ADVERTISEMENT

ಉದ್ಘಾಟನೆಗೆ ಸಜ್ಜಾದ ಇಂದಿರಾ ಕ್ಯಾಂಟೀನ್‌

ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಕಾರ್ಮಿಕರಿಗೆ ಅನುಕೂಲ

ಅದಿತ್ಯ ಕೆ.ಎ.
Published 3 ಮಾರ್ಚ್ 2018, 8:37 IST
Last Updated 3 ಮಾರ್ಚ್ 2018, 8:37 IST
ಮಡಿಕೇರಿಯ ಇಂದಿರಾ ಕ್ಯಾಂಟೀನ್‌
ಮಡಿಕೇರಿಯ ಇಂದಿರಾ ಕ್ಯಾಂಟೀನ್‌   

ಮಡಿಕೇರಿ: ಕಡಿಮೆ ದುಡ್ಡಿನಲ್ಲಿ ಬಡವರು ಹಾಗೂ ಕಾರ್ಮಿಕರ ಹಸಿವು ನೀಗಿಸುವ ‘ಇಂದಿರಾ ಕ್ಯಾಂಟೀನ್’ ಉದ್ಘಾಟನೆಗೆ ಸಜ್ಜಾಗುತ್ತಿದೆ. ಕೊಡಗು ಜಿಲ್ಲೆಗೆ ಮಂಜೂರಾಗಿರುವ ಮೂರು ಕ್ಯಾಂಟೀನ್‌ಗಳಲ್ಲಿ ಮೊದಲನೇ ಕ್ಯಾಟೀನ್‌ ಮಡಿಕೇರಿಯ ನೂತನ ಖಾಸಗಿ ಬಸ್‌ ನಿಲ್ದಾಣ ಆವರಣದಲ್ಲಿ ತಲೆಯೆತ್ತಿದೆ.

ಕ್ಯಾಂಟೀನ್‌ಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಮುಂದಿನ ವಾರದ ಸೇವೆಗೆ ಲಭ್ಯವಾಗುವ ಮೂಲಕ ಹಸಿವು ನೀಗಿಸಲಿದೆ.
ಮತ್ತೊಂದೆಡೆ ನಗರದ ಹೃದಯ ಭಾಗದಲ್ಲಿದ್ದ ಖಾಸಗಿ ಬಸ್‌ ನಿಲ್ದಾಣ ಸ್ಥಳಾಂತರಿಸುವ ಕಾಮಗಾರಿಯೂ ವೇಗ ಪಡೆದುಕೊಂಡಿದೆ. ಅದಕ್ಕೂ ಮೊದಲೇ ಇಂದಿರಾ ಕ್ಯಾಂಟೀನ್‌ ಉದ್ಘಾಟಿಸಲು ನಗರಸಭೆ ಮುಂದಾಗಿದೆ.

ನಿಲ್ದಾಣ ಸ್ಥಳಾಂತರವಾದ ಬಳಿಕ ರೇಸ್‌ ಕೋರ್ಸ್‌ ರಸ್ತೆಯು ಜನದಟ್ಟಣೆಯಿಂದ ಕೂಡಿರಲಿದೆ. ಅದೇ ಆವರಣದಲ್ಲಿ ಕ್ಯಾಂಟೀನ್‌ ಸಹ ನಿರ್ಮಿಸುತ್ತಿರುವುದು ಸಾರ್ವಜ ನಿಕರಿಗೆ ಅನುಕೂಲವಾಗಲಿದೆ ಎಂಬ ಪ್ರಶಂಸನೀಯ ಮಾತು ವ್ಯಕ್ತವಾಗುತ್ತಿವೆ.
ರೇಸ್‌ ಕೋರ್ಸ್‌ ರಸ್ತೆಗೆ ಹೊಂದಿ
ಕೊಂಡಂತೆ ಸುಂದರ ಕ್ಯಾಂಟೀನ್‌ಯಿದೆ. ಒಂದು ಬದಿಯ ಕಾಂಪೌಂಡ್‌ ತೆರವು ಗೊಳಿಸಿ, ಪ್ರವೇಶದ್ವಾರ ನಿರ್ಮಿಸ ಲಾಗಿದೆ. ವಾಹನದಲ್ಲಿ ಬರುವರಿಗೆ, ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಗಮನದಲ್ಲಿ ಇಟ್ಟುಕೊಂಡು ಕ್ಯಾಂಟೀನ್‌ನಲ್ಲಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಕಾಡಿದ್ದ ಜಾಗದ ಸಮಸ್ಯೆ: ಇದಕ್ಕೂ ಮೊದಲು ಇಂದಿರಾ ಕ್ಯಾಂಟೀನ್‌ಗೆ ಜಾಗದ ಸಮಸ್ಯೆ ಕಾಡಿತ್ತು. ಪ್ರಧಾನ ಅಂಚೆ ಕಚೇರಿ ಎದುರಿನ ಹಾಪ್‌ಕಾಪ್ಸ್‌ಗೆ ಸೇರಿದ್ದ ಜಾಗ ಬಿಟ್ಟುಕೊಡುವಂತೆ ನಗರಸಭೆಯ ಕಾಂಗ್ರೆಸ್ ಸದಸ್ಯರು ಮನವಿ ಮಾಡಿದ್ದರು.

ಅದಕ್ಕೆ ಹಾಪ್‌ಕಾಪ್ಸ್‌ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು. ಜಿಲ್ಲಾಡಳಿತ ಬಲವಂತದಿಂದ ಜಾಗ ಪಡೆದುಕೊಂಡರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿತ್ತು. ಬಳಿಕ ಅದನ್ನು ಕೈಬಿಟ್ಟು ಓಂಕಾರೇಶ್ವರ ದೇವಸ್ಥಾನದ ಬಳಿ ಜಾಗ ಗುರುತಿಸಲಾಗಿತ್ತು.

ಅಲ್ಲಿ ಜನಸಂಚಾರ ವಿರಳ ಎಂಬ ಕಾರಣಕ್ಕೆ ಹಿಂದೆ ಸರಿಯಲಾಯಿತು. ಕೊನೆಗೆ ಖಾಸಗಿ ಬಸ್‌ ನಿಲ್ದಾಣ ಜಾಗವೇ ಸೂಕ್ತವೆಂಬ ನಿರ್ಧಾರಕ್ಕೆ ಬರಲಾಗಿತ್ತು.

ಅತ್ಯಾಧುನಿಕ ತಂತ್ರಜ್ಞಾನ: ಜನವರಿ 23ರಂದು ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಪ್ರಿಕಾಸ್ಟ್ ಕನ್‌ಸ್ಟ್ರಕ್ಷನ್ ತಂತ್ರಜ್ಞಾನ ಬಳಸಿ ಬೇರೆಡೆ ಅಗತ್ಯ ನಿರ್ಮಾಣ ಸಾಮಗ್ರಿ ಸಿದ್ಧಪಡಿಸಿ ತಂದು ಕಟ್ಟಲಾಗಿದೆ. ಆದ್ದರಿಂದ ಬಹುಬೇಗ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಾಗಿದೆ. ರಾಜ್ಯದ ಎಲ್ಲೆಡೆ ಒಂದೇ ಮಾದರಿ ಕ್ಯಾಂಟೀನ್‌ ನಿರ್ಮಿಸಿದ್ದು, ಗೋಡೆ ಗಳು ಆಕರ್ಷಣೀಯವಾಗಿವೆ. ಒಳಾಂಗಣ, ಹೊರಾಂಗಣಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಫೆ. 28ರಂದೇ ಉದ್ಘಾಟನೆ ನಡೆಯ ಬೇಕಿತ್ತು. ಕಾರಣಾಂತರಗಳಿಂದ ಮುಂದೂಡ ಲಾಗಿದೆ ಎನ್ನುತ್ತಾರೆ ಅಧಿಕಾರಿಗಳು .

ಕ್ಯಾಂಟೀನ್‌ನಲ್ಲಿ ಏನೇನು?: ಕ್ಯಾಂಟೀನ್‌ಗೆ ಅಂದಾಜು ₹ 32 ಲಕ್ಷ ವೆಚ್ಚವಾಗಿದೆ. ಎರಡು ಶೌಚಾಲಯ, ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲಿದೆ. ಜತೆಗೆ, ಊಟದ ಹಾಲ್‌, ಹೊರಾಂಗಣ, ಅಡುಗೆ ಮನೆ, ಟೇಬಲ್‌ ಸೌಲಭ್ಯವಿದೆ.
***
ಯಾವ ವಾರ ಏನು ತಿಂಡಿ, ಊಟ?

ಮಡಿಕೇರಿ: ವಾರದ ಏಳು ದಿವಸವೂ ಕ್ಯಾಂಟೀನ್‌ನಲ್ಲಿ ತಿಂಡಿ ಹಾಗೂ ಊಟ ಲಭ್ಯವಿರಲಿದೆ. ಪ್ರತಿನಿತ್ಯ ಎಷ್ಟು ಮಂದಿಗೆ ತಿಂಡಿ, ಊಟದ ವ್ಯವಸ್ಥೆಯಿರುತ್ತದೆ ಎಂಬುದು ಇನ್ನೂ ಅಂತಿಮವಾಗಿಲ್ಲ.

ಬೆಳಿಗ್ಗೆಯ ತಿಂಡಿಗೆ ₹ 5 ನಿಗದಿ ಪಡಿಸಲಾಗಿದೆ. ಸೋಮವಾರ ಇಡ್ಲಿ ಅಥವಾ ಪುಳಿಯೊಗರೆ, ಮಂಗಳವಾರ ಇಡ್ಲಿ – ಖಾರಾಬಾತ್‌, ಬುಧವಾರ ಇಡ್ಲಿ – ಪೊಂಗಲ್‌, ಗುರುವಾರ ಇಡ್ಲಿ – ರವೆ ಕಿಚಡಿ, ಶುಕ್ರವಾರ ಇಡ್ಲಿ– ಚಿತ್ರನ್ನ, ಶನಿವಾರ ಇಡ್ಲಿ ಅಥವಾ ವಾಂಗಿಬಾತ್‌, ಇಡ್ಲಿ– ಖಾರಾಬಾತ್‌ ಹಾಗೂ ಕೇಸರಿ ಬಾತ್‌ (ಪ್ರತಿ ದಿನ ಇವುಗಳಲ್ಲಿ ಯಾವುದಾದರೂ ಒಂದು). ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ₹ 10 ನಿಗದಿ ಪಡಿಸಲಾಗಿದೆ.

ಅನ್ನ, ಸಾಂಬಾರು ಹಾಗೂ ಮೊಸರನ್ನ, ಟೊಮೆಟೊ ಬಾತ್‌, ಚಿತ್ರನ್ನ, ವಾಂಗಿಬಾತ್‌, ಬಿಸಿಬೇಳೆಬಾತ್‌, ಮೆಂತ್ಯೆಪಲಾವ್‌, ಪುಳಿಯೊಗರೆ, ಪಲಾವ್‌... ಇವುಗಳಲ್ಲಿ ಯಾವುದಾದರು ಒಂದು ಬಗೆಯ ಊಟವು ಮಧ್ಯಾಹ್ನ ಹಾಗೂ ರಾತ್ರಿಗೆ ಲಭ್ಯವಿರುತ್ತದೆ.
**
ಕಟ್ಟಡ ನಿರ್ಮಾಣದ ಜವಾಬ್ದಾರಿ ಮಾತ್ರ ನಗರಸಭೆಗೆ ಸೇರಿತ್ತು. ಅದು ಬಹುತೇಕ ಪೂರ್ಣಗೊಂಡಿದೆ. ಆಹಾರ ಪೂರೈಕೆ ಟೆಂಡರ್‌ ಅನ್ನು ಜಿಲ್ಲಾಧಿಕಾರಿ ಅವರು ಅಂತಿಮಗೊಳಿಸಲಿದ್ದಾರೆ.
– ಬಿ.ಶುಭಾ, ಪೌರಾಯುಕ್ತೆ, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.