ADVERTISEMENT

ಅವ್ಯವಹಾರ ನಡೆದಿಲ್ಲ; ತನಿಖೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 8:20 IST
Last Updated 12 ಏಪ್ರಿಲ್ 2012, 8:20 IST

ಸೋಮವಾರಪೇಟೆ: ಪಂಚಾಯಿತಿಯ ಕೆಲ ಸದಸ್ಯರು ಆರೋಪಿಸಿದಂತೆ ಪಂಚಾಯಿತಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ಲೋಕಾನಂದ್ ಹೇಳಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಧಿಕಾರದ ಆಸೆಯಿಂದ ಸದಸ್ಯ ಜಿ.ಧರ್ಮಪ್ಪ ವೃಥಾ ಆರೋಪ ಮಾಡಿದ್ದಾರೆ. ಕಳೆದ 20 ತಿಂಗಳ ಅವಧಿಯಲ್ಲಿ ನೇರುಗಳಲೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಭೆಗಳಿಗೆ ಧರ್ಮಪ್ಪ ಹಾಜರಾಗಿ ಸಭೆಯ ನಿರ್ಣಯಗಳಿಗೆ ಸಹಿ ಮಾಡಿದ್ದಾರೆ. ಮುಂದೆ ಅವ್ಯವಹಾರ ನಡೆದಿದೆ ಎಂದು ಸಾಬೀತಾದರೆ, ತನಿಖೆಗೆ ಅರ್ಜಿ ಸಲ್ಲಿಸಿರುವ ಸದಸ್ಯ ಧರ್ಮಪ್ಪ, ಉಪಾಧ್ಯಕ್ಷೆ ಉಷಾ ರವೀಂದ್ರ, ಸದಸ್ಯೆ ಕಮಲ ಸುರೇಶ್ ಕೂಡ ಹೊಣೆಯಾಗಬೇಕಾಗುತ್ತದೆ ಎಂದರು.

ಎಲ್ಲ ಜಾತಿ ಮತ್ತು ವರ್ಗದಲ್ಲಿಯೂ ಬಡವರಿರುತ್ತಾರೆ. ಫಲಾನುಭವಿಗಳು ನೀಡಿದ ಆರ್‌ಟಿಸಿಯಲ್ಲಿ ಎರಡು ಎಕರೆ ಜಾಗವಿದ್ದರೂ ನಾಲ್ಕೈದು ಮಂದಿಯ ಹೆಸರು ಆರ್‌ಟಿಸಿಯಲ್ಲಿರುತ್ತದೆ. ಅವರೆಲ್ಲರಿಗೂ ಆಸ್ತಿ ಪಾಲು ಮಾಡಿದರೆ, ತಲಾ 10ಸೆಂಟು ಜಾಗ ಬರುತ್ತದೆ. ಅಂತಹವರು ಬಸವ ವಸತಿ ಯೋಜನೆಯಲ್ಲಿ ಫಲಾನುಭವಿಗಳಾದರೆ ತಪ್ಪೇನಿಲ್ಲ ಎಂದು ನುಡಿದರು.

ಪಂಚಾಯಿತಿಯ ಹಾಲಿ ಸದಸ್ಯೆ ರಾಧರವಿ, ಕಳೆದ ಸಾಲಿನಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ಪಡೆಯಲು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ರಾಧರವಿಯವರು ಮನೆ ಪಡೆಯಲು ಅರ್ಹ ಫಲಾನುಭವಿ ಎಂಬ ದಾಖಲೆ ಪತ್ರಕ್ಕೆ ಇದೇ ಧರ್ಮಪ್ಪ ಸಾಕ್ಷಿ ಮತ್ತು ಸಹಿ ಹಾಕಿದ್ದಾರೆ. ಈಗ ರಾಧರವಿ ಮನೆ ನಿರ್ಮಿಸಿಕೊಂಡಿದ್ದು ಅಕ್ರಮ ಎಂದು ದೂರು ನೀಡಿದ್ದಾರೆ ಎಂದರು.

ಸದಸ್ಯ ಧರ್ಮಪ್ಪನವರು ಅತ್ತಿಗೆ ಹೆಸರಿನಲ್ಲಿ ಹಿಂದಿನ ಸಾಲಿನಲ್ಲಿ ಸರ್ಕಾರದ ಯೊಜನೆಯಲ್ಲಿ ಮನೆ ಪಡೆದುಕೊಂಡು, ಅದೇ ಮನೆಗೆ ಆರ್‌ಸಿಸಿ ಹಾಕಿಸಿಕೊಂಡು ವಾಸ ಮಾಡುತ್ತಿದ್ದಾರೆ. ಬೇರೆ ಫಲಾನುಭವಿಗಳು ಆರ್‌ಸಿಸಿ ಮನೆ, ಕಾಫಿ ತೋಟ ಮಾಡಿಕೊಂಡಿದ್ದಾರೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಧ್ಯಕ್ಷರು ಪ್ರಶ್ನಿಸಿದರು.

ಕರ್ಕಳ್ಳಿ ಲಾಹಿರಾ ಅಯೂಬ್ ಅವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದೆ. ಆದರೆ ಜಾಗದ ಹಕ್ಕು ಪತ್ರಗಳು ಕ್ರಮಬದ್ಧವಾಗಿಲ್ಲ. ಅವರ ಆರ್ಥಿಕ ಪರಿಸ್ಥಿತಿ ಏನೂ ಹಾಗೂ ಅವರಿಗೆ ಎಷ್ಟು ಮನೆಗಳಿಗೆ ಎಂಬ ಬಗ್ಗೆ ಲೋಕಾಯುಕ್ತರು ತನಿಖೆಗೆ ಬಂದಾಗ ಪೂರ್ಣ ವಿವರ ನೀಡುತ್ತೇವೆ ಎಂದು ಆ ವ್ಯಾಪ್ತಿಯ ಸದಸ್ಯ ಸೂರ್ಯಕುಮಾರ್ ಹೇಳಿದರು. ಗೋಷ್ಠಿಯಲ್ಲಿ ಲಲಿತಾ ಚಂದ್ರಪ್ಪ, ಕವಿತ ಪ್ರಕಾಶ್, ರಾಧರವಿ, ವನಜ ರವಿಶಂಕರ್, ಸುಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.