ADVERTISEMENT

ಏಕೈಕ ಮಹಿಳಾ ಕಲ್ಯಾಣ ಕೇಂದ್ರ ಬಂದ್

ಎಸ್.ರವಿ.
Published 1 ಜುಲೈ 2013, 6:08 IST
Last Updated 1 ಜುಲೈ 2013, 6:08 IST
ಕೊಡಗು ಜಿಲ್ಲೆಯ ಕುಶಾಲನಗರದ ಕಾಳಮ್ಮ ಕಾಲೊನಿಯಲ್ಲಿದ್ದ ಶಿಶುವಿಹಾರ ಮುಚ್ಚಿರುವುದು.
ಕೊಡಗು ಜಿಲ್ಲೆಯ ಕುಶಾಲನಗರದ ಕಾಳಮ್ಮ ಕಾಲೊನಿಯಲ್ಲಿದ್ದ ಶಿಶುವಿಹಾರ ಮುಚ್ಚಿರುವುದು.   

ಕುಶಾಲನಗರ: ಅರವತ್ತು ವರ್ಷಗಳಿಂದ ಇಲ್ಲಿನ ಕಾಳಮ್ಮ ಕಾಲೊನಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿದ್ದ ಏಕೈಕ ಮಹಿಳಾ ಕಲ್ಯಾಣ ಕೇಂದ್ರ ಮುಚ್ಚಿದೆ. ಇದರೊಂದಿಗೆ ರಾಜ್ಯದಲ್ಲಿ ಮಹಿಳಾ ಕಲ್ಯಾಣ ಕೇಂದ್ರಗಳು ಕಣ್ಮರೆಯಾದಂತಾಗಿವೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿದ್ದ ಮಹಿಳಾ ಕಲ್ಯಾಣ ಕೇಂದ್ರಗಳು ಈಗಾಗಲೇ ಮುಚ್ಚಿವೆ. ಆದರೆ, ಇಲ್ಲಿದ್ದ ಕೇಂದ್ರ ಮಾತ್ರ ಮಕ್ಕಳ ಪೋಷಣೆಯಲ್ಲಿ ನಿರತವಾಗಿತ್ತು. ಇದೂ ಜೂನ್ ತಿಂಗಳಿನಿಂದ ಮುಚ್ಚಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಧ್ಯೇಯದೊಂದಿಗೆ 60 ವರ್ಷಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯದಾದ್ಯಂತ ಮಹಿಳಾ ಕೇಂದ್ರಗಳನ್ನು ಸ್ಥಾಪಿಸಲಾಯಿತು. ನಂತರದ ದಿನಗಳಲ್ಲಿ ಅವುಗಳು `ಶಿಶುವಿಹಾರ'ಗಳಾಗಿ ಮಾರ್ಪಾಡಾದವು. ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು ಆರಂಭವಾದ ನಂತರ ಶಿಶುವಿಹಾರಗಳು ಅವನತಿಯತ್ತ ಸಾಗಿದವು.

ಇಲ್ಲಿನ ಶಿಶುವಿಹಾರವು ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡು ಉತ್ತಮವಾಗಿ ನಡೆಯುತ್ತಿತ್ತು. ಟೌನ್ ಕಾಲೊನಿ, ಬೈಚನಹಳ್ಳಿ ಕಾಲೊನಿ ಮತ್ತು ಕಾಳಮ್ಮ ಕಾಲೊನಿ ಸೇರಿದಂತೆ ಇತರೆ ಬಡಾವಣೆಗಳ ಮಕ್ಕಳು ಕಲಿಯುತ್ತಿದ್ದರು. ಹಿಂದಿನ ವರ್ಷ 10ರಿಂದ 15 ಮಕ್ಕಳಿದ್ದರು.

ಮಕ್ಕಳಿಗೆ ಪೌಷ್ಟಿಕ ಆಹಾರ, ಗರ್ಭಿಣಿಯರಿಗೆ ಚಿಕಿತ್ಸೆ, ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಹಾಗೂ ಇತರೆ ಸೇವೆಗಳನ್ನು ಇತ್ತೀಚಿನ ವರ್ಷಗಳಲ್ಲಿ ಅಂಗನವಾಡಿ ಕೇಂದ್ರಗಳೇ ನಿರ್ವಹಿಸುತ್ತಿವೆ. ಹೀಗಾಗಿ, ರಾಜ್ಯದಲ್ಲಿದ್ದ ಮಹಿಳಾ ಕಲ್ಯಾಣ ಕೇಂದ್ರಗಳನ್ನು ಮುಚ್ಚಲಾಯಿತು. ಆದರೆ, ಇಲ್ಲಿನ ಕಾಳಮ್ಮ ಕಾಲೊನಿಯಲ್ಲಿದ್ದ ಕೇಂದ್ರ ಮಾತ್ರ ರಾಜ್ಯದ ಏಕೈಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಈಗ ಇದು ಮುಚ್ಚುವುದರೊಂದಿಗೆ ರಾಜ್ಯದಲ್ಲಿ ಮಹಿಳಾ ಕಲ್ಯಾಣ ಕೇಂದ್ರಗಳು ಕಣ್ಮರೆಯಾದಂತಾಗಿದೆ.

ಮುಚ್ಚಿರುವ ಶಿಶುವಿಹಾರ ಕಟ್ಟಡದಲ್ಲೇ ಅಂಗನವಾಡಿ ಕೇಂದ್ರ ತೆರೆಯಲು ಅಧಿಕಾರಿಗಳು ಚಿಂತಿಸಿದ್ದಾರೆ. ಮತ್ತೊಂದೆಡೆ, ಇದರ ಜಾಗದಲ್ಲಿ ಸಮುದಾಯ ಭವನ ನಿರ್ಮಿಸುವ ಹುನ್ನಾರ ಆರಂಭವಾಗಿದೆ.

ನೌಕರರ ಜಗಳ ಕಾರಣ
2 ವರ್ಷಗಳಿಂದ ಶಿಶುವಿಹಾರಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು. ಹೀಗಾಗಿ, ಇಲ್ಲಿನ ನೌಕರರಿಬ್ಬರು ವಾರಕ್ಕೊಬ್ಬರಂತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಆದರೆ, ಹಾಜರಾತಿ ವಹಿಯಲ್ಲಿ ಸಹಿ ಹಾಕುವ ವಿಷಯದಲ್ಲಿ ಜಗಳ ಮಾಡಿಕೊಂಡು ಸಂಬಂಧಿಸಿದ ಇಲಾಖೆಗೆ ಪತ್ರ ಬರೆದರು. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ವಿಷಯ ತಿಳಿದು ಶಿಶುವಿಹಾರ ಮುಚ್ಚಲಾಗಿದೆ.
-ನಾರಾಯಣ, ಯುವ ಜನಪರ ಚಿಂತನಾ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.