ADVERTISEMENT

ಅತಿವೃಷ್ಟಿಯಿಂದ ಕಾಫಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 9:00 IST
Last Updated 20 ಆಗಸ್ಟ್ 2012, 9:00 IST

ಶ್ರೀಮಂಗಲ: ದಕ್ಷಿಣ ಕೊಡಗಿನಲ್ಲಿ ಅತಿಯಾದ ಮಳೆಯಿಂದ ಕಾಫಿ ಬೆಳೆ ನಷ್ಟವಾಗಿರುವ ತೋಟಗಳಿಗೆ ಚೆಟ್ಟಳ್ಳಿ ಕಾಫಿ ಸಂಶೋಧನಾ ಮಂಡಳಿಯ ಅಧಿಕಾರಿಗಳು, ವಿರಾಜಪೇಟೆ ತಾಲ್ಲೂಕು ಕಾಫಿ ಮಂಡಳಿಯ ಉಪ ನಿರ್ದೇಶಕರು ಹಾಗೂ ಗೋಣಿಕೊಪ್ಪಲು ಕಾಫಿ ಮಂಡಳಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ತೋಟ ಪರಿಶೀಲನೆಯ ನಂತರ ಮಾತನಾಡಿದ ಅಧಿಕಾರಿಗಳು, ಅತಿವೃಷ್ಟಿಯಿಂದ ಕಾಫಿ ಹಾನಿಯಾಗಿರುವುದು ಗೋಚರಿಸುತ್ತದೆ.  ಶಿಲೀಂದ್ರ ರೋಗದಿಂದ ಹಾಗೂ ನಿರಂತರ ಮಳೆಯಿಂದ ಕಾಫಿ ಗಿಡಗಳು ಆಹಾರ ಹೀರಿಕೊಳ್ಳಲು ಸಾಧ್ಯವಾಗದಿರುವುದು ಇದಕ್ಕೆ ಕಾರಣ ಎಂದರು.

ತಕ್ಷಣಕ್ಕೆ ಇದನ್ನು ನಿಯಂತ್ರಿಸಲು ಯಾವುದೇ ಮಾರ್ಗೋಪಾಯಗಳಿಲ್ಲ.  ಮುಂಗಾರು ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈಗ ಕೊಳೆರೋಗಕ್ಕೆ ತುತ್ತಾದ ಭಾಗಗಳನ್ನು ತೆಗೆದು ಮಣ್ಣಿನಲ್ಲಿ ಹೂಳಬೇಕು ಅಥವಾ ಸುಡಬೇಕು. ಉಳಿದ ಗಿಡಗಳಿಗೆ ಶೇ 2ರಷ್ಟು ಕಾರ್ಬೊಡೈಂಜಿಂ ಸಿಂಪಡಣೆ ಮಾಡಬಹುದು. ಇದರಿಂದ ಮುಂದಿನ ವರ್ಷದ ಫಸಲನ್ನು ಉಳಿಸಿ ಕೊಳ್ಳಬಹುದು ಎಂದರು.

ಕಾಫಿ ಬೆಳೆಗಾರರಾದ ಮಲ್ಲೆೀಂಗಡ ಮುತ್ತಪ್ಪ, ಬಲ್ಯಮೀದೇರಿರ ಮೋಹನ್, ಬೊಟ್ಟಂಗಡ ಗಿರೀಶ್, ಕಟ್ಟೇರ ಈಶ್ವರ ಇತರರು ಅಧಿಕಾರಿಗಳಿಗೆ ತಮ್ಮ ಕಾಫಿ ತೋಟಗಳನ್ನು ತೋರಿಸಿದರು.

ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಟ್ಟಿ ಮಂದಯ್ಯ, ತಾಲ್ಲೂಕು ಅಧ್ಯಕ್ಷ ಶಂಕರು ನಾಚಪ್ಪ, ಖಜಾಂಚಿ ವಿಜಯ ನಂಜಪ್ಪ, ಮೊದಲಾದ ಗಣ್ಯರು ಪರಿಶೀಲನಾ ತಂಡದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿ ಅತಿವೃಷ್ಟಿಯಿಂದ ಕಾಫಿ ಬೆಳೆಗಾರರಿಗೆ ಆಗಿರುವ ನಷ್ಟವನ್ನು ಪರಿಹರಿಸಲು ಈ ಭಾಗಕ್ಕೆ ವಿಶೇಷ ಪ್ಯಾಕೇಜನ್ನು ಪ್ರಕಟಿಸಲು ಕಾಫಿ ಮಂಡಳಿ ಮುಂದಾಗಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.