ADVERTISEMENT

ಅಪಾಯದ ನೆರಳಲ್ಲೇ 200 ಮಕ್ಕಳ ಪಾಠ!

ಮುರುಕು ಜಂತಿ, ಹರುಕು ತೊಲೆ, ಸೋರುವ ಮಾಳಿಗೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 6:28 IST
Last Updated 15 ಜೂನ್ 2013, 6:28 IST
ಶನಿವಾರಸಂತೆ ಸಮೀಪದ ಕೊಡ್ಲಿಪೇಟೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುರುಕು ಕೊಠಡಿಯಲ್ಲಿ ಪುಟಾಣಿಗಳ ಪಾಠ.
ಶನಿವಾರಸಂತೆ ಸಮೀಪದ ಕೊಡ್ಲಿಪೇಟೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುರುಕು ಕೊಠಡಿಯಲ್ಲಿ ಪುಟಾಣಿಗಳ ಪಾಠ.   

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಯಲ್ಲಿರುವ, ಇತಿಹಾಸ ಪ್ರಸಿದ್ಧ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಯಾವ ಸಂದರ್ಭದಲ್ಲಿ ಕುಸಿದುಬೀಳುವುದೋ ಹೇಳಲಾಗದು. ಇದರಿಂದಾಗಿ ಇಲ್ಲಿನ ಪುಟ್ಟ ಮಕ್ಕಳೆಲ್ಲ ಜೀವ ಭಯದಲ್ಲೇ ಪಾಠ ಕಲಿಯುವಂತಾಗಿದೆ.

1870ರಲ್ಲಿ ಅಯ್ಯಗಳ ಮಠ ಎಂಬುದಾಗಿ 3 ಕೊಠಡಿಗಳಲ್ಲಿ ಸಾರ್ವಜನಿಕರಿಂದ ನಡೆಸಲ್ಪಡುತ್ತಿದ್ದ ಶಾಲೆ ಇದು. ಈಗ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಾಗಿದೆ. 1890ರಲ್ಲಿ ಈ ಶಾಲೆ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಎಂದು ನಾಮಕರಣಗೊಂಡು ಮೊದಲು ಐದನೇ ತರಗತಿವರೆಗೆ ಆರಂಭವಾಯಿತು. ಪ್ರಸ್ತುತ ಈ ಶಾಲೆಯ ಮೂರು ಕೊಠಡಿಗಳಲ್ಲಿ ಹೆಚ್ಚುವರಿಯಾಗಿ ಮೊರಾರ್ಜಿ ಶಾಲೆಯ 6-7-8 ನೇ ತರಗತಿಗಳು ನಡೆಯುತ್ತಿವೆ. ಒಟ್ಟು 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮತ್ತೊಂದು ಕೊಠಡಿಯಲ್ಲಿ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

1870ರಲ್ಲಿ ಕಟ್ಟಿದ ಈ ಕಟ್ಟಡ ಪೂರ್ಣವಾಗಿ ಶಿಥಿಲಗೊಂಡಿದೆ. ಗೋಡೆಗಳು ಬಿರುಕು ಬಿಟ್ಟಿವೆ. ರೀಪೀಸ್ ಪಟ್ಟಿಗಳು ಗೆದ್ದಲು ಹಿಡಿದಿವೆ. ಹೆಂಚುಗಳು ಒಡೆದುಹೋಗಿವೆ. ಛಾವಣಿ ಕುಸಿಯದಂತೆ ಮರದ ಪಟ್ಟಿಗಳನ್ನು ಸಿಕ್ಕಿಸಲಾಗಿದೆ.

ಇಂಥ ಕೊಠಡಿಯಲ್ಲೇ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದು ಕುಳಿತು ಪಾಠ ಕೇಳುತ್ತಿದ್ದಾರೆ. ಶಾಲೆಯ ದುಃಸ್ಥಿತಿಯ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಶಾಲೆಯ ಮುಖ್ಯಸ್ಥರು ಅಳಲು ತೋಡಿಕೊಂಡರು.

ದುರಂತ ನಡೆಯುವ ಮುನ್ನ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಈಗ ಮಳೆ, ಗಾಳಿಯ ಆರ್ಭಟ ಹೆಚ್ಚಾಗಿದ್ದು, ಪುಟ್ಟ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂಬುದು ತಾಲ್ಲೂಕು ಪಂಚಾಯಿತಿ ಸದಸ್ಯ ಜೆ.ಆರ್. ಫಾಲಾಕ್ಷ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಾಂತರಾಜ್ ಅವರ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.