಣಾಧಿಕಾರಿ ಬಿ.ಲೋಕೇಶ್‌. ಅದರಲ್ಲೂ ಎರಡೆರಡು ಅಗ್ನಿ ಅವಘಡಗಳು ಏನಾದರೂ ಸಂಭವಿಸಿ ದಲ್ಲಿ ಸಿಬ್ಬಂದಿ ತೊಂದರೆ ಕಟ್ಟಿಟ್ಟ ಬುಟ್ಟಿ.
ನಾಲ್ಕುವರೆ ಎಕರೆ ಜಾಗದಲ್ಲಿ ಅಗ್ನಿ ಶಾಮಕ ಠಾಣೆ ಇದೆ. ಸಿಬ್ಬಂದಿಗಳಿಗೆ, ಠಾಣಾ ಅಧಿಕಾರಿಗಳಿಗೆ ಬೇಕಾದ ವಸತಿ ಗೃಹಗಳು ಸಾಕಷ್ಟು ಪ್ರಮಾಣದಲ್ಲಿವೆ.

2015 ರ ಜನವರಿಯಿಂದ ಇದುವರೆಗೆ ಅಂದರೆ ನಾಲ್ಕು ತಿಂಗಳ ಅವಧಿಯಲ್ಲಿ ಈ ವ್ಯಾಪ್ತಿಯಲ್ಲಿ 37 ಅಗ್ನಿ ಅವಘಡಗಳು ಸಂಭವಿಸಿವೆ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಈಚೆಗೆ ಅಡುಗೆ ಅನಿಲದ ಬೆಂಕಿ ಅವಘಡಗಳೆ ಹೆಚ್ಚು ಸಂಭವಿಸಿವೆ ಎನ್ನುತ್ತಾರೆ ಲೋಕೇಶ್‌ ಅವರು.

ಇದನ್ನು ಗಮನಿಸಿದರೆ ಸಿಬ್ಬಂದಿಗಳ ಅಗತ್ಯ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಇದೊಂದೆ ಠಾಣೆಗೆ 39 ಸಿಬ್ಬಂದಿಗಳ ಅಗತ್ಯವಿದ್ದು ಇದೀಗ ಕೇವಲ 13 ಸಿಬ್ಬಂದಿ ಯಷ್ಟೇ ಇದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯ ಪ್ರಥಮ ಅಗ್ನಿ ಶಾಮಕ ಠಾಣೆಯಾಗಿರುವ ಇಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳು ಕೂಡಲೇ ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.