ADVERTISEMENT

ಅಭಿವೃದ್ಧಿ ಕಾರ್ಯ ನೋಡಿ ಮತ ಹಾಕಿ: ಬೋಪಯ್ಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 8:44 IST
Last Updated 9 ಏಪ್ರಿಲ್ 2013, 8:44 IST

ನಾಪೋಕ್ಲು: `ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಪುನಃ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನನ್ನನ್ನು ಮತದಾರರ ಬೆಂಬಲಿಸಬೇಕು' ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತದ ಅಭ್ಯರ್ಥಿ ಕೆ.ಜಿ. ಬೋಪಯ್ಯ ಕೋರಿದರು.

ನಾಪೋಕ್ಲುವಿನಲ್ಲಿ ಸೋಮವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತಮ್ಮ ಆಡಳಿತಾವಧಿಯಲ್ಲಿ ರಸ್ತೆ, ಮನೆ ಸೇರಿದಂತೆ ಜನರಿಗೆ ಅಗತ್ಯವಾದ ಮೂಲ ಸೌಲಭ್ಯವನ್ನು ಸಾಧ್ಯವಾದಷ್ಟು ಮಟ್ಟಿಗೆ ಜಾತಿ ಧರ್ಮ ಬೇಧವಿಲ್ಲದೆ ಎಲ್ಲರಿಗೂ ಸಮಾನವಾದ ರೀತಿಯಲ್ಲಿ ನೀಡಲು ಯತ್ನಿಸಿದ್ದೇನೆ ಎಂದು ಹೇಳಿದರು.

ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿಯೇ ಸರ್ಕಾರ ರಚಿಸಲಿದ್ದು, ಕೊಡಗಿನ ಹಿತರಕ್ಷಣೆಗಾಗಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಅಪ್ಪಚ್ಚು ರಂಜನ್ ಮತ್ತು ನನ್ನನ್ನು ಮತದಾರರು ಬೆಂಬಲಿಸಬೇಕೆಂದು ಅವರು ಮತದಾರರ ಬಳಿ ಮತ ಯಾಚಿಸಿದರು.

ಏ.15ರಂದು ವಿರಾಜಪೇಟೆ ಕ್ಷೇತ್ರದ ಚುನಾವಣಾಧಿಕಾರಿಗೆ ನಾಮ ಪತ್ರ ಸಲ್ಲಿಸಲಿದ್ದೇನೆ, ಹೆಚ್ಚಿನ ಕಾರ್ಯಕರ್ತರು ಭಾಗವಹಿಸಬೇಕೆಂದು  ಅವರು ಕೋರಿದರು.

ವಿರಾಜಪೇಟೆ ಕ್ಷೇತ್ರದ ಬಿಜೆಪಿ ವಕ್ತಾರ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ, ಚುನಾವಣಾ ಪ್ರಚಾರ ಮಾಡದಿದ್ದರೂ ಬೋಪಯ್ಯ ಗೆಲ್ಲುತ್ತಾರೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಕಳೆದ ಚುನಾವಣೆಗಿಂತ ಈ ಬಾರಿ ಅತಿ ಹೆಚ್ಚು ಮತಗಳನ್ನು ಪಡೆಯುವು ದರೊಂದಿಗೆ ಗೆಲುವು ಸಾಧಿಸಲಿದ್ದಾರೆ ಎಂದರು.

ಪರಿಸರವಾದಿಗಳೂ ಸೇರಿದಂತೆ ಇತರೆ ಪಕ್ಷದ ದಿಗ್ಗಜರು ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿದ್ದುದರ ನಡುವೆಯೂ ಹಲವು ಅಭಿವೃದ್ಧಿ ಕಾಮಗಾರಿ ಮಾಡಿರುವ ಬೋಪಯ್ಯ ಅವರು `ವಿರಾಜಪೇಟೆಯ ನರೇಂದ್ರ ಮೋದಿ' ಎಂದು ಬಣ್ಣಿಸಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಚುನಾವಣೆ ಸಮೀಪಿಸುತ್ತಿರುವಾಗ ಮಾತ್ರ ಜಾತಿ ಹೆಸರು ಕೇಳಿ ಬರುತ್ತಿದೆ. ಆದರೆ ಯಾರು ಏನೇ ಮಾಡಿದರೂ ಕೂಡ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳೇ ಜಯ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ರಾಜಾರಾವ್ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲಾ ಧರ್ಮದವರಿಗು ಕೂಡ ಹಲವು ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಒದಗಿಸುತ್ತೇವೆ. ಕಾಂಗ್ರೆಸ್ಸಿಗರಂತೆ ಜನರಿಗೆ ಮೋಸ ಮಾಡಿಲ್ಲ ಎಂದು ಹೇಳಿದರು.
ಪಕ್ಷದ ಜಿಲ್ಲಾ ವಕ್ತಾರ ಮನು ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷದ ಜನಪ್ರತಿನಿಧಿಗಳು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೀನಾ ಜಗನ್ನಾಥ್, ಉಪಾಧ್ಯಕ್ಷೆ ಯಲದಾಳು ಪದ್ಮಾವತಿ, ಪ್ರಮುಖರಾದ ರಮೇಶ್ ಚಂಗಪ್ಪ, ರಮೇಶ್ ಮುದ್ದಯ್ಯ, ತಳೂರು ಕಿಶೋರ್ ಕುಮಾರ್ ಮತ್ತಿತರ ಪ್ರಮುಖರು ಹಾಜರಿದ್ದರು.

ಕಾರ್ಯಕ್ರಮಕ್ಕೆ ಸಿಗದ ಅನುಮತಿ- ಗೊಂದಲ
ನಾಪೋಕ್ಲು ಪಟ್ಟಣದೆಲ್ಲೆಡೆ ಜಾಥಾ ಮುಗಿಸಿ ವೇದಿಕೆ ಬಳಿ ಆಗಮಿಸಿದ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ಪೊಲೀಸರು, `ಸಭಾ ಕಾರ್ಯಕ್ರಮಕ್ಕೆ ಚುನಾವಣಾ ಧಿಕಾರಿಗಳು ಅನುಮತಿ ನೀಡಿಲ್ಲ' ಎಂಬ ಮಾಹಿತಿ ನೀಡಿದರು.

ಪಕ್ಷದ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಈ ಮೊದಲೇ ನಾಪೋಕ್ಲು ಸ್ಥಾನೀಯ ಸಮಿತಿಯ ವತಿಯಿಂದ ಚುನಾವಣಾಧಿಕಾರಿಗಳ ಬಳಿ ಅನುಮತಿ ಕೋರಲಾಗಿತ್ತು.

ಜಾಥಾ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಚುನಾವಣಾಧಿಕಾರಿಗಳು ಸಭಾ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಪಕ್ಷದ ಪ್ರಮುಖರೆಲ್ಲರೂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈ ಸಂದರ್ಭ ಮತ್ತೊಮ್ಮೆ ಚುನಾವಣಾಧಿಕಾರಿಗಳ ಅನುಮತಿ ಪಡೆಯಲು ಸುಮಾರು 2 ತಾಸಿಗೂ ಅಧಿಕ ಸಮಯ ಬೋಪಯ್ಯ ಸೇರಿದಂತೆ ಪ್ರಮುಖರು ಸಭಾ ಕಾರ್ಯಕ್ರಮಕ್ಕೆ ಕಾದು ಕುಳಿತ ಪ್ರಸಂಗವೂ ನಡೆಯಿತು.

ನೀತಿ ಸಂಹಿತೆ ಉಲ್ಲಂಘನೆ: ಸೂಚನೆ
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಶ್ರೀಮಂಗಲದ ಬಳಿ ದೇವಸ್ಥಾನದಲ್ಲಿ ಪಕ್ಷದ ಪ್ರಚಾರ ಸಭೆ ನಡೆಸಿದ್ದೇನೆಂದು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವವರು; ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸಭೆ ನಡೆಸಿದ್ದಾರೆ. ಅದು ನೀತಿ ಸಂಹಿತೆ ಉಲ್ಲಂಘನೆ ಅಲ್ಲವೇ? ಎಂದು ಬೋಪಯ್ಯ ಪ್ರಶ್ನಿಸಿದರು. ಈ ರೀತಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವವರ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವಂತೆ ಪಕ್ಷದ ಸ್ಥಾನೀಯ ಸಮಿತಿಯ ಪದಾಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.