ADVERTISEMENT

ಆಧಾರ್ ನೋಂದಣಿಗೆ ಸರ್ಕಾರದ ಬ್ರೇಕ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 6:10 IST
Last Updated 6 ಫೆಬ್ರುವರಿ 2012, 6:10 IST

ಮಡಿಕೇರಿ: ಸಾಕಷ್ಟು ಪ್ರಚಾರದಿಂದಲೇ ಆರಂಭಿಸಲಾಗಿದ್ದ `ಆಧಾರ್~ ಕಾರ್ಡ್ ನೋಂದಣಿ ಪ್ರಕ್ರಿಯೆಗೆ ಸರ್ಕಾರ ಬ್ರೇಕ್ ಹಾಕಿದ್ದು, ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೆಗ ಎಲ್ಲಿಯೂ ಆಧಾರ್ ಕಾರ್ಡ್ ನೋಂದಣಿ ಮಾಡಲಾಗುತ್ತಿಲ್ಲ.

ದೇಶದ ಪ್ರತಿಯೊಬ್ಬ ನಾಗರಿಕನಿಗೆ ಗುರುತಿನ ಚೀಟಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ `ಆಧಾರ್~ ಕಾರ್ಡ್ ನೋಂದಣಿ ಪ್ರಕ್ರಿಯೆ ಆರಂಭಿಸಿತ್ತು. ಇದಕ್ಕೆ ರಾಜ್ಯ ಸರ್ಕಾರದ ಇ-ಆಡಳಿತ ಕೂಡ ಕೈ ಜೋಡಿಸಿತ್ತು. ಅದರ ಪರಿಣಾಮವಾಗಿ ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ಕುಶಾಲನಗರ, ವಿರಾಜಪೇಟೆಯಲ್ಲಿ ನೋಂದಣಿ ಪ್ರಕ್ರಿಯೆ ಕಳೆದ ಆಗಸ್ಟ್‌ನಲ್ಲಿ ಆರಂಭವಾಗಿತ್ತು.

ಆದರೆ ಈಗ, ನೋಂದಣಿ ಪ್ರಕ್ರಿಯೆಯನ್ನು ತಡೆ ಹಿಡಿಯುವಂತೆ ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆಯು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಂದೇಶ ರವಾನಿಸಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಕೇವಲ 5 ತಿಂಗಳಿನಲ್ಲಿಯೇ ಅರ್ಧಕ್ಕೆ ನಿಂತು ಹೋಗಿರುವುದು ದುರದೃಷ್ಟಕರ.

ಇ-ಆಡಳಿತದ ಪ್ರಧಾನ ಕಾರ್ಯದರ್ಶಿ ಅವರು ಜಿಲ್ಲಾಧಿಕಾರಿಗಳಿಗೆ ರವಾನಿಸಿರುವ ಇ-ಮೇಲ್ ಪತ್ರ `ಪ್ರಜಾವಾಣಿ~ಗೆ ದೊರೆತಿದ್ದು, ಈ ಆದೇಶ ಪತ್ರದಲ್ಲಿ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತ ಗೊಳಿಸುವಂತೆ ಸೂಚಿಸಲಾಗಿದೆ.

ನಾಗರಿಕರಿಗೆ ಗುರುತಿನ ಚೀಟಿ ನೀಡುವ ಸಂಬಂಧ ಗೃಹ ಸಚಿವಾಲಯದ ಜತೆ ಭಿನ್ನಾಭಿ ಪ್ರಾಯ ಹೊಂದಿರುವ ಕಾರಣ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಫೆ.15ರಿಂದ ದೇಶದಾದ್ಯಂತ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಸರ್ಕಾರವನ್ನು ಕೋರಿದೆ. ಅದರ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸುವಂತೆ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಪುನಃ ಈ ಪ್ರಕ್ರಿಯೆಯನ್ನು ಯಾವಾಗ ಆರಂಭವಾಗುತ್ತದೆ ಎನ್ನುವುದರ ಬಗ್ಗೆಯೂ ಈ ಪತ್ರದಲ್ಲಿ ವಿವರಣೆ ಇಲ್ಲ.

ಜನರ ಪರದಾಟ
ಜಿಲ್ಲೆಯು ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಕಾರಣ ಹಾಗೂ ಹೆಚ್ಚಿನ ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕಾರಣ ಬಹುತೇಕ ಜನರು ಇದುವರೆಗೆ `ಆಧಾರ್~ ಕಾರ್ಡ್‌ಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ.

ಒಂದು ಅಂದಾಜಿನ ಪ್ರಕಾರ ಜಿಲ್ಲೆಯ ಒಟ್ಟು ಜನಸಂಖ್ಯೆ ಐದೂವರೆ ಲಕ್ಷ ಜನರಲ್ಲಿ ಶೇ 10ಕ್ಕಿಂತಲೂ ಕಡಿಮೆ ಜನರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

`ಆಧಾರ್~ ಬಗ್ಗೆ ಅಪಸ್ವರ
ದೇಶದ ಪ್ರತಿಯೊಬ್ಬರಿಗೆ ಗುರುತಿನ ಚೀಟಿ ನೀಡಲು ನಂದನ್ ನಿಲೇಕಣಿ ಅವರ ಅಧ್ಯಕ್ಷತೆಯಲ್ಲಿ ಯುಐಡಿಎಐ ಪ್ರಾಧಿಕಾರವನ್ನು ರಚಿಸಲಾಗಿತ್ತು. ಈ ಯೋಜನೆಗಾಗಿ ಸುಮಾರು ರೂ. 10 ಸಾವಿರ ಕೋಟಿ ನಿಗದಿಪಡಿಸಲಾಗಿತ್ತು.

ಆರಂಭದಿಂದಲೂ ಈ ಯೋಜನೆಗೆ ಹಲವೆಡೆ ಅಪಸ್ವರಗಳು ಕೇಳಿಬಂದಿದ್ದವು. ದೇಶದ ನಾಗರಿಕರಿಗೆ ಈಗಾಗಲೇ ಹಲವು ರೀತಿಯ ಗುರುತಿನ ಚೀಟಿಗಳಿವೆ. ಮತದಾರರ ಚೀಟಿ, ಪಡಿತರ ಚೀಟಿ, ವಾಹನ ಚಾಲನಾ ಪತ್ರ, ಇತರ ದಾಖಲೆಗಳಿದ್ದರೂ `ಆಧಾರ್~ ಕಾರ್ಡ್‌ನ ಅವಶ್ಯಕತೆ ಏನು? ಎಂದು ನಾಗರಿಕರು ಪ್ರಶ್ನಿಸಿದ್ದರು.

ಇಷ್ಟೊಂದು ಮೊತ್ತದ ಹಣವು ಪೋಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಈ ನಡುವೆ ಗೃಹ ಸಚಿವಾಲಯವು `ಆಧಾರ್~ ಕಾರ್ಡ್ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಕಾರಣ, ಈಗ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿರುವ ದೇಶದ 12 ರಾಜ್ಯಗಳಲ್ಲಿ (ಕರ್ನಾಟಕವೂ ಸೇರಿ) ಮಾತ್ರ `ಆಧಾರ್~ ಕಾರ್ಡ್ ವಿತರಿಸಲು ಯುಐಡಿಎಐಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಪುನಃ ಆಧಾರ್ ಕಾರ್ಡ್ ನೋಂದಣಿಗೆ ಯಾವ ಚಾಲನೆ ನೀಡಲಾಗುತ್ತದೆಯೋ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.