ADVERTISEMENT

ಆಗಿರುವ ಅಭಿವೃದ್ಧಿ ಕೆಲಸ ಹತ್ತಾರು ಆಗಬೇಕಿರುವುದು ನೂರಾರು...

ಅಭಿವೃದ್ಧಿಯಿಂದ ದೂರ ಉಳಿದ ಸೋಮವಾರಪೇಟೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 12:46 IST
Last Updated 4 ಜೂನ್ 2018, 12:46 IST

ಸೋಮವಾರಪೇಟೆ: ಜಿಲ್ಲೆಯ ಮಡಿಕೇರಿ ಕ್ಷೇತ್ರಕ್ಕೆ ಒಳಪಟ್ಟಿರುವ ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿಯಿಂದ ಹಿಂದೆ ಉಳಿದಿದ್ದು, ಇಲ್ಲಿ ನೂರಾರು ಸಮಸ್ಯೆಗಳು ತಾಂಡವ ವಾಡುತ್ತಿವೆ. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿ ಹತ್ತಾರು, ಆಗಬೇಕಾಗಿರುವುದು ನೂರಾರು.

ತಾಲ್ಲೂಕು ಕೇಂದ್ರ ಸೋಮವಾರ ಪೇಟೆಯಲ್ಲಿ ಅಭಿವೃದ್ಧಿಯ ಕೊರತೆ ಕಾಡುತ್ತಿದೆ. ಯಾವುದೇ ನಿರೀಕ್ಷಿತ ಬೆಳವಣಿಗೆಯಾಗಿಲ್ಲ. ಜಿಲ್ಲೆಯನ್ನು ‘ದಕ್ಷಿಣ ಕಾಶ್ಮೀರ’ ಎಂದು ಕರೆಯಲಾಗಿದ್ದರೂ, ಪ್ರವಾಸೋದ್ಯಮಕ್ಕೆ ಬೇಕಾದ ಯಾವುದೇ ಪೂರಕ ಸೌಲಭ್ಯಗಳಿಲ್ಲ. ಗ್ರಾಮೀಣ ಭಾಗದ ರಸ್ತೆಗಳು ತೀರಾ ಹಾಳಾಗಿದ್ದು, ಕೆಲವೆಡೆ ಸಂಚರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸರಿಪಡಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡುವ ಬೆದರಿಕೆ ಚುನಾವಣೆಗೂ ಮುನ್ನ ಕೆಲವೆಡೆ ಗ್ರಾಮಸ್ಥರಿಂದ ಬಂದಿತ್ತು. ಆದರೂ, ಇದರತ್ತ ಯಾರೂ ಗಮನ ಹರಿಸಲಿಲ್ಲ. ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಗ್ರಾಮೀಣ ಭಾಗದಿಂದ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪರದಾಡಬೇಕಾದ ಸ್ಥಿತಿ ನಿರ್ಮಾಣ ವಾಗಲಿದೆ. ಇನ್ನು ಗಿರಿಜನ ಹಾಡಿಯಲ್ಲಿನ ಜನರ ಬದುಕು ಶೋಚನೀಯವಾಗಿದ್ದು, ಹೆಚ್ಚಿನವುಗಳು ಇನ್ನೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ.

ಸೋಮವಾರಪೇಟೆ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ವಿಲೇವಾರಿಗಾಗಿ ಸಂಗಯ್ಯನ ಪುರದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಎರಡು ಎಕರೆ ಜಾಗ ಖರೀದಿಸಿದ್ದು, ಕಾಂಪೌಂಡ್‌ ಸೇರಿದಂತೆ ಲಕ್ಷಾಂತರ ವೆಚ್ಚ ತೋರಿಸಿ ಕಾಮಗಾರಿ ಮಾಡಲಾಗಿದೆ. ಆದರೆ, ಇದರಲ್ಲಿ ರಾಜಕೀಯ ಅಡಕವಾಗಿದ್ದರಿಂದ ಮುಂದುವರೆಯಲಿಲ್ಲ. ಶಾಸಕರು ಬದ್ಧತೆ ಪ್ರದರ್ಶಿಸಲಿಲ್ಲ ಎಂಬುದು ನಗರವಾಸಿಗಳ ದೂರು. ಜಿಲ್ಲಾ ಮಟ್ಟದ ಅಧಿಕಾರಿಗಳೂ ಪ್ರಾರಂಭ ಮಾಡಿ, ಇಲಾಖೆ ವತಿಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡುವ ಭರವಸೆ ನೀಡಿದರೂ, ಗ್ರಾಮದ ಜನರಿಗೆ ಹೈ ಟೆಕ್‌ ತ್ಯಾಜ್ಯ ವಿಲೇವಾರಿಯ ಬಗ್ಗೆ ಮನವರಿಕೆ ಮಾಡಿಕೊಡುವುದಾಗಲಿ ಸ್ಥಳೀಯ ಆಡಳಿತವಾಗಲಿ, ಶಾಸಕರು ಮುಂದೆ ನಿಂತು ಯೋಜನೆ ಕಾರ್ಯರೂಪಕ್ಕೆ ತರುವುದಕ್ಕಾಗಲಿ ಮುಂದಾಗದಿರುವುದು ಶೋಚನೀಯ.

ADVERTISEMENT

ಸುಸಜ್ಜಿತ ಆಟದ ಮೈದಾನವಿಲ್ಲ

ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿದ ಹೆಮ್ಮೆ ಜಿಲ್ಲೆಗಿದೆ. ಆದರೆ, ತಾಲ್ಲೂಕು ಕೇಂದ್ರ ಸೋಮವಾರಪೇಟೆಯಲ್ಲಿ ಒಂದು ಸುಸಜ್ಜಿತ ಆಟದ ಮೈದಾನವಿಲ್ಲ. ಸ್ಥಳೀಯ ವಾಗಿ ಬಿ.ಪಿ. ಗೋವಿಂದ, ಅರ್ಜುನ್‌ ಹಾಲಪ್ಪ, ಎಸ್‌.ವಿ. ಸುನಿಲ್‌, ವಿಕ್ರಂ ಕಾಂತ್‌ರಂತಹ ಹಲವಾರು ಹಾಕಿ ಕ್ರೀಡಾಪಟು ಗಳು ಜಿಲ್ಲೆಯ ಹೆಸರನ್ನು ವಿದೇಶದಲ್ಲಿ ಪಸರಿಸಿದ್ದಾರೆ. ಸ್ಥಳೀಯ ಮೈದಾನವನ್ನು ಶಾಸಕ ಅಪ್ಪಚ್ಚು ರಂಜನ್‌ ಕ್ರೀಡಾ ಸಚಿವರಾದ ಸಂದರ್ಭ ₹ 4.80ಕೋಟಿ ವೆಚ್ಚದಲ್ಲಿ ಟರ್ಫ್‌ ಹಾಕುವ ಉದ್ದೇಶಕ್ಕೆ 6 ವರ್ಷಗಳ ಹಿಂದೆಯೇ ಮುಂದಾಗಿದ್ದರು. ಆದರೂ ಈವರೆಗೆ ಯೋಜನೆ ಪ್ರಾರಂಭವಾಗಿಲ್ಲ.

ಮೈದಾನದ ಪಕ್ಕದಲ್ಲಿ ಬ್ಯಾಸ್ಕೆಟ್‌ ಬಾಲ್‌ ಅಸೋಸಿಯೇಶನ್‌ ತಮ್ಮ ಸದಸ್ಯರಿಂದ ಚಂದಾ ಎತ್ತಿ ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣ ಮಾಡಿಕೊಂಡಿದ್ದ ಮೈದಾನಕ್ಕೆ ಟರ್ಫ್‌ ಹಾಕುವ ಉದ್ದೇಶದಿಂದ ಕಿತ್ತು ಹಾಕಲಾಗಿದೆ. ಕೇವಲ ಹಾಕಿ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಇಲ್ಲಿ ಟರ್ಫ್‌ ಹಾಕುವ ಕಾರ್ಯಕ್ಕೆ ಮುಂದಾಗಿದ್ದು, ಇದರಿಂದಾಗಿ ಹಲವು ಕ್ರೀಡೆಗಳಿಗೆ ನೆಲೆ ಇಲ್ಲದಂತಾಗಿರುವುದು ಕ್ರೀಡಾಪಟು ಗಳ ದೌರ್ಭಾಗ್ಯ ಎಂಬುದು ಸ್ಥಳೀಯರ ಅಂಬೋಣ. ‘ಪಟ್ಟಣದಲ್ಲಿ ಸೂಕ್ತ ಮೈದಾನದ ಕೊರತೆಯಿಂದ ನಮಗೆ ಆಟವಾಡಲು ತೊಂದರೆಯಾಗಿದ್ದು, ಮೈದಾನದ ಕಾಮಗಾರಿಯನ್ನು ಕೂಡಲೇ ಮುಗಿಸಿದಲ್ಲಿ ನಮ್ಮಂಥ ಹಲವು ವಿದ್ಯಾರ್ಥಿಗಳಿಗೆ ಅನುಕೂಲ ವಾಗುವುದು’ ಎಂದು ಹೇಳುತ್ತಾರೆ ಸ್ಥಳೀಯ ಜ್ಞಾನವಿಕಾಸ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಎಚ್.ವಿ. ಪೃಥ್ವಿರಾಜ್‌.

ಕಳೆದ 20 ವರ್ಷಗಳಿಂದ ತಾಲ್ಲೂಕಿ ನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂಬುದು ಜನಸಾಮಾನ್ಯರ ಆರೋಪ. ತಾಲ್ಲೂಕು ಕೇಂದ್ರವಾದರೂ ಇಲ್ಲಿ ಅಭಿವೃದ್ಧಿಯಾಗದೆ, ಜನಸಂಖ್ಯೆ ಗುಳೆಹೋಗುವ ಪರಿಸ್ಥಿತಿ ಇದೆ. ತಾಲ್ಲೂಕು ಕೇಂದ್ರದ ಅಭಿವೃದ್ಧಿಗಾಗಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೊ, ಕೈಗಾರಿಕಾ ತರಬೇತಿ ಸಂಸ್ಥೆಗಳು, ಉನ್ನತ ದರ್ಜೆಯ ಕಾಲೇಜುಗಳು, ಪ್ರವಾಸೋದ್ಯಮ ಸ್ಥಳಗಳಿಗೆ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ವ್ಯವಸ್ಥೆಯಾಗಬೇಕಿತ್ತು.

ಮಲ್ಲಳ್ಳಿ ಜಲಪಾತಕ್ಕೆ ತೂಗು ಸೇತುವೆ ಹಾಗೂ ಹೊನ್ನಮ್ಮನ ಕೆರೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ಕೇವಲ ಭರವಸೆಯಾಗಿಯೇ ಉಳಿದಿವೆ.

ಜನರಿಗೆ ಹೆಚ್ಚು ಉಪಯೋಗ ವಾಗುತ್ತಿದ್ದ ಶತಮಾನೋತ್ಸವ ಭವನ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಅಸ್ಥಿಪಂಜರದ ಹಾಗೆ ಉಳಿದಿದೆ. ಈಗಲಾದರೂ ಕ್ಷೇತ್ರದ ಶಾಸಕರು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ’ ಎಂದು ಪಟ್ಟಣದ ನಿವಾಸಿ ಪವಿತ್ರಾ ಹೇಳುತ್ತಾರೆ.

ಯಾವುದೇ ಸರ್ಕಾರ ಬಂದರೂ ದೇಶದ ಬೆನ್ನೆಲುಬಾದ ರೈತರ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಕ್ಷೇತ್ರದಲ್ಲಿ ಕಾಫಿ ಬೆಳೆಗಾರರು ತೀವ್ರ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಜಮ್ಮ ಭೂಮಿಯ ಸಮಸ್ಯೆ, ಸಿ ಮತ್ತು ಡಿ ದರ್ಜೆ ಭೂಮಿ ಸೇರಿದಂತೆ ಹೆಚ್ಚಿನ ಬೆಳೆಗಾರರಿಗೆ ಭೂ ದಾಖಲಾತಿ ಸಿಕ್ಕಿಲ್ಲ. ಕಾಫಿಗೆ ಉತ್ಪಾದನಾ ವೆಚ್ಚ ಕಳೆದು ಬೆಂಬಲ ಬೆಲೆ ನೀಡುವಂತೆ ಮನವಿ ಮಾಡಲಾಗಿತ್ತು. ಕಳೆದ ಚುನಾವಣೆಗೂ ಮುನ್ನ ಸಮಸ್ಯೆಯನ್ನು ಬಗೆಹರಿಸಲಾಗುವುದೆಂದು ಕ್ಷೇತ್ರದ ಶಾಸಕರು ಭರವಸೆ ನೀಡಿದ್ದರೂ ಪರಿಹಾರ ಕಾಣಲಿಲ್ಲ. ಇಲ್ಲಿ ಯಾವುದೇ ಗುರುತರ ಅಭಿವೃದ್ಧಿಯಾಗಿಲ್ಲ.

‘ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸೇರಿದಂತೆ ಹಲವು ಗುರುತರ ಸಮಸ್ಯೆಗಳಿವೆ. ಕೆಲವು ಗ್ರಾಮೀಣ ರಸ್ತೆಗಳೂ ಸಂಚರಿಸಲು ಯೋಗ್ಯವಾಗಿಲ್ಲ. ಮುಂದಿನ ದಿನಗಳಲ್ಲಾದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಕೃಷಿಕರ ಸಮಸ್ಯೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಯೋಜನೆಗಳು ಆಗುವುದೇ ಕಾದು ನೋಡಬೇಕಿದೆ’ ಎಂದರು ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್‌ ಬೋಪಣ್ಣ.

‘ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ರಸ್ತೆ, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್‌ ಸಮಸ್ಯೆ ಸೇರಿದಂತೆ ಮೂಲ ಸೌಕರ್ಯದ ಕೊರತೆ ಕಾಡುತ್ತಿದೆ. ಇವುಗಳನ್ನು ಹಂತ ಹಂತವಾಗಿ ಪರಿಹರಿಸಬಹುದಿತ್ತು. ಕ್ಷೇತ್ರದಲ್ಲಿ ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿಗಳು ಗುಣಮಟ್ಟದಿಂದಾಗು ತ್ತಿಲ್ಲ. ಹೆಚ್ಚಿನ ರಸ್ತೆಗಳು ಕಳಪೆಯಾಗಿದ್ದು, ಈಗಾಗಲೇ ಹಲವು ಕಿತ್ತುಹೋಗುತ್ತಿವೆ. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ನೆನಪಿಗಾಗಿ ಹಲವು ವರ್ಷಗಳ ಹಿಂದೆ ನಿರ್ಮಾಣ ಮಾಡಲು ಮುಂದಾಗಿದ್ದ ಶತ ಮಾನೋತ್ಸವ ಕಟ್ಟಡ ಹಾಗೇ ಉಳಿದಿದೆ. ನಾಲ್ಕು ವರ್ಷಗಳ ಹಿಂದೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬಹು ನಿರೀಕ್ಷಿತ ಹಾಕಿ ಟರ್ಫ್‌ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ, ಕಾಮಗಾರಿ ಪ್ರಾರಂಭಿಸಲಾಗಿಲ್ಲ’ ಎಂದು ವಕೀಲರಾದ ಬಿ.ಈ ಜಯೇಂದ್ರರ ಆರೋಪ ಮಾಡಿದರು.

ತಾಲ್ಲೂಕು ಕೇಂದ್ರ ಸೋಮವಾರ ಪೇಟೆ ಸೇರಿದಂತೆ ಇದಕ್ಕೆ ಒಳಪಡುವ ಹೆಚ್ಚಿನ ಸ್ಥಳಗಳೂ ಅಭಿವೃದ್ಧಿಯಿಂದ ಹಿಂದೆ ಬಿದ್ದಿದೆ. ಹಲವು ಸಮಸ್ಯೆಗಳ ನಡುವೆ ಜೀವನ ನಡೆಸುತ್ತಿರುವ ಗ್ರಾಮೀಣ ಭಾಗ ಸೇರಿದಂತೆ ತಾಲ್ಲೂಕು ಕೇಂದ್ರವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ 5ನೇ ಬಾರಿಗೆ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಅಪ್ಪಚ್ಚು ರಂಜನ್‌ರವರಿಗೆ ಸವಾಲಾಗಿದೆ.

ಪ್ರಾಮಾಣಿಕ ಪ್ರಯತ್ನ ನಡೆಸುವೆ...

ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಅಪ್ಪಚ್ಚು ರಂಜನ್‌ರವರಿಂದ ಮಾಹಿತಿ ಬಯಸಿದಾಗ, ‘ಮತದಾರರ ಆಶೀರ್ವಾದದಿಂದ 5 ಬಾರಿ ಶಾಸಕನಾಗಿ ಗೆಲುವು ಸಾಧಿಸಿದ್ದೇನೆ. ಬಿಜೆಪಿ ಸರ್ಕಾರ ಇದ್ದಾಗ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನಂತರ ಕಾಂಗ್ರೆಸ್ ಸರ್ಕಾರದ ಮಲತಾಯಿ ಧೋರಣೆಯಿಂದ ಅಭಿವೃದ್ಧಿ ಕಾರ್ಯಗಳು ನಡೆಸಲು ಸಾಧ್ಯವಾಗಲಿಲ್ಲ. ಮಡಿಕೇರಿ ವಿಧಾನ ಸಭಾಕ್ಷೇತ್ರ ದೊಡ್ಡ ಕ್ಷೇತ್ರವಾಗಿರುವುದರಿಂದ ಹಾಗೂ ಸೀಮಿತ ಅನುದಾನದಿಂದ ಗಮನಾರ್ಹ ಅಭಿವೃದ್ಧಿ ಸಾಧ್ಯವಾಗಿಲ್ಲ’ ಎಂದರು.

‘ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿ ಸಂಚರಿಸಿ ಸ್ಥಳೀಯ ಸಮಸ್ಯೆಗಳನ್ನು ಗಮನಿಸಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು’ ಎಂದರು.

– ಡಿ.ಪಿ. ಲೋಕೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.