ADVERTISEMENT

ಆಕ್ರೋಶಕ್ಕೆ ಕಾರಣವಾದ ಫ್ಲೆಕ್ಸ್ ತೆರವು

ಪಿಡಿಒ ಕ್ರಮ ಖಂಡಿಸಿ ಪ್ರತಿಭಟನೆ, ನೌಕರನ ಮೇಲೆ ಹಲ್ಲೆ – ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 12:50 IST
Last Updated 29 ಮಾರ್ಚ್ 2018, 12:50 IST

ಸಿದ್ದಾಪುರ: ಚುನಾವಣಾ ನೀತಿ ಸಂಹಿತೆ ಜಾರಿ ಕಾರಣ ಕೊಂಡಂಗೇರಿ ಗ್ರಾಮದಲ್ಲಿ ಅಳವಡಿಸಿದ್ದ ಫ್ಲೆಕ್ಸ್ ತೆರವು ವಿಚಾರದಲ್ಲಿ ಸಿಬ್ಬಂದಿ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಬುಧವಾರ ಬೆಳಿಗ್ಗೆ ಫ್ಲೆಕ್ಸ್‌ ತೆರವು ಸಂದರ್ಭದಲ್ಲಿ ಹಾಲುಗುಂದ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಮಂಜುನಾಥ್‌ ಮೇಲೆ ಹಲ್ಲೆ ನಡೆದಿದೆ.

ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡಂಗೇರಿಯಲ್ಲಿ ಕಾರ್ಯಕ್ರಮವೊಂದಕ್ಕೆ ಶುಭ ಹಾರೈಸಿ ಅಳವಡಿಸಲಾಗಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೀಪಾ ಸೂಚನೆ ಮೇರೆಗೆ ತೆರವು ಮಾಡಲಾಗುತ್ತಿತ್ತು. ಆಗ ಸ್ಥಳೀಯರು ಬ್ಯಾನರ್‌ ತೆರವುಗೊಳಿಸದಂತೆ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಗ ಪರಸ್ಪರ ತಳ್ಳಾಟ ನಡೆದಾಗ ಮಂಜುನಾಥ್‌ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಯಿತು‘ಇದು ಖಾಸಗಿ ಕಾರ್ಯಕ್ರಮ. ಪೊಲೀಸರಿಂದ ಫ್ಲೆಕ್ಸ್‌ ಅಳವಡಿಸಲು ಅನುಮತಿ ಪಡೆದಿದ್ದೇವೆ. ಒಂದುದಿನದ ಕಾರ್ಯಕ್ರಮ ಮಾತ್ರ ಉಳಿದಿದೆ. ಅದಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದರೂ ಅಧಿಕಾರಿಗಳು ಫ್ಲೆಕ್ಸ್‌ ತೆರವು ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ADVERTISEMENT

ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದರು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.