ADVERTISEMENT

ಅನುದಾನ ದುರುಪಯೋಗ:ಕ್ರಮಕ್ಕೆ ದ.ಸಂ.ಸ. ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 8:02 IST
Last Updated 21 ಡಿಸೆಂಬರ್ 2012, 8:02 IST

ವಿರಾಜಪೇಟೆ: ತಾಲ್ಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿಯಲ್ಲಿ ದಲಿತರು, ಹಿಂದುಳಿದ ವರ್ಗದವರಿಗೆ ಸೇರಿದ ಮೀಸಲು ನಿಧಿಯ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬೆಳ್ಳೂರು ಎಚ್.ಎಸ್. ಕೃಷ್ಣಪ್ಪ ದೂರಿದ್ದಾರೆ.

ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದ ಎಚ್.ಕೆ. ಗಣೇಶ್ ಎಂಬುವರು ಈ ಹಿಂದೆಯೇ ಮೃತಪಟ್ಟಿದ್ದಾರೆ. ಇವರ ಹೆಸರಿನಲ್ಲಿ ವಾದ್ಯ ಗೋಷ್ಠಿಯ ಪರಿಕರಗಳನ್ನು ವಿತರಿಸಿರುವುದಾಗಿ ಪಂಚಾಯಿತಿಯಿಂದ ರೂ 11,950 ಬಿಲ್ ಹಾಕಲಾಗಿದೆ.

ಬೆಳ್ಳೂರು ಗ್ರಾಮದಲ್ಲಿ ಗಿರಿಜನ ಕಾಲೊನಿ ಇಲ್ಲದಿದ್ದರೂ ಇದರ ರಸ್ತೆ ದುರಸ್ತಿಗಾಗಿ ರೂ. 13,650 ಬಿಡುಗಡೆ ಮಾಡಲಾಗಿದೆ. ಬೇಗೂರು ಗ್ರಾಮದ ಪಣಿರವರ ಕೊಳಂಬ ಎಂಬುವರಿಗೆ ಎರಡು ಬಾರಿ ಮನೆ ದುರಸ್ತಿ ಹಾಗೂ ನೂತನ ಶೌಚಾಲಯ ನಿರ್ಮಾಣಕ್ಕೆ ಹಣ ನೀಡಿರುವುದಾಗಿ ರೂ. 41,357ರ ನಕಲಿ ಬಿಲ್ ಹಾಕಲಾಗಿದೆ.

ಈ ಎಲ್ಲ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ನೇರವಾಗಿ ಪಂಚಾಯಿತಿ ಅಭಿವೃದ್ಧಿ ಯೋಜನಾಧಿಕಾರಿ ಶಾಮೀಲಾಗಿದ್ದಾರೆ. ಇದರಲ್ಲಿ ಆಡಳಿತ ಮಂಡಳಿಯ ಕೈವಾಡವು ಇರುವುದಾಗಿ ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಅವರು ಆರೋಪಿಸಿದರು.

ಸಂಘಟನೆಯ ಜಿಲ್ಲಾ ಸಂಘಟಕ ಎಚ್.ಆರ್. ರಮೇಶ್ ಮಾತನಾಡಿ, ಹುದಿಕೇರಿ ಗ್ರಾಮ ಪಂಚಾಯಿತಿಯಲ್ಲಿ ದಲಿತರು, ಹಿಂದುಳಿದ ವರ್ಗದವರಿಗಾಗಿ ಮೀಸಲಿಟ್ಟ ನಿಧಿ ನಿರಂತರವಾಗಿ ದುರುಪಯೋಗಗೊಳ್ಳುತ್ತಿದೆ. ಗ್ರಾಮ ಪಂಚಾಯಿತಿ ಸುಮಾರು ಐದು ಗ್ರಾಮಗಳನ್ನು ಒಳಗೊಂಡಿದೆ. ಈ ವ್ಯಾಪ್ತಿಯಲ್ಲಿರುವ ಯಾವುದೇ ದಲಿತ ಕುಟುಂಬಗಳ ಅರ್ಹ ಫಲಾನುಭವಿಗಳಿಗೆ ಯಾವುದೇ ಸೌಲಭ್ಯ ಈ ತನಕ ದೊರೆತಿಲ್ಲ.

ADVERTISEMENT

ಆದರೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಲ್ ಡ್ರಾ ಮಾಡಿರುವ ಕುರಿತು ದಾಖಲೆಗಳನ್ನು ತೋರಿಸಿದರು.ಸಂಘಟನೆಯ ತಾಲ್ಲೂಕು ಸಂಚಾಲಕ ಎಚ್.ಆರ್. ಶಿವಣ್ಣ ಮಾತನಾಡಿ, ಗ್ರಾಮ ಪಂಚಾಯಿತಿಯ ವ್ಯವಹಾರ ಹಾಗೂ ಕಾರ್ಯವೈಖರಿ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ಈ ಗ್ರಾಮ ಪಂಚಾಯಿತಿ ಮೇಲೆ ಹಣ ದುರುಪಯೋಗ, ಭ್ರಷ್ಟಾಚಾರದ ಆರೋಪಗಳಿವೆ ಎಂದರು.

ಅವ್ಯವಹಾರಗಳ ಆಗರವಾಗಿರುವ ಹುದಿಕೇರಿ ಗ್ರಾಮ ಪಂಚಾಯಿತಿಗೆ ಡಿ. 24ರಂದು ಬೀಗ ಜಡಿಯಲಾಗುವುದು ಎಂದು ಕೃಷ್ಣಪ್ಪ ತಿಳಿಸಿದರು.ಸಮಿತಿಯ ತಾಲ್ಲೂಕು ಕಾರ್ಮಿಕರ ಸಂಘಟನೆಯ ಸಂಚಾಲಕ ಎಚ್.ಎನ್. ಕೃಷ್ಣ, ಎಚ್.ಆರ್. ಮುತ್ತಯ್ಯ ಎಚ್.ಸಿ. ಮರಿಯಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.