ಸೋಮವಾರಪೇಟೆ: ಸಮೀಪದ ಬೇಳೂರು ಗ್ರಾಮದ ಕಾಫಿತೋಟಕ್ಕೆ ಕಾಡಾನೆಗಳ ಹಿಂಡು ದಾಳಿ ನಡೆಸಿದ ಪರಿಣಾಮ ನೂರಾರು ಕಾಫಿಗಿಡಗಳು ಮತ್ತು ಬಾಳೆಗಿಡಗಳು ಧ್ವಂಸವಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಗ್ರಾಮದ ಹರ್ಷ ಎಂಬುವವರ ಕಾಫಿ ತೋಟಕ್ಕೆ ಶುಕ್ರವಾರ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು, ತೋಟದಲ್ಲಿದ್ದ ಕಾಫಿ ಗಿಡಗಳನ್ನು ಕಿತ್ತು ದಾಂಧಲೆ ಮಾಡಿವೆ. 100ಕ್ಕೂ ಹೆಚ್ಚಿನ ಕಾಫಿಗಿಡಗಳನ್ನು ಧ್ವಂಸಗೊಳಿಸಿದ್ದು, ಸನಿಹದಲ್ಲಿಯೇ ಇದ್ದ ಬಾಳೆ ತೋಟವನ್ನು ನೆಲಸಮ ಮಾಡಿದೆ. ತೋಟಕ್ಕೆ ಅಳವಡಿಸಿದ್ದ ಪೈಪ್‌ಲೈನ್‌ಗಳನ್ನು ಜಖಂಗೊಳಿಸಿದ್ದು ಸಾವಿರಾರು ರೂಪಾಯಿ ನಷ್ಟವಾಗಿದೆ.
ಶುಕ್ರವಾರ ರಾತ್ರಿ ಭಾರಿ ಮಳೆ ಸುರಿಯುತ್ತಿದ್ದ ಸಂದರ್ಭ ಕಾಡಾನೆಗಳ ಹಿಂಡು ತೋಟದೊಳಗೆ ಓಡಾಡಿವೆ. ತೋಟದಲ್ಲಿದ್ದ ಹಲಸಿನ ಹಣ್ಣು ತಿನ್ನಲು ಆನೆಗಳು ಆಗಮಿಸಿರಬಹುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ವ್ಯಾಪ್ತಿಯಲ್ಲಿ 20 ಕ್ಕೂ ಹೆಚ್ಚು ಕಾಡಾನೆಗಳು ಈ ಭಾಗದ ತೋಟಗಳಲ್ಲಿ ನಿರಂತರ ದಾಂಧಲೆ ನಡೆಸುತ್ತಿವೆ. ಕಾಡಾನೆಗಳಿಂದ ಅಪಾರ ಪ್ರಮಾಣದ ಆಸ್ತಿಪಾಸ್ತಿಯೊಂದಿಗೆ ಪ್ರಾಣ ಹಾನಿಯಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
`ಬೇಳೂರು ಗ್ರಾಮಕ್ಕೆ ಕಾಜೂರು ಅರಣ್ಯದಿಂದ ಕಾಡಾನೆ ಹಿಂಡು ಆಗಮಿ ಸಿದ್ದು, ಕೂಡಲೇ ಅವುಗಳನ್ನು ಕಾಡಿಗೆ ಅಟ್ಟಿ ಸೋಲಾರ್ ಬೇಲಿಯ ವ್ಯವಸ್ಥೆ ಸರಿಮಾಡಲಾಗುವುದು' ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯ ರಕ್ಷಕ ಗಣೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.